×
Ad

ವಾರಕ್ಕೆ ನಾಲ್ಕು ದಿನಗಳ ಕಾಲ 12 ಗಂಟೆ ಕೆಲಸ ಮಾಡಿದರೆ, ಮೂರು ದಿನ ರಜೆ!

ಕೇಂದ್ರ ಸರಕಾರದಿಂದ ಹೊಸ ಕಾರ್ಮಿಕ ನಿಯಮ; ಭಾರತದಲ್ಲಿ ಇದು ಸಾಧ್ಯವೇ?

Update: 2025-12-16 19:48 IST

Photo  Credit : indiatoday

ಕೇಂದ್ರ ಸರ್ಕಾರ 29 ಹಳೇ ಕಾರ್ಮಿಕ ನಿಯಮಗಳನ್ನು ತೆಗೆದು ಹಾಕಿ ನಾಲ್ಕು ಹೊಸ ಸಂಹಿತೆಯನ್ನು ತಂದಿದೆ. ವಾರಕ್ಕೆ ನಾಲ್ಕು ದಿನಗಳ ಕಾಲ 12 ಗಂಟೆ ಕೆಲಸ ಮಾಡಿ 3 ದಿನ ಪೂರ್ಣ ವಾರದ ಕೆಲಸಕ್ಕೆ ವೇತನ ಪಡೆಯುವ ಅವಕಾಶ ಭಾರತೀಯರಿಗೆ ದೊರೆತಿದೆ. ಆದರೆ ನಿಜಕ್ಕೂ ಭಾರತೀಯರಿಗೆ ಇಂತಹ ಅವಕಾಶ ಸಿಗಲಿದೆಯೆ?

ಭಾರತದಲ್ಲಿ ಇನ್ನು ಮುಂದೆ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರೂ ಒಪ್ಪಿಕೊಂಡಲ್ಲಿ ನಾಲ್ಕು ದಿನಗಳ ಕಾಲ 12 ಗಂಟೆ ಕೆಲಸ ಮಾಡಿ 3 ದಿನ ಪೂರ್ಣ ವಾರದ ರಜಾ ಪಡೆಯಬಹುದು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ‘ಎಕ್ಸ್’ (ಈ ಹಿಂದೆ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ನೀಡಿರುವ ಸ್ಪಷ್ಟನೆಯ ಪ್ರಕಾರ, “ಹೊಸ ನಿಯಮಗಳಲ್ಲಿ ಕಾರ್ಮಿಕರು 12 ಗಂಟೆ ಕೆಲಸ ಮಾಡಲು ಅವಕಾಶ ಕೊಡಲಾಗಿದೆ ಎನ್ನುವುದು ತಪ್ಪು ನಂಬಿಕೆ. ಬದಲಾಗಿ 12 ಗಂಟೆಗಳ ಕಾರ್ಯಾವಧಿ ನೀಡಿದರೆ ವಾರಕ್ಕೆ 4 ದಿನಗಳ ಕಾಲ ಕೆಲಸ ಮಾಡಿ ಮೂರು ದಿನ ರಜಾ ಕೊಡಬೇಕಾಗುತ್ತದೆ. 12 ಗಂಟೆಯ ಕಾರ್ಯಾವಧಿಯಲ್ಲಿ ಸಾಕಷ್ಟು ಬಿಡುವು ಇರಬೇಕು ಮತ್ತು ಸಡಿಲಿಕೆ ಇರಬೇಕು. ವಾರದ ಕಾರ್ಯಾವಧಿ 48 ಗಂಟೆಗಳಿಗೆ ಸ್ಥಿರವಾಗಿರುತ್ತದೆ. ಅದನ್ನು ಮೀರಿದರೆ ಓವರ್ಟೈಮ್ ವೇತನ ಕೊಡಬೇಕಾಗುತ್ತದೆ. ಆ ಓವರ್ಟೈಮ್ ವೇತನವು ಉದ್ಯೋಗಿಯ ವೇತನದ ದರದ ದುಪ್ಪಟ್ಟಾಗಿರುತ್ತದೆ.”

ಉದ್ಯೋಗದಾತರು ಮತ್ತು ಉದ್ಯೋಗಿಗಳು ಇಬ್ಬರಿಗೂ ಈ ಬಗ್ಗೆ ಒಪ್ಪಿಗೆ ಇದ್ದಲ್ಲಿ ಮಾತ್ರ ಈ ನಿಯಮವನ್ನು ಜಾರಿಗೆ ತರಬಹುದಾಗಿದೆ. ಕಾರ್ಮಿಕರು ಮತ್ತು ಕಂಪೆನಿಗಳು ತಮ್ಮ ಕೆಲಸದ ಅವಧಿಯನ್ನು ಹೆಚ್ಚು ಸಡಿಲಿಕೆಯ ಮೂಲಕ ನಿರ್ಧರಿಸಿಕೊಳ್ಳುವಂತಿರಬೇಕು ಎನ್ನುವ ಉದ್ದೇಶದಿಂದ ಹೊಸ ನಿಯಮವನ್ನು ತರಲಾಗಿದೆ ಎಂದು ಸಚಿವಾಲಯ ಹೇಳಿದೆ.

►12 ಗಂಟೆಗಳ ಕೆಲಸ ಶ್ರಮದಾಯಕ

ಆದರೆ ಉದ್ಯೋಗಿಗಳು ಇದು ಬಹಳ ಆಯಾಸ ತರಿಸುವ ತ್ರಾಸದಾಯಕ ಕೆಲಸದ ವಾತಾವರಣವನ್ನು ಸೃಷ್ಟಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಲಾಜಿಸ್ಟಿಕ್ ಕ್ಷೇತ್ರದಲ್ಲಿ ಹಿರಿಯ ವ್ಯವಸ್ಥಾಪಕರಾದ ಕಿಶನ್ ಅವರ ಪ್ರಕಾರ, “ಇದು ಉತ್ತಮ ಆಯ್ಕೆಯಲ್ಲ. ದಿನಕ್ಕೆ 9 ಗಂಟೆಗಳು ಮತ್ತು ವಾರಕ್ಕೆ ಐದು ದಿನಗಳ ಕೆಲಸದ ನಂತರ ಶನಿವಾರ ಮತ್ತು ರವಿವಾರ ರಜೆ ಇದ್ದರೆ ವೃತ್ತಿಜೀವನ ಮತ್ತು ಕುಟುಂಬ ಎರಡರ ಸಮತೋಲನ ಸಾಧ್ಯವಾಗಲಿದೆ. 12 ಗಂಟೆಗಳಷ್ಟು ದೀರ್ಘ ಕಾಲ ಒಂದೆಡೆ ಕೂತು ನಿರಂತರ ಕೆಲಸ ಮಾಡುವುದು ಆರೋಗ್ಯಕ್ಕೂ ಉತ್ತಮವಲ್ಲ.”

12 ಗಂಟೆಗಳ ದೀರ್ಘಕಾಲ ಕೆಲಸ ಮಾಡುವುದು ದೈಹಿಕವಾಗಿ ಬಹಳ ಶ್ರಮದಾಯಕವೂ ಹೌದು ಮತ್ತು ಭಾರತದಲ್ಲಿ ಇದನ್ನು ಕಾರ್ಯರೂಪಕ್ಕೆ ತರುವುದು ಸುಲಭವಲ್ಲ. ಬಹಳಷ್ಟು ಮಂದಿಯ ಪ್ರಕಾರ ಈ ನಿಯಮವನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಿಲ್ಲ.

►ನಿಯಮ ಅನುಷ್ಠಾನ ಸಾಧ್ಯವಿಲ್ಲ

ನಾಲ್ಕು ದಿನಗಳಲ್ಲಿ 12 ಗಂಟೆಗಳ ದೀರ್ಘ ಕೆಲಸ ಮತ್ತು ಮೂರು ದಿನ ರಜಾ ರೀತಿಯ ನಿಯಮವನ್ನು ಭಾರತದಂತಹ ದೇಶಗಳಲ್ಲಿ ಅನ್ವಯಿಸುವುದು ಸುಲಭವಲ್ಲ ಎನ್ನುತ್ತಾರೆ ಮುಂಬೈಯಲ್ಲಿ ಕನ್ಸ್ಟ್ರಕ್ಷನ್ ಕ್ಷೇತ್ರದಲ್ಲಿ ಗ್ರಾಹಕ ಸೇವಾ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ವಿ ಸುಮ. “ಪ್ರಾಯೋಗಿಕವಾಗಿ ಇದು ಅಸಾಧ್ಯ. ನಾವು 12 ಗಂಟೆಗಳ ಕಾಲ ಕೆಲಸ ಮಾಡಿದರೂ 3 ದಿನಗಳ ವೇತನಸಹಿತ ರಜಾ ಪಡೆಯಲು ಸಾಧ್ಯವಿಲ್ಲ. ಯಾವಾಗಲೂ ಏನಾದರೂ ತುರ್ತು ಕೆಲಸಗಳು ಇರುತ್ತವೆ. ಇದೀಗ ನನಗೆ ಶನಿವಾರ ರಜಾ ಇದ್ದರೂ, ಮನೆಯಿಂದ ಕಚೇರಿಯ ಕೆಲಸ ಮಾಡುತ್ತಿರುತ್ತೇನೆ” ಎನ್ನುತ್ತಾರೆ ಸುಮ.

►ಆರೋಗ್ಯಕ್ಕೆ ಅಪಾಯಕಾರಿ

ತಮಿಳುನಾಡಿನಲ್ಲಿ ಐಟಿ ವೃತ್ತಿಪರೆಯಾಗಿರುವ ಗೋಮತಿಯವರ ಪ್ರಕಾರ ಇಂತಹ ಕಾರ್ಯಾವಧಿ ಅಪಾಯಕಾರಿ. “12 ಗಂಟೆಗಳ ಕಾಲ ಕೆಲಸ ಮಾಡುವುದು ಬಹಳ ಅಪಾಯಕಾರಿ. ಅಷ್ಟು ದೀರ್ಘ ಕಾಲ ಕೆಲಸ ಸಾಧ್ಯವೇ ಇಲ್ಲ. ಬೆಳಿಗ್ಗೆ 7ರಿಂದ ಸಂಜೆ 9ರವರೆಗೆ ನಡುವೆ ವಿರಾಮವಿದ್ದರೂ ಕೆಲಸ ಮಾಡುವುದು ಊಹಿಸಲು ಸಾಧ್ಯವಿಲ್ಲ. ಆರೋಗ್ಯಕ್ಕೆ ಅಪಾಯಕಾರಿ” ಎಂದು ಅವರು ಅಭಿಪ್ರಾಯಪಟ್ಟರು.

ದಿಲ್ಲಿಯಲ್ಲಿ ಬರಹಗಾರ್ತಿಯಾಗಿ ಕೆಲಸ ಮಾಡುತ್ತಿರುವ ರೂಪಾಲಿ ಅವರ ಪ್ರಕಾರ, ದಿನಕ್ಕೆ 8 ಗಂಟೆಯ ಕೆಲಸ ಸಾಕಾಗುತ್ತದೆ. ಅದಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. “5 ದಿನಗಳ ಕೆಲಸ ಮತ್ತು ಎರಡು ದಿನ ರಜಾ ನಿಯಮ ನನಗೆ ಸೂಕ್ತ ಎನಿಸುತ್ತದೆ. ನಾನೀಗ 6 ದಿನಗಳ ಕಾಲ ಕೆಲಸ ಮಾಡಿ ಒಂದು ದಿನ ರಜಾ ಪಡೆಯುತ್ತಿದ್ದೇನೆ. ಎಂಟು ಗಂಟೆಗಳಿಗೆ ಮೀರಿ ಕೆಲಸ ಮಾಡುವುದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು” ಎಂದು ಅವರು ಹೇಳಿದರು.

►ಸಂತೃಪ್ತ ದೇಶ ಫಿನ್ಲ್ಯಾಂಡ್ನಲ್ಲಿ ಕಾರ್ಯಾವಧಿ ಹೇಗಿದೆ?

ಸಂತೃಪ್ತ ಸೂಚ್ಯಂಕದಲ್ಲಿ ಪ್ರತಿ ವರ್ಷ ಪ್ರಥಮ ಸ್ಥಾನ ಬರುವ ಫಿನ್ಲ್ಯಾಂಡ್ನಲ್ಲಿ ದಿನಕ್ಕೆ 7.5 ಮತ್ತು ವಾರಕ್ಕೆ 37.5ರಷ್ಟು ಕೆಲಸ ಮಾಡಬೇಕಾಗುತ್ತದೆ. ಇಲ್ಲಿ ವೃತ್ತಿ ಮತ್ತು ಕುಟುಂಬದ ಸಮತೋಲನದ ಬಗ್ಗೆ ಜನರು ಹೆಚ್ಚು ಗಮನ ಕೊಡುತ್ತಾರೆ.

ಪಿನ್ಲ್ಯಾಂಡ್ನಲ್ಲಿ 20 ವರ್ಷಗಳಿಂದ ನೆಲೆಸಿರುವ ಸಾಫ್ಟ್ವೇರ್ ವೃತ್ತಿಪರರಾದ ವೀಣಾ ಪೆರುವಾಜೆ ಅವರು ಅಭಿಪ್ರಾಯಪಡುವ ಪ್ರಕಾರ, 12 ಗಂಟೆ ಕೆಲಸ ಮಾಡುವುದು ಬಹಳ ಆಯಾಸದಾಯಕವಾಗಿರಲಿದೆ. “ಕೆಲವೊಮ್ಮೆ ಹೆಚ್ಚು ಕೆಲಸ ಮಾಡಬಹುದು ಮತ್ತು ಇನ್ನು ಕೆಲವೊಮ್ಮೆ ಕಡಿಮೆ. ಅಂತಹ ಸಡಿಲಿಕೆ ಈ ದೇಶದಲ್ಲಿದೆ. ನಾವು ದಿನಕ್ಕೆ 7.5ಕ್ಕಿಂತ ಹೆಚ್ಚು ಅವಧಿಗೆ ಕೆಲಸ ಮಾಡಿದಲ್ಲಿ ನಂತರದ ದಿನಗಳಲ್ಲಿ ಕಡಿಮೆ ಕೆಲಸ ಮಾಡಬಹುದು. ಕೆಲವೊಮ್ಮೆ ರಜಾ ತೆಗೆದುಕೊಂಡು ನಂತರದ ದಿನಗಳಲ್ಲಿ ಆ ಅವಧಿಯನ್ನು ಪೂರ್ಣಗೊಳಿಸಬಹುದು. ನಮ್ಮ ಸಂಸ್ಥೆಯಲ್ಲಿ ಒಬ್ಬ ವ್ಯಕ್ತಿ 90 ದಿನಗಳ ಹೆಚ್ಚುವರಿ ಗಂಟೆಗಳ ಕೆಲಸ ಮಾಡಿದ್ದರು. ಹೀಗಾಗಿ ಅವರು 3 ತಿಂಗಳು ರಜಾ ತೆಗೆದುಕೊಂಡಿದ್ದರು. ಇಂತಹ ಸಡಿಲಿಕೆ ನಿಯಮಗಳು ನಮ್ಮಲ್ಲಿವೆ” ಎನ್ನುತ್ತಾರೆ ವೀಣಾ.

►ನಿಯಮ ಉತ್ತಮ, ಭಾರತದಲ್ಲಿ ಕಾರ್ಯಸಾಧುವಲ್ಲ

ಬೆಂಗಳೂರಿನಲ್ಲಿ ಸಾಫ್ಟ್ವೇರ್ ಅಭಿವೃದ್ಧಿ ಕ್ಷೇತ್ರದಲ್ಲಿ ಉಪಾಧ್ಯಕ್ಷರಾಗಿ (ಎಂಜಿನಿಯರಿಂಗ್ ಲೀಡರ್) ಕೆಲಸ ನಿರ್ವಹಿಸುತ್ತಿರುವ ಪ್ರೀತಂ ಅವರ ಪ್ರಕಾರ, 12 ಗಂಟೆಗಳ ಕಾಲ ಕೆಲಸ ಮಾಡಿ ನಂತರ ಮೂರು ದಿನ ರಜಾ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಒಪ್ಪಿಕೊಳ್ಳಬಹುದು. ಆದರೆ ಶಿಸ್ತಿನಿಂದ ಅದರ ನಿಯಮ ಪಾಲನೆಯಾದರೆ ಮಾತ್ರ ಯಶಸ್ವಿಯಾಗಬಹುದು.

“ಕಾರ್ಪೋರೇಟ್ ಜಗತ್ತು ಬಹಳ ಸವಾಲಿನ ಕ್ಷೇತ್ರ. ಇಂತಹ ನಿಯಮ ಕಟ್ಟುನಿಟ್ಟಾಗಿ ಅಳವಡಿಸುವುದು ಕಷ್ಟ. ಉದ್ಯೋಗ ಕಳೆದುಕೊಳ್ಳುವ ಭಯದಲ್ಲೇ ಕೆಲಸ ಮಾಡುವ ಉದ್ಯೋಗಿಗಳು ಮೂರು ದಿನ ವಾರದ ರಜಾ ಪಡೆಯುವುದು ಸಾಧ್ಯವಿಲ್ಲ. ಮ್ಯಾನೇಜ್ಮೆಂಟ್ ಸ್ಥಾನದಲ್ಲಿರುವವರು ಉತ್ಪನ್ನ ವಿಷಯಗಳು/ ಉತ್ಪನ್ನ ಮತ್ತು ಉದ್ಯಮ ವಿಷಯಗಳಿಗೆ ಸಂಬಂಧಿಸಿ 24/7 ದಿನಗಳ ಕಾಲ ಸಂಪರ್ಕದಲ್ಲಿರಬೇಕಾಗುತ್ತದೆ. ಹೀಗಾಗಿ ಈ ನಿಯಮವನ್ನು ಅನುಷ್ಠಾನಗೊಳಿಸುವುದು ಬಹಳ ಕಷ್ಟ” ಎನ್ನುತ್ತಾರೆ ಪ್ರೀತಂ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News