×
Ad

ಬೆಂಗಳೂರು ಅಭಿವೃದ್ಧಿಗೆ ಸಮಿತಿ ರಚನೆ, 6 ತಿಂಗಳಲ್ಲಿ ಮಾಸ್ಟರ್ ಪ್ಲಾನ್ ಸಿದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್

Update: 2023-06-17 23:37 IST

ಬೆಂಗಳೂರು, ಜೂ.17: ‘ಅಧಿಕಾರಿಗಳು ಹಾಗೂ ಬೆಂಗಳೂರಿನ ಪ್ರಮುಖರನ್ನು ಸೇರಿ ಒಂದು ಸಮಿತಿ ರಚಿಸಿ, ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಶನಿವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಂಗಳೂರು ಸರ್ವತೋಮುಖ ಪ್ರಗತಿಗೆ ಸಲಹೆ, ಅಭಿಪ್ರಾಯ ಆಲಿಸಲು ವಿವಿಧ ಕ್ಷೇತ್ರಗಳ ಗಣ್ಯರನ್ನು ಒಳಗೊಂಡ ‘ಬ್ರ್ಯಾಂಡ್ ಬೆಂಗಳೂರು’ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಬೆಂಗಳೂರಿಗೆ ಹೊಸ ರೂಪ ನೀಡಿ, ಸಮಗ್ರ ಅಭಿವೃದ್ಧಿ, ಬ್ರ್ಯಾಂಡ್ ಬೆಂಗಳೂರು ಕುರಿತು ಬೆಂಗಳೂರಿನ 42 ಪ್ರಮುಖ ವ್ಯಕ್ತಿಗಳ ಜತೆ ಇಂದು ಸಭೆ ಮಾಡಲಾಗಿದೆ. ಇದು ಮೊದಲ ಹಂತದ ಸಭೆ. ಈ ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆ ಬಂದಿದೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ ಎಂದು ಅವರು ಹೇಳಿದರು.

ಮೊದಲು ಎಲ್ಲ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ, ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು ಎಂದು ಶಿವಕುಮಾರ್ ತಿಳಿಸಿದರು.

ಇಂದು ಸಭೆಗೆ ಬಂದವರು ತಮ್ಮ ಸ್ವಾರ್ಥ ಬಿಟ್ಟು, ಸಮಾಜಕ್ಕೆ ತಮ್ಮ ಕೊಡುಗೆ ನೀಡಲು ಸರಕಾರದ ಜತೆ ಕೈ ಜೋಡಿಸಿ ಸಲಹೆ ನೀಡಿದ್ದಾರೆ. ಅನೇಕ ಗಣ್ಯರು ತಮ್ಮ ವೈಯಕ್ತಿಕ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಮಾಡುವುದಾಗಿಯೂ ಹೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ಹೈಡೆನ್ಸಿಟಿ ಕಾರಿಡಾರ್, ಕಸ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ಉತ್ತಮ ಗುಣಮಟ್ಟದ ಶಿಕ್ಷಣ, ಕೊಳಗೇರಿ ಪ್ರದೇಶ ಅಭಿವೃದ್ಧಿ, ರಸ್ತೆ ಅಗಲೀಕರಣ ಕುರಿತು ಸಲಹೆಗಳು ಬಂದಿವೆ ಎಂದು ಅವರು ತಿಳಿಸಿದರು.

ಎಲಿವೇಟೆಡ್ ರಸ್ತೆ, ಮೈಸೂರು ರಸ್ತೆ, ಸಿಲ್ಕ್‍ಬೋರ್ಡ್, ತುಮಕೂರು ರಸ್ತೆ, ಹೆಬ್ಬಾಳ, ಕೆ.ಆರ್.ಪುರ ಸೇರಿದಂತೆ 20 ಪ್ರಮುಖ ಜಕ್ಷನ್ ರಸ್ತೆಗಳ ಬಗ್ಗೆ ಗಮನ, ನೈಸ್ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ಪಾದಚಾರಿ ಮಾರ್ಗ ಸುಧಾರಣೆ, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣ, ಕೆಲವು ಪ್ರದೇಶ 24/7 ತೆರೆಯಲು, ವಾಹನ ನಿಲುಗಡೆ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಅನೇಕ ಸಲಹೆ ನೀಡಿದ್ದಾರೆ ಎಂದು ಶಿವಕುಮಾರ್ ಹೇಳಿದರು.

ನಮ್ಮ ಆರ್ಥಿಕತೆ ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಬೆಂಗಳೂರಿನ ಸ್ವಾಭಿಮಾನ, ಗೌರವ ಉಳಿಸಲು ಸಲಹೆ ಕೇಳಿದ್ದೇನೆ. ನಾನು ಕೆಲವು ಸಲಹೆ ಒಪ್ಪುತ್ತೇನೆ. ಎಲ್ಲರೂ ನಮಗೆ ಸಲಹೆ ನೀಡಿದ್ದಾರೆ. ಯಲಹಂಕ ಹಾಗೂ ಕೆಂಗೇರಿ ಬಳಿಕ ಯಾವುದೆ ಉಪನಗರಗಳು ನಿರ್ಮಾಣವಾಗಿಲ್ಲ. ಆದುದರಿಂದ, ಬೆಂಗಳೂರು ನಗರದ ಗಡಿ ಭಾಗಗಳಲ್ಲಿ ಉಪನಗರ(ಸ್ಯಾಟಲೈಟ್ ಟೌನ್)ಗಳನ್ನು ನಿರ್ಮಾಣ ಮಾಡಬೇಕು. ಇದರಿಂದ, ಬೆಂಗಳೂರಿನ ಮೇಲೆ ಆಗುತ್ತಿರುವ ಒತ್ತಡ ನಿವಾರಿಸಬಹುದು ಎಂದು ಕೆಲವರು ಹೇಳಿದ್ದಾರೆ ಎಂದು ಅವರು ತಿಳಿಸಿದರು.

ಫೆರಿಫೆರಲ್ ರಿಂಗ್ ರಸ್ತೆ ಜಾರಿಗೆ ಒತ್ತು ನೀಡಲಾಗುವುದು. ಬೆಂಗಳೂರು ಯೋಜಿತ ನಗರ ಅಲ್ಲ. ಒಂದೇ ದಿನದಲ್ಲಿ ಬದಲಾವಣೆ ಸಾಧ್ಯವಿಲ್ಲ. ಎಲ್ಲರ ಕಷ್ಟಪಟ್ಟು ಉಳಿಸಿಕೊಂಡಿರುವ ಆಸ್ತಿ ಬಗ್ಗೆ ಗೌರವಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಹಾಗೂ 2 ಮತ್ತು 3ನೇ ದರ್ಜೆ ನಗರಗಳ ಬಗ್ಗೆ ಗಮನಹರಿಸಿ ಬೆಂಗಳೂರಿನ ಮೇಲಿನ ಒತ್ತಡ ಇಳಿಸಬೇಕಿದೆ ಎಂದು ಶಿವಕುಮಾರ್ ಹೇಳಿದರು.

ಗಣ್ಯರ ಅಭಿಪ್ರಾಯ ಸಂಗ್ರಹದ ಬಳಿಕ ಒಂದು ವೆಬ್‍ಸೈಟ್ ರಚನೆ ಮಾಡಿ ಸಾರ್ವಜನಿಕರಿಂದಲೂ ಬೆಂಗಳೂರು ಸಮಗ್ರ ಅಭಿವೃದ್ಧಿ ವಿಚಾರದಲ್ಲಿ ಸಲಹೆಗಳನ್ನು ಪಡೆಯಲಾಗುವುದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಚರ್ಚೆ ಆಗಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಅನೇಕ ವರ್ಗ, ಸಂಘ ಸಂಸ್ಥೆಗಳ ಪ್ರಮುಖರ ಜೊತೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅವರು ಈ ಬಗ್ಗೆ ಸಲಹೆ ನೀಡಿದ್ದು, ನಾನು ಸಾರ್ವಜನಿಕ ಅಭಿಪ್ರಾಯ ಪಡೆದು ನಂತರ ಸರಕಾರದ ವತಿಯಿಂದ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಹೊಸ ವಿಮಾನ ನಿಲ್ದಾಣ ಮಾಡುವ ಪ್ರಸ್ತಾವದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ದೇವನಹಳ್ಳಿಯಲ್ಲಿ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಿದಾಗ ನಾವು ನಿರ್ದಿಷ್ಟ ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವುದಿಲ್ಲ ಎಂಬ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ ಎಂದರು. 

ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಉದ್ಯಮಿಗಳಾದ ಆರ್.ಕೆ.ಮಿಶ್ರಾ, ಇರ್ಫಾನ್ ರಝಾಕ್, ಕಿರಣ್ ಮಜುಂದಾರ್ ಶಾ, ಪ್ರಶಾಂತ್, ಗೀತಾಂಜಲಿ ಕಿರ್ಲೊಸ್ಕರ್, ಡಾ.ಮಧುಕರ್ ಕಾಮತ್, ಎಂ.ಆರ್.ಜೈಶಂಕರ್, ರಾಜಾ ಬಾಗ್ಮನೆ, ಉಲ್ಲಾಸ್ ಕಾಮತ್, ಅರುಣ್ ಚಿಟ್ಟಿಲಾಪಿಲ್ಲಿ, ಕ್ರಿಕೆಟಿಗ ಬ್ರಿಜೇಶ್ ಪಟೇಲ್, ರಾಜ್ಯಸಭೆ ಸದಸ್ಯ ಜಿ.ಸಿ.ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಸ್.ಪಾಟೀಲ್, ಸಿದ್ದಯ್ಯ, ರವಿಚಂದ್ರ ಮತ್ತಿತರರು ಭಾಗವಹಿಸಿದ್ದರು.

  • ಕಾಗದದಲ್ಲೇ ಉಳಿದಿರುವ ಉಪನಗರ ರೈಲು: ಬೆಂಗಳೂರಿನ ಸಂಚಾರ ದಟ್ಟಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಆರಂಭಿಸಲು ಉದ್ದೇಶಿಸಿರುವ ಉಪನಗರ ರೈಲು(ಸಬ್‍ಅರ್ಬನ್ ರೈಲು)ಯೋಜನೆ ಇನ್ನೂ ಕಾಗದದಲ್ಲೆ ಉಳಿದಿದೆ. ಯೋಜನೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವುದರಿಂದ ಆರ್ಥಿಕ ಹೊರೆಯು ಕಡಿಮೆಯಾಗುತ್ತದೆ. ಅಲ್ಲದೆ, ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ’

-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News