×
Ad

ಈದ್ ಉಲ್ ಫಿತರ್: ಉಡುಪಿ ಜಿಲ್ಲೆಯಲ್ಲಿ ಎ.10 (ಇಂದು) ಸರಕಾರಿ ರಜೆ ಘೋಷಣೆ

Update: 2024-04-10 09:36 IST

ಉಡುಪಿ ಡಿಸಿ ಡಾ. ವಿದ್ಯಾಕುಮಾರಿ

ಉಡುಪಿ: ಜಿಲ್ಲೆಯಲ್ಲಿ ಈದ್ ಉಲ್ ಫಿತರ್ (ರಂಝಾನ್) ಹಬ್ಬದ ಸಾರ್ವತ್ರಿಕ ರಜೆಯನ್ನು ಎ.11ರ ಬದಲಾಗಿ ಎ.10ರಂದು‌ ಘೋಷಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ರಾಜ್ಯ ಸರಕಾರದ ಅಧಿಕೃತ ಈದ್ ರಜೆಯನ್ನು ಬುಧವಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಜಿಲ್ಲಾಧಿಕಾರಿಗೆ ಮನವಿ ಮಾಡಿತ್ತು. ಬಳಿಕ ಸ್ಪೀಕರ್ ಯು ಟಿ ಖಾದರ್ ಅವರೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಮಾತಾಡಿ ಪರಿಶೀಲಿಸಲು ಸೂಚಿಸಿದ್ದರು.

ಆನಂತರ ಉಡುಪಿ ಜಿಲ್ಲೆಗೆ ಅನ್ವಯಿಸುವಂತೆ ರಂಝಾನ್ ಹಬ್ಬದ ರಜೆಯನ್ನು ಜಿಲ್ಲಾಧಿಕಾರಿಗಳು ಸ್ಥಳೀಯ ಪರಿಸ್ಥಿತಿಗಳಿಗನುಸಾರವಾಗಿ ಎ.10ರಂದು ಸಾರ್ವತ್ರಿಕ ರಜೆ ಘೋಷಿಸಲು ತಮ್ಮ ಹಂತದಲ್ಲಿಯೇ ನಿಯಮಾನುಸಾರ ತೀರ್ಮಾನ ತೆಗೆದುಕೊಳ್ಳುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ (ರಾಜ್ಯ ಶಿಷ್ಟಾಚಾರ) ವಿಜಯ್‌ ಕುಮಾರ್ ಎಚ್ ಬಿ ಆದೇಶದಲ್ಲಿ ಉಡುಪಿ ಜಿಲ್ಲಾಧಿಕಾರಿಗಳಿಗೆ ನಿರ್ದೇಶಿಸಿದ್ದರು.

ಅದರಂತೆ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ ರಂಝಾನ್ ಹಬ್ಬಕ್ಕೆ ಸಂಬಂಧಿಸಿ ಜಿಲ್ಲೆಯಲ್ಲಿ ಎ.9ರಂದು ಚಂದ್ರದರ್ಶನವಾಗಿರುವುದರಿಂದ ಉಡುಪಿ ಜಿಲ್ಲೆಯಲ್ಲಿ ರಂಝಾನ್ ಹಬ್ಬದ ಎ.11ರ ರಜೆಯನ್ನು ರದ್ದುಗೊಳಿಸಿ ಎ.10ರ ಬುಧವಾರರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.

ಇದು ಎ.10ರಂದು ಪೂರ್ವ ನಿಯೋಜಿತಗೊಂಡಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅದೇ ರೀತಿ ಎ.11ರ ಗುರುವಾರರಂದು ಕರ್ತವ್ಯದ ದಿನವೆಂದು ಪರಿಗಣಿಸಲು ಆದೇಶದಲ್ಲಿ ಸೂಚಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News