ಮಧ್ಯಪ್ರದೇಶ: ಸ್ವಘೋಷಿತ ಗೋರಕ್ಷಕರಿಂದ ಹಲ್ಲೆಗೀಡಾದ ವ್ಯಕ್ತಿ ಮೃತ್ಯು; ಮತ್ತೊಬ್ಬ ಗಂಭೀರ
PC: x.com/ndtv
ಭೋಪಾಲ್: ಗೋಕಳ್ಳಸಾಗಾಣಿಕೆ ಆರೋಪದಲ್ಲಿ ಸ್ವಘೋಷಿತ ಗೋರಕ್ಷಕರಿಂದ ಜೂನ್ 5ರಂದು ಮಾರಣಾಂತಿಕ ಹಲ್ಲೆಗೊಳಗಾದ ಯುವಕ ಮಂಗಳವಾರ ಮೃತಪಟ್ಟಿದ್ದು, ಘಟನೆಯಲ್ಲಿ ಗಾಯಗೊಂಡ ಮತ್ತೊಬ್ಬ ವ್ಯಕ್ತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಮಧ್ಯಪ್ರದೇಶದ ರಾಯ್ಸೆನ್ ಜಿಲ್ಲೆಯ ಮೆಹಗಾಂವ್ ಗ್ರಾಮದಲ್ಲಿ ಈ ಪ್ರಕರಣ ಸಂಭವಿಸಿದೆ.
ಜೂನ್ 5ರ ರಾತ್ರಿ ಜುನೈದ್ ಎಂಬಾತ ಆರರಿಂದ ಹತ್ತು ಗೋವುಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದ್ದು, ಸ್ವಘೋಷಿತ ಗೋರಕ್ಷಕರು ಇವರ ವಾಹನವನ್ನು ಅಡ್ಡಗಟ್ಟಿದ್ದರು. ಬಳಿಕ ಜುನೈದ್ ಹಾಗೂ ವಾಹನದಲ್ಲಿದ್ದ ಸಹಚರನ ಮೇಲೆ ಗುಂಪು ಹಲ್ಲೆ ನಡೆದಿತ್ತು. ಅಮಾನುಷವಾಗಿ ಥಳಿಸಿದ್ದರಿಂದ ಇಬ್ಬರೂ ತೀವ್ರವಾಗಿ ಗಾಯಗೊಂಡಿರುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ವೈರಲ್ ವಿಡಿಯೊಗಳಿಂದ ಬೆಳಕಿಗೆ ಬಂದಿತ್ತು.
ಹಲ್ಲೆಗೊಳಗಾದ ಇಬ್ಬರನ್ನು ಭೋಪಾಲ್ ಹಮೀದಿಯಾ ಆಸ್ಪತ್ರೆಗೆ ಪೊಲೀಸರ ನೆರವಿನಿಂದ ದಾಖಲಿಸಲಾಗಿತ್ತು. ಇಬ್ಬರನ್ನೂ ತೀವ್ರ ನಿಗಾ ಘಟಕಕ್ಕೆ ದಾಖಲಿಸಿ, ಜುನೈದ್ ಗೆ ಕೃತಕ ಉಸಿರಾಟ ವ್ಯವಸ್ಥೆ ಜೋಡಿಸಲಾಗಿತ್ತು. ಹಲವು ದಿನಗಳ ಚಿಕಿತ್ಸೆಗೆ ಸ್ಪಂದಿಸದೇ ಜುನೈದ್ ಮಂಗಳವಾರ ಕೊನೆಯುಸಿರೆಳೆದಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರವಾಗಿದೆ.
ಘಟನೆಯ ವಿಡಿಯೊ ವೈರಲ್ ಆಗಿದ್ದು ಸ್ವಘೋಷಿತ ಗೋರಕ್ಷಕ ಧ್ರುವ ಚತುರ್ವೇದಿ, "ಮಹಗಾಂವ್ ದೇವಸ್ಥಾನದ ಬಳಿ ಗೋವುಗಳನ್ನು ಕಟ್ಟಿಹಾಕಿರುವ ಮಾಹಿತಿ ಬಂದಿತ್ತು. ನಾವು ವಾಹನವನ್ನು ಬೆನ್ನಟ್ಟಿದಾಗ ಅವರು ನಮ್ಮತ್ತ ಕಲ್ಲೆಸೆದರು. ಜೀವವನ್ನು ಪಣಕ್ಕಿಟ್ಟು ನಾವು ಗೋವುಗಳನ್ನು ರಕ್ಷಿಸಿದೆವು" ಎಂದು ಹೇಳಿಕೆ ನೀಡಿದ್ದ. ಮತ್ತೊಂದು ವಿಡಿಯೊದಲ್ಲಿ ಚತುರ್ವೇದಿ ಮತ್ತು ಪೊಲೀಸ್ ಅಧಿಕಾರಿ ನಡುವೆ ಮಾತಿನ ಚಕಮಕಿ ಕಾಣಿಸುತ್ತಿದೆ. ಕಾನೂನನ್ನು ಕೈಗೆತ್ತಿಕೊಂಡ ಬಗ್ಗೆ ಪೊಲೀಸ್ ಅಧಿಕಾರಿ ತರಾಟೆಗೆ ತೆಗೆದುಕೊಂಡಿದ್ದರು.
"ನನ್ನ ಮಗ ಅಮಾಯಕ. ಆತ ಕೂಲಿ ಕೆಲಸ ಮಾಡುತ್ತಿದ್ದ. ಗೋವುಗಳನ್ನು ಸಾಗಿಸುತ್ತಿದ್ದರೂ, ಆ ಬಗ್ಗೆ ಏಕೆ ತನಿಖೆ ನಡೆಸಿಲ್ಲ? ಆತನನ್ನು ಕೊಲ್ಲುವ ಹಕ್ಕನ್ನು ಗುಂಪಿಗೆ ಕೊಟ್ಟವರು ಯಾರು? ದೇಶ ಎತ್ತ ಸಾಗುತ್ತಿದೆ?" ಎಂದು ಮಗನನ್ನು ಕಳೆದುಕೊಂಡ ಜುನೈದ್ ತಂದೆ ಹತಾಶೆಯಿಂದ ನುಡಿದರು.