ಎರಡನೇ ಬೆಳೆಗೆ ನೀರಿಲ್ಲ: ಮುಂದಿನ ಮುಂಗಾರುವರೆಗೂ ಭತ್ತದ ಮೇವಿಲ್ಲ
ಕೊಪ್ಪಳ : ಪ್ರತಿವರ್ಷ ಎರಡು ಬೆಳೆಯಾಗಿ ಭತ್ತ ಬೆಳೆದಾಗ ಹೊರ ಜಿಲ್ಲೆಗಳ ಜಾನುವಾರುಗಳಿಗೆ ಉಚಿತವಾಗಿ ಮೇವು ಸಾಗಿಸಲು ಅವಕಾಶ ನೀಡುತ್ತಿದ್ದ ರೈತರು, ಈ ಬಾರಿ ಸ್ವಂತ ಜಾನುವಾರುಗಳ ರಕ್ಷಣೆಗಾಗಿ ಆರಂಭಿಕ ಹಂತದಲ್ಲಿಯೇ ಮೇವು ದಾಸ್ತಾನಿಗೆ ಮುಂದಾಗಿದ್ದಾರೆ.
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳ ದುರಸ್ತಿ ಹಿನ್ನೆಲೆಯಲ್ಲಿ ಬೇಸಿಗೆ ಬೆಳೆಗೆ ನೀರು ಹರಿಸದಿರಲು ಐಸಿಸಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಹಿನ್ನೆ ಲೆಯಲ್ಲಿ 2ನೇ ಬೆಳೆಗೆ ನೀರಿಲ್ಲವೆಂದು ತಿಳಿದ ರೈತರು, ಹೊಲದಲ್ಲಿರುವ ಭತ್ತದ ಕೊಯ್ದು ಚುರುಕುಗೊಳಿಸುವ ಜತೆಗೆ, ಮೇವು ಜೋಪಾನವಾಗಿ ರಕ್ಷಿಸುವ ಕಾರ್ಯಕ್ಕೂ ಒತ್ತು ನೀಡುತ್ತಿದ್ದಾರೆ.
ತುಂಗಭದ್ರಾ ನದಿ ಪಾತ್ರದಲ್ಲಿ ಬಹುತೇಕ ಭತ್ತ ಕೊಯ್ದಾಗಿದ್ದು, ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಕೊಯ್ದು ಕಾರ್ಯ ಇನ್ನೂ ಬಾಕಿ ಇದೆ. ಈ ನಡುವೆ ಮನೆಯಲ್ಲಿ ಸಾಕಣೆ ಮಾಡುವ ಆಕಳು, ಎಮ್ಮೆಗಳಿಗೆ ಮೇವಿನ ಅವಶ್ಯ ಇರುವುದರಿಂದ ಭತ್ತದ ಮೇವನ್ನು ಟ್ರ್ಯಾಕ್ಟರ್, ಜೀಪ್, ಆಟೊಗಳಲ್ಲಿ ಸಾಗಿಸುತ್ತಿರುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಮೇವಿಗೆ ಹೆಚ್ಚಿದ ಬೇಡಿಕೆ: ಕನಕಗಿರಿ, ಕುಷ್ಟಗಿ, ತಾವರಗೇರಾ ಸಹಿತ ಖುಷಿ ಭೂಮಿ ಇರುವ ಕಡೆಗಳಲ್ಲಿ ಭತ್ತದ ಮೇವಿಗೆ ಬೇಡಿಕೆ ಇದೆ. ಹೀಗಾಗಿ ಭತ್ತ ಕೊಯ್ದು ಮಾಡುತ್ತಿದ್ದಂತೆಯೇ ವಾಹನ ತಂದು ಮೇವು ಕೊಂಡೊಯ್ಯಲಾಗುತ್ತಿದೆ. ಭತ್ತ ಕೊಯ್ಯುವ ಹಂತದಲ್ಲಿಯೇ ಮೇವನ್ನು ಶೇಖರಿಸಿ ಇಟ್ಟರೆ, ಮುಂದೆ ಸಮಸ್ಯೆಯಾಗದು ಎಂಬುದು ರೈತರ ಅಭಿಪ್ರಾಯವಾಗಿದೆ.
ಮೇವು ಖರೀದಿ: ತಾಲೂಕಿನ ಬಸರಿಹಾಳ, ಜಿರಾಳ, ಕನಕಪುರ, ನವಲಿ, ಹನುಮಾನಾಳ, ಗೌರಿಪುರ,ಮಲ್ಲಾಪುರ, ಲಾಯದುಣಸಿ, ವರನಖೇಡಾ, ಗೋಡಿನಾಳ ಹಾಕೊಳಕುಂಪಿ, ಹೊಸಗುಡ್ಡ ಕಟ್ಟಾಪುರ ನೀರಲು ನೀರಲೂಟಿ, ರಾಂಪುರ,ನಾಗಲಾಪುರ, ಮುಸಲಾಪುರ, ಇಂಗಳದಾಳ, ಕನ್ಯರಮಡುಗು ಗ್ರಾಮದ ರೈತರು ಮೇವು ಖರೀದಿಗೆ ದಿನ ನಿತ್ಯ ಬೆಳಗಿನ ಜಾವ ಹೋಗಿ ಟ್ರ್ಯಾಕ್ಟರ್ ಮೂಲಕ ಸಾವಿರಾರು ರೂಪಾಯಿಯನ್ನು ನೀಡಿ ಮೇವನ್ನು ಜಮಾ ಮಾಡಿಕೊಳ್ಳುತ್ತಿದ್ದಾರೆ.
ಬೇಸಿಗೆ ಬೆಳೆಗೆ ನೀರು ಹರಿಸುತ್ತಿಲ್ಲ. ಜಾನುವಾರು ಸಾಕಣೆದಾರರು ಭತ್ತ ಕೊಯ್ದು ಮಾಡುತ್ತಿದ್ದಂತೆಯೇ ವಾಹನ ತಂದು ಮೇವನ್ನು ಕೊಂಡೊಯ್ಯುತ್ತಿದ್ದಾರೆ. ಮುಂದಿನ ಮುಂಗಾರು ಬೆಳೆವರೆಗೂ ಮೇವನ್ನು ಜೋಪಾನವಾಗಿ ಶೇಖರಿಸಿ ಇಡಬೇಕು. ಇಲ್ಲವಾದರೆ ಜಾನುವಾರುಗಳಿಗೆ ಆಹಾರದ ಸಮಸ್ಯೆಯಾಗಲಿದೆ.
- ನಾಗರಾಜ ಇದ್ಲಾಪುರ, ರೈತ ಮಲ್ಲಾಪುರ