ʼರೋಚಕತೆʼ ಪಡೆದುಕೊಂಡ ವಿಜಯ್ ಹಝಾರೆ ಟ್ರೋಫಿ; ರೋಹಿತ್–ಕೊಹ್ಲಿ ಶತಕದ ಮಿಂಚು
ವೇಗದ ಶತಕ ಬಾರಿಸಿದ ಇಶಾನ್ ಕಿಶನ್
ರೋಹಿತ್ ಶರ್ಮಾ , ವಿರಾಟ್ ಕೊಹ್ಲಿ | Photo Credit ; PTI
ಬೆಂಗಳೂರು, ಡಿ.24: ವಿಜಯ್ ಹಝಾರೆ ಟ್ರೋಫಿಯಲ್ಲಿ ಬುಧವಾರ ನಡೆದ ಪಂದ್ಯಗಳಲ್ಲಿ ಭಾರತದ ಅನುಭವಿ ಬ್ಯಾಟರ್ ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಶತಕಗಳ ಮೂಲಕ ಗಮನ ಸೆಳೆದರು. ದೀರ್ಘ ವಿರಾಮದ ಬಳಿಕ ದೇಶೀಯ ಏಕದಿನ ಕ್ರಿಕೆಟ್ಗೆ ಮರಳಿದ ಇಬ್ಬರೂ ಆಟಗಾರರು ತಮ್ಮ ತಂಡಗಳನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಜೈಪುರದಲ್ಲಿ ನಡೆದ ಎಲೈಟ್ ಗುಂಪು–ಸಿ ಪಂದ್ಯದಲ್ಲಿ ಸಿಕ್ಕಿಂ ವಿರುದ್ಧ ಮುಂಬೈ ತಂಡದ ಪರ ರೋಹಿತ್ ಶರ್ಮಾ 94 ಎಸೆತಗಳಲ್ಲಿ 155 ರನ್ಗಳ ಅಬ್ಬರದ ಇನಿಂಗ್ಸ್ ಆಡಿದರು. 237 ರನ್ಗಳ ಬೆನ್ನತ್ತಿದ ಮುಂಬೈ 30.3 ಓವರ್ ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ ಗುರಿ ಮುಟ್ಟಿತು. ಏಳು ವರ್ಷಗಳ ಬಳಿಕ ವಿಜಯ್ ಹಝಾರೆ ಟ್ರೋಫಿಯಲ್ಲಿ ಕಾಣಿಸಿಕೊಂಡ ರೋಹಿತ್, ಈ ಪ್ರದರ್ಶನಕ್ಕಾಗಿ ‘ಪಂದ್ಯಶ್ರೇಷ್ಠ’ ಗೌರವಕ್ಕೆ ಪಾತ್ರರಾದರು.
ಇತ್ತ, ಎಲೈಟ್ ಗುಂಪು–ಡಿ ಪಂದ್ಯದಲ್ಲಿ ಆಂಧ್ರಪ್ರದೇಶ ವಿರುದ್ಧ ದಿಲ್ಲಿ ತಂಡದ ಪರ ಆಡಿದ ವಿರಾಟ್ ಕೊಹ್ಲಿ, 83 ಎಸೆತಗಳಲ್ಲಿ ಶತಕ ಸಿಡಿಸಿ 299 ರನ್ಗಳ ಗುರಿ ಬೆನ್ನಟ್ಟುವಲ್ಲಿ ಮುನ್ನಡೆಸಿದರು. ಈ ಇನಿಂಗ್ಸ್ ಮೂಲಕ ಕೊಹ್ಲಿ ಲಿಸ್ಟ್–ಎ ಕ್ರಿಕೆಟ್ ನಲ್ಲಿ 16 ಸಾವಿರ ರನ್ಗಳ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರರಾಗಿರುವ ಅವರು, ಸಚಿನ್ ತೆಂಡೂಲ್ಕರ್ ನಂತರ ಈ ಗೌರವ ಪಡೆದಿದ್ದಾರೆ. ಲಿಸ್ಟ್–ಎ ಕ್ರಿಕೆಟ್ನಲ್ಲಿ ಈ ಮೈಲಿಗಲ್ಲು ದಾಟಿದ ಒಂಭತ್ತನೇ ಆಟಗಾರ ಎಂಬ ದಾಖಲೆಯೂ ಅವರದಾಗಿದೆ.
2010–11 ಋತುವಿನ ಬಳಿಕ ಮೊದಲ ಬಾರಿ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡುತ್ತಿರುವ ಕೊಹ್ಲಿ, ದಶಕದ ವಿರಾಮದ ನಂತರದ ತಮ್ಮ ಪುನರಾಗಮನದಲ್ಲಿ ದಿಲ್ಲಿ ತಂಡದ ಅಭಿಯಾನಕ್ಕೆ ಭರವಸೆಯ ಆರಂಭ ನೀಡಿದ್ದಾರೆ.
ಅಹಮದಾಬಾದ್ ನಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಜಾರ್ಖಂಡ್ ಪರ ಕಣಕ್ಕಿಳಿದ ವಿಕೆಟ್ ಕೀಪರ್–ಬ್ಯಾಟರ್ ಇಶಾನ್ ಕಿಶನ್, ಕರ್ನಾಟಕ ತಂಡದ ವಿರುದ್ಧ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ಇದು ಲಿಸ್ಟ್–ಎ ಕ್ರಿಕೆಟ್ನಲ್ಲಿ ಭಾರತೀಯ ಆಟಗಾರನೊಬ್ಬ ದಾಖಲಿಸಿದ ಎರಡನೇ ಅತಿ ವೇಗದ ಶತಕವಾಗಿದ್ದು, ಬಿಹಾರ ನಾಯಕ ಸಕಿಬುಲ್ ಗನಿ ಅವರ 32 ಎಸೆತಗಳ ಶತಕದ ದಾಖಲೆಗೆ ಕೇವಲ ಒಂದು ಎಸೆತದ ಅಂತರದಲ್ಲಿದೆ.
ಶತಕಗಳ ಮಿಂಚು ಮತ್ತು ದಾಖಲೆಗಳೊಂದಿಗೆ ವಿಜಯ್ ಹಝಾರೆ ಟ್ರೋಫಿಯ ಪಂದ್ಯಗಳು ರೋಚಕತೆಯ ತುದಿಗೆ ತಲುಪಿವೆ.