×
Ad

Bihar | ಸರಕಾರಿ ಕಾರ್ಯಕ್ರಮದಲ್ಲಿ ವೈದ್ಯೆಯ ಹಿಜಾಬ್ ಎಳೆದ CM ನಿತೀಶ್ ಕುಮಾರ್; ವಿಡಿಯೋ ವೈರಲ್

ವಿರೋಧ ಪಕ್ಷಗಳಿಂದ ತೀವ್ರ ಖಂಡನೆ; ನೀಚ ಕೃತ್ಯ ಎಂದ ಕಾಂಗ್ರೆಸ್

Update: 2025-12-15 23:01 IST

Photo: Screengrab

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾರ್ಯಕ್ರಮವೊಂದರಲ್ಲಿ ಮುಸ್ಲಿಂ ವೈದ್ಯೆಯ ಹಿಜಾಬ್ ಅನ್ನು ಎಳೆದಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡೆಗೆ ಆರ್‌ಜೆಡಿ, ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಪಾಟ್ನಾದಲ್ಲಿ ಆಯೋಜಿಸಲಾಗಿದ್ದ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವೀಡಿಯೊದಲ್ಲಿ, ನೇಮಕಾತಿ ಪತ್ರ ಸ್ವೀಕರಿಸಲು ಬಂದ ನುಸ್ರತ್ ಪರ್ವೀನ್ ಎಂಬ ವೈದ್ಯೆಯ ಹಿಜಾಬ್ ನತ್ತ ಮುಖ್ಯಮಂತ್ರಿ ನಿತೀಶ್ ಕುಮಾರ್ ಸನ್ನೆ ಮಾಡುತ್ತಿರುವುದು ಕಂಡುಬರುತ್ತದೆ. “ಇದು ಏನು?” ಎಂದು ಪ್ರಶ್ನಿಸಿದ ಬಳಿಕ, ಅದನ್ನು ತೆಗೆದುಹಾಕುವಂತೆ ಸೂಚಿಸಿ ಸ್ವತಃ ಹಿಜಾಬ್ ಅನ್ನು ಎಳೆದಿದ್ದಾರೆ ಎನ್ನಲಾಗಿದೆ.

ತಕ್ಷಣ ಅಧಿಕಾರಿಯೊಬ್ಬರು ಆ ಮಹಿಳೆಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಲು ಯತ್ನಿಸಿದರೆ, ಪಕ್ಕದಲ್ಲಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಮುಖ್ಯಮಂತ್ರಿ ಅವರನ್ನು ತಡೆಯಲು ಮುಂದಾಗಿರುವ ದೃಶ್ಯವೂ ವೀಡಿಯೊದಲ್ಲಿ ಇದೆ.

ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಆರ್‌ಜೆಡಿ ಮತ್ತು ಕಾಂಗ್ರೆಸ್ ತಮ್ಮ ಎಕ್ಸ್ (X) ಖಾತೆಗಳಲ್ಲಿ ಹಂಚಿಕೊಂಡು ಮುಖ್ಯಮಂತ್ರಿ ನಡೆಗೆ ತೀವ್ರ ಟೀಕೆ ವ್ಯಕ್ತಪಡಿಸಿವೆ. “ನಿತೀಶ್ ಕುಮಾರ್ ಅವರಿಗೆ ಏನಾಗಿದೆ? ಅವರ ಮಾನಸಿಕ ಸ್ಥಿತಿ ಪ್ರಶ್ನಾರ್ಹವಾಗಿದೆಯೇ?” ಎಂದು ಆರ್‌ಜೆಡಿ ಕಟುವಾಗಿ ಪ್ರತಿಕ್ರಿಯಿಸಿದೆ.

ಕಾಂಗ್ರೆಸ್ ಈ ಕೃತ್ಯವನ್ನು “ನೀಚ” ಎಂದು ಖಂಡಿಸಿದ್ದು, ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. “ವೈದ್ಯೆ ಗೌರವದಿಂದ ನೇಮಕಾತಿ ಪತ್ರ ಪಡೆಯಲು ಬಂದಾಗ, ಅವರ ಹಿಜಾಬ್ ಎಳೆಯುವುದು ಅಸಭ್ಯ ಮತ್ತು ಕ್ಷಮಿಸಲಾಗದ ನಡೆ. ಇಂತಹ ವ್ಯಕ್ತಿ ಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆ ಬಗ್ಗೆ ಏನು ನಿರೀಕ್ಷಿಸಬಹುದು?” ಎಂದು ಕಾಂಗ್ರೆಸ್ ಹೇಳಿದೆ.

ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಈ ಘಟನೆಯನ್ನು “ಸಾರ್ವಜನಿಕ ಕಿರುಕುಳ” ಎಂದು ಕರೆದಿದ್ದು, ಮಹಿಳೆಯ ಹಿಜಾಬ್ ಬಲವಂತವಾಗಿ ಎಳೆಯುವುದು ಸಂಪೂರ್ಣ ಖಂಡನೀಯ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಕಚೇರಿ (CMO) ಮಾಹಿತಿ ಪ್ರಕಾರ, ಈ ಕಾರ್ಯಕ್ರಮದಲ್ಲಿ ಒಟ್ಟು 1,283 ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಇವರಲ್ಲಿ 685 ಆಯುರ್ವೇದ, 393 ಹೋಮಿಯೋಪತಿ ಹಾಗೂ 205 ಯುನಾನಿ ವೈದ್ಯರು ಸೇರಿದ್ದಾರೆ. 10 ಮಂದಿಗೆ ನೇರವಾಗಿ ನೇಮಕಾತಿ ಪತ್ರ ಹಸ್ತಾಂತರಿಸಲಾಯಿತು. ಉಳಿದವರು ಆನ್‌ಲೈನ್ ಮೂಲಕ ಪಡೆದಿದ್ದಾರೆ. ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ, ವಿಜಯ್ ಕುಮಾರ್ ಸಿನ್ಹಾ ಸೇರಿದಂತೆ ಹಿರಿಯ ಸಚಿವರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News