×
Ad

ಮಂಡ್ಯ | ಕಿರುಗಾವಲು ಚಿನ್ನದ ಅಂಗಡಿ ಕಳ್ಳತನ, ಕೊಲೆ ಪ್ರಕರಣ: ಐವರು ಆರೋಪಿಗಳ ಬಂಧನ

Update: 2025-08-22 18:15 IST

ಸಾಂದರ್ಭಿಕ ಚಿತ್ರ

ಮಂಡ್ಯ/ಮಳವಳ್ಳಿ: ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಚಿನ್ನದಂಗಡಿ(ಜ್ಯುವೆಲರಿ ಶಾಪ್)ಯಲ್ಲಿ ನಡೆದ ಕಳ್ಳತನ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಪಟ್ಟಾಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಆ.17ರಂದು ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ಕಿರುಗಾವಲು ಗ್ರಾಮದ ಮಹಾಲಕ್ಷ್ಮಿ ಜ್ಯುವಲರಿ ಶಾಪ್ ನ ಬಾಗಿಲನ್ನು ಗ್ಯಾಸ್ ಕಟರ್ ಬಳಸಿ ಷಟರ್ ಮುರಿದು 110 ಗ್ರಾಂ. ಚಿನ್ನ, 2 ಕೆ.ಜಿ. ಬೆಳ್ಳಿ ಕಳ್ಳತನ ಮಾಡಲಾಗಿತ್ತು. ಕಳ್ಳತನ ಮಾಡುವುದನ್ನು ಕಂಡ ಹೋಟೆಲ್ ಮಾಲಕ ಮಾದಪ್ಪ ಅವರನ್ನು ಆರೋಪಿಗಳು ಕೊಲೆ ಮಾಡಿ ಪರಾರಿಯಾಗಿದ್ದರು.

ಖಚಿತ ಮಾಹಿತಿ ಮೇರೆಗೆ ಮಳವಳ್ಳಿ ತಾಲೂಕು ಭೀಮನಹಳ್ಳಿ ಗ್ರಾಮದಲ್ಲಿದ್ದ ಆರೋಪಿಗಳ ಬಂಧಿಸಲು ಪೊಲೀಸರು ದಾಳಿ ನಡೆಸಿದಾಗ ಆರೋಪಿ ಕಿರಣ್‌ ಎಂಬಾತ ಪೊಲೀಸ್‌ ಪೇದೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇದೇ ವೇಳೆ ಸಿಪಿಐ ಶ್ರೀಧ‌ರ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ತಾಲೂಕಿನ ಈಚಗೆರೆ ಗ್ರಾಮದ ಕಿರಣ್ (24), ಕೊತ್ತತ್ತಿ ಗ್ರಾಮದ ಆನಂದ್‌, ಶರತ್‌, ಶ್ರೀನಿವಾಸ ಹಾಗೂ ಕೃಷ್ಣಚಾರಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಮಂಡ್ಯ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗಾಯಗೊಂಡಿರುವ ಪೇದೆ ಹಾಗೂ ಆರೋಪಿಯ ಆರೋಗ್ಯ ವಿಚಾರಿಸಿ, ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News