×
Ad

‘ಭಾರತ್ ಜೋಡೊ ಯಾತ್ರೆ’ಗೆ KGF -2 ಚಿತ್ರದ ಹಾಡು ಬಳಕೆ: ರಾಹುಲ್ ಗಾಂಧಿ ವಿರುದ್ಧದ ತನಿಖೆಗಿದ್ದ ತಡೆಯಾಜ್ಞೆ ವಿಸ್ತರಣೆ

Update: 2023-06-16 18:23 IST

ಬೆಂಗಳೂರು, ಜೂ.16: ಕಾಂಗ್ರೆಸ್‍ನ ಭಾರತ್ ಜೋಡೊ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಹಾಡು ಬಳಕೆ ಮಾಡಿಕೊಂಡು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪದಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಮತ್ತಿತರರ ವಿರುದ್ಧದಾಖಲಾಗಿದ್ದ ಪ್ರಕರಣದ ತನಿಖೆಗೆ ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಒಂದು ವಾರ ಕಾಲ ವಿಸ್ತರಿಸಿದೆ.

ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಲು ಕೋರಿ ಭಾರತೀಯ ಕಾಂಗ್ರೆಸ್ ಪಕ್ಷದ ಸಂವಹನಾ ಮತ್ತು ಪ್ರಚಾರ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಸಾಮಾಜಿಕ ಜಾಲತಾಣಗಳ ವಿಭಾಗದ ಮುಖ್ಯಸ್ಥರಾದ ಸುಪ್ರಿಯಾ ಶ್ರೀನಾಟೆ ಮತ್ತು ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಹಿಂದೆ ನೀಡಿದ್ದ ತಡೆಯಾಜ್ಞೆಯನ್ನು ಒಂದು ವಾರ ಕಾಲ ವಿಸ್ತರಿಸಿ ವಿಚಾರಣೆಯನ್ನು ಮುಂದೂಡಿದೆ. ಅಲ್ಲದೇ, ಮತ್ತೆ ಮುಂದೂಡುವುದಿಲ್ಲ ಎಂದು ಪೀಠ ಮೌಖಿಕವಾಗಿ ತಿಳಿಸಿತು.


ವಿಚಾರಣೆ ವೇಳೆ ದೂರುದಾರರ ಎಂಆರ್‍ಟಿ ಮ್ಯೂಸಿಕ್ ಪರ ವಾದ ಮಂಡಿಸಿದ ವಕೀಲರು, ಕೆಜಿಎಫ್-2 ಸಂಗೀತವನ್ನು ತಪ್ಪಾಗಿ ಬಳಸಿಕೊಂಡಿದ್ದೇವೆ. ಅದನ್ನು ತೆಗೆದು ಹಾಕಲಾಗುವುದು ಎಂದು ಈ ಹಿಂದೆ ಅರ್ಜಿದಾರರ ಪರ ವಕೀಲರು ಪೀಠಕ್ಕೆ ಭರವಸೆ ನೀಡಿದ್ದರು. ಆದರೆ, ಇಂದಿಗೂ ಅದನ್ನು ಮಾರ್ಪಡಿಸಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಅರ್ಜಿದಾರರು ದೂರುದಾರರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದ್ದರು.

ಈ ವೇಳೆ ಮಧ್ಯಪ್ರವೇಶಿಸಿದ ಅರ್ಜಿದಾರರ ಪರ ವಕೀಲರು, ಒಂದು ವಾರ ಕಾಲಾವಕಾಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು. ಈ ಮನವಿ ಪರಿಗಣಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News