×
Ad

ದೇವೇಗೌಡ, ಕುಮಾರಸ್ವಾಮಿ, ಮಾದೇಗೌಡ, ಅಂಬರೀಶ್ ಬಗ್ಗೆ ಲಘು ಮಾತು: ಮಾಜಿ ಸಂಸದ ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ವೈರಲ್

Update: 2026-01-28 19:24 IST

ಮಂಡ್ಯ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತು ಜೆಡಿಎಸ್ ಕಾರ್ಯಕರ್ತನೊಬ್ಬನ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ. ಅದರಲ್ಲಿ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿ, ಸುರೇಶ್‌ಗೌಡ, ಜಿ.ಮಾದೇಗೌಡ, ಅಂಬರೀಷ್ ಅವರ ಬಗ್ಗೆ ಶಿವರಾಮೇಗೌಡ ಲಘುವಾಗಿ ಮಾತನಾಡಿರುವುದು ಚರ್ಚೆಗೆ ಕಾರಣವಾಗಿದೆ.

ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ, ದಿವಂಗತ ಮಾಜಿ ಸಂಸದ ಜಿ.ಮಾದೇಗೌಡ ಅವರು ತನಗೆ ರಾಜಕೀಯವಾಗಿ ಯಾವ ರೀತಿಯಲ್ಲಿ ಮೋಸ ಮಾಡಿದರು, ವಂಚಿಸಿದರು ಎಂಬುದರ ಬಗ್ಗೆ ಯುವಕನ ಜತೆ ಮಾತನಾಡುವ ವೇಳೆ ಶಿವರಾಮೇಗೌಡ ಒಮ್ಮೆ ಬಹುವಚನದಲ್ಲಿ, ಮತ್ತೊಮ್ಮೆ ಏಕವಚನದಲ್ಲಿ ಅವಾಚ್ಯ ಪದ ಬಳಸಿದ್ದಾರೆ.

ವೈರಲ್‌ ಆಡಿಯೋದಲ್ಲಿ ಏನಿದೆ? 

‘ನಾನು ಈಗ ಕಾಂಗ್ರೆಸ್‌ನಲ್ಲಿದ್ದೇನೆ. ನಾನು ಹುಟ್ಟು ಕಾಂಗ್ರೆಸ್ಸಿಗ, ಇನ್ನು ಮುಂದೆ ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ. ವಿಧಿ ಇಲ್ಲದೆ ಜೆಡಿಎಸ್‌ಗೆ ಹೋಗಿದ್ದೆ, ಬಿಜೆಪಿಗೂ ಹೋಗಬೇಕಾಯಿತು. ಕಾಂಗ್ರೆಸ್‌ನಲ್ಲಿ ಮಾದೇಗೌಡ ಟಿಕೆಟ್ ತಪ್ಪಿಸಿದ, ಅದಕ್ಕೆ ನನಗೂ ಅವನಿಗೂ ಎಕ್ಕಡದಲ್ಲಿ ಹೊಡೆದಾಟವಾಯ್ತು. ಆ ಅಂಬರೀಷ್‌ನನ್ನು ಪಾರ್ಟಿಗೆ ಕರೆದುಕೊಂಡು ಬಂದೆ. ಅವನು ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ಸನ್ನೇ ತೊಳೆದು ಹೊರಟೋದಾ’ ಎಂಬುದಾಗಿ ಶಿವರಾಮೇಗೌಡ ಕಿಡಿಕಾರಿದ್ದಾರೆ.

‘ಸುರೇಶ್‌ಗೌಡನ ಗೆಲ್ಲಿಸಿದೆ, ಅವನು ಒಂದಿನಾನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕೊಡ್ತೀನೆಂದು ಹೇಳಿ ಲೋಕಸಭಾ ಉಪಚುನಾವಣೆಯಲ್ಲಿ ನನ್ನನ್ನು ನಿಲ್ಲಿಸಿ 36 ಕೋಟಿ ಖರ್ಚು ಮಾಡಿಸಿದ ಕುಮಾರಸ್ವಾಮಿ, ಗೌಡರ ಮನೆಯಲ್ಲಿ ನಾಯಿ ಇದ್ದಂತೆ ಇದ್ದೆ. ಆದರೆ, ಟಿಕೆಟ್ ತಪ್ಪಿಸಿ ನಿಖಿಲ್ ಕುಮಾರಸ್ವಾಮಿಗೆ ಕೊಟ್ಟರು. ತೊಂದರೆ ಕೊಡ್ತಾನೆ ಎಂದು ಪಕ್ಷದಿಂದಲೇ ಹೊರಹಾಕಿದರು’ ಎಂದು ಅವರು ದೇವೇಗೌಡರ ಕುಟುಂಬದ ಬಗ್ಗೆ ಅವರು ಆಕ್ರೋಶ ಹೊರಹಾಕಿದ್ದಾರೆ.

‘ಇದುವರೆಗೂ ಯಾರ ಹತ್ತಿರಾನೂ ಐದು ರೂಪಾಯಿಗೆ ಕೈಹೊಡ್ಡಿಲ್ಲ. ನಾಗಮಂಗಲದಲ್ಲಿ ಸುರೇಶ್‌ಗೌಡ ಎಷ್ಟು ಲಂಚ ತೆಗೆದುಕೊಳ್ಳುತ್ತಿದ್ದಾನೆ? ಚೆಲುವರಾಯಸ್ವಾಮಿ ಎಷ್ಟು ಲಂಚ ತೆಗೆದುಕೊಳ್ಳುತ್ತಿದ್ದಾನೆ? ಮೊದಲು ತಿಳ್ಕೋ. ಜಮೀನು ಮಂಜೂರು ಮಾಡುವುದಕ್ಕೆ ಸುರೇಶ್‌ಗೌಡ ಒಂದು ಎಕರೆಗೆ 1 ಲಕ್ಷ ಲಂಚ ತೆಗೆದುಕೊಂಡಿದ್ದ’ ಎಂದೂ ಶಿವರಾಮೇಗೌಡ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News