×
Ad

ಮೆಕ್ಸಿಕೋ | ತುರ್ತು ಲ್ಯಾಂಡಿಂಗ್ ವೇಳೆ ಮೇಲ್ಚಾವಣಿಗೆ ಅಪ್ಪಳಿಸಿದ ವಿಮಾನ : 7 ಮಂದಿ ಮೃತ್ಯು

Update: 2025-12-16 07:29 IST

PC | timesofindia

ಮೆಕ್ಸಿಕೋ: ಇಲ್ಲಿನ ಸ್ಯಾನ್ ಮಾಂಟಿಯೊ ಅಟೆನ್ಕೊದಲ್ಲಿ ಸೋಮವಾರ ಪುಟ್ಟ ಖಾಸಗಿ ವಿಮಾನವೊಂದು ತುರ್ತು ಲ್ಯಾಂಡಿಂಗ್ ವೇಳೆ ವ್ಯವಹಾರ ಕೇಂದ್ರವೊಂದರ ಚಾವಣಿಗೆ ಬಡಿದು ಸಂಭವಿಸಿದ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದ್ದು, ಜನರನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತರಲಾಗಿದೆ.

ಅಕಪುಲ್ಕೊದಿಂದ ಹೊರಟಿದ್ದ ವಿಮಾನ ಮೆಕ್ಸಿಕೋ ಸಿಟಿಯಿಂದ 31 ಮೈಲು ಪಶ್ಚಿಮಕ್ಕೆ ಇರುವ ಟ್ಯುಲುಕಾ ವಿಮಾನ ನಿಲ್ದಾಣದತ್ತ ತೆರಳುತ್ತಿತ್ತು. ಅಪಘಾತ ಸಂಭವಿಸಿದ ಸ್ಥಳ ವಿಮಾನ ನಿಲ್ದಾಣದಿಂದ ಸುಮಾರು ಮೂರು ಕಿಲೋಮೀಟರ್ ದೂರದ ಕೈಗಾರಿಕಾ ಪ್ರದೇಶ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಮಾನದಲ್ಲಿ ಎಂಟು ಮಂದಿ ಪ್ರಯಾಣಿಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದರು. ಆದರೆ ದುರಂತ ಸಂಭವಿಸಿದ ಹಲವು ಗಂಟೆಗಳ ಬಳಿಕವೂ ಏಳು ಮೃತದೇಹಗಳನ್ನು ಮಾತ್ರ ಪತ್ತೆ ಮಾಡಲಾಗಿದೆ ಎಂದು ಮೆಕ್ಸಿಕೊದ ಸರ್ಕಾರಿ ನಾಗರಿಕ ರಕ್ಷಣಾ ಸಂಯೋಜಕ ಆ್ಯಡ್ರಿನ್ ಹೆರ್ನಾಂಡಿಸ್ ಹೇಳಿದ್ದಾರೆ. ವಿಮಾನ ಫುಟ್ಬಾಲ್ ಮೈದಾನವೊಂದರಲ್ಲಿ ತುರ್ತಾಗಿ ಇಳಿಯುವ ಪ್ರಯತ್ನದಲ್ಲಿದ್ದಾಗ, ವ್ಯವಹಾರ ಕೇಂದ್ರವೊಂದರ ಚಾವಣಿಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭ ಸಂಭವಿಸಿದ ಭೀಕರ ಬೆಂಕಿಯಿಂದಾಗಿ 130 ಮಂದಿಯನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ಸ್ಯಾನ್ ಮಾಟಿಯೊ ಅಟೆನ್ಕೊ ಮೇಯರ್ ಅನಾ ಮುನೀಝ್ ಅವರು ಮೆಲಾನಿಯೊ ಟೆಲಿವಿಷನ್‍ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News