×
Ad

BBC ವಿರುದ್ಧ ಟ್ರಂಪ್ 10 ಬಿಲಿಯ ಡಾಲರ್ ಮಾನನಷ್ಟ ಮೊಕದ್ದಮೆ

Update: 2025-12-16 22:45 IST

ಡೊನಾಲ್ಡ್ ಟ್ರಂಪ್ | Photo : PTI

ವಾಶಿಂಗ್ಟನ್,ಡಿ.16: 2021ರಲ್ಲಿ ಯುಎಸ್ ಕ್ಯಾಪಿಟೊಲ್ ಕಟ್ಟಡದಲ್ಲಿ ನಡೆದ ದಾಂಧಲೆಗೆ ಮುನ್ನ ಬೆಂಬಲಿಗರನ್ನುದ್ದೇಶಿಸಿ ತಾನು ಮಾಡಿದ ಭಾಷಣವನ್ನು ತಿರುಚಿ ಪ್ರಸಾರಿಸಿದ್ದಕ್ಕಾಗಿ ಕನಿಷ್ಠ 10 ಶತಕೋಟಿ ಡಾಲರ್ ಪರಿಹಾರ ಕೋರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬ್ರಿಟಿಶ್ ಸುದ್ದಿಸಂಸ್ಥೆ BBC ವಿರುದ್ಧ ಸೋಮವಾರ ಮೊಕದ್ದಮೆ ಹೂಡಿದ್ದಾರೆ.

ಅಮೆರಿಕದ ಮಿಯಾಮಿಯ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. BBC ವಿರುದ್ಧ ತಾನು ದಾಖಲಿಸಿರುವ ಎರಡೂ ದಾವೆಗಳಲ್ಲಿಯೂ ತನಗೆ ಕನಿಷ್ಠ 5 ಶತಕೋಟಿ ಡಾಲರ್ ಮಾನನಷ್ಟ ಪರಿಹಾರ ನೀಡಬೇಕೆಂದು ಟ್ರಂಪ್ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

2021ರ ಜನವರಿ 6ರಂದು ತಾನು ಮಾಡಿದ ಭಾಷಣದ ಭಾಗಗಳನ್ನು ಕತ್ತರಿಸಿ ಸಂಕಲನಗೊಳಿಸುವ ಮೂಲಕ BBCಯು ತನ್ನ ವರ್ಚಸ್ಸಿಗೆ ಮಸಿ ಬಳಿಯಲು ಯತ್ನಿಸಿದೆಯೆಂದು ಟ್ರಂಪ್ ಆಪಾದಿಸಿದ್ದಾರೆ. ಭಾಷಣದ ಒಂದು ಭಾಗದಲ್ಲಿ ಅವರು ಕ್ಯಾಪಿಟಲ್ ಹಿಲ್ಗೆ ತೆರಳುವಂತೆ ಬೆಂಬಲಿಗರಿಗೆ ಕರೆ ನೀಡಿದ್ದರೆ, ಇನ್ನೊಂದು ಭಾಗದಲ್ಲಿ ‘ ನರಕಸದೃಶವಾಗಿ ಹೋರಾಡಿ’ ಎಂದು ಕರೆ ನೀಡಿದ್ದರು. ಆದರೆ ಶಾಂತಿಯುತವಾಗಿ ಪ್ರತಿಭಟಿಸಿ ಎಂದು ಅವರು ಕರೆ ನೀಡಿದ್ದ ಭಾಗವನ್ನು ತೆಗೆದುಹಾಕಲಾಗಿತ್ತು.

ತನ್ನಿಂದಾದ ತಪ್ಪಿಗೆ BBC ಟ್ರಂಪ್ ಅವರಲ್ಲಿ ಕ್ಷಮೆಯಾಚಿಸಿತ್ತು. ಭಾಷಣದ ಭಾಗಗಳನ್ನು ಸಂಕಲನಗೊಳಿಸುವ ಮೂಲಕ ಟ್ರಂಪ್ ಅವರು ಹಿಂಸೆಗಿಳಿಯುವಂತೆ ಬೆಂಬಲಿಗರಿಗೆ ಕರೆ ನೀಡಿದ್ದರು ಎಂಬ ಭಾವನೆಯನ್ನು ಮೂಡಿಸಲಾಗಿದೆ ಎಂಬುದನ್ನು BBC ಒಪ್ಪಿಕೊಂಡಿತ್ತು. ಆದರೆ ತನ್ನ ವಿರುದ್ಧ ಮೊಕದ್ದಮೆ ದಾಖಲಿಸುವುದಕ್ಕೆ ಯಾವುದೇ ಕಾನೂನಾತ್ಮಕ ನೆಲೆಗಟ್ಟು ಇಲ್ಲವೆಂದು ಅದು ಪ್ರತಿಪಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News