×
Ad

ಮದ್ದೂರು ಪ್ರಕರಣ : ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ

Update: 2025-09-10 19:32 IST

ಮಂಡ್ಯ, ಸೆ.10: ಮದ್ದೂರಿನಲ್ಲಿ ಗಣಪತಿಮೂರ್ತಿ ಮೆರವಣಿಗೆ ಮೇಲೆ ಕಲ್ಲು ಎಸೆದ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.

ಮದ್ದೂರು ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ಗಣಪತಿಮೂರ್ತಿ ವಿಸರ್ಜನಾ ಮೆರವಣಿಗೆ ಕಾರ್ಯಕ್ರಮದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಘಟನೆಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಎಂದು ಆರೋಪಿಸಿದರು.

ಕಾಂಗ್ರೆಸ್ಸಿಗರ ಒಡೆದು ಆಳುವ ನೀತಿ ಹಿಂದೂಗಳ ಬಲಿ ಮಾತ್ರವಲ್ಲ, ಮುಸ್ಲಿಮರ ಬಲಿಯನ್ನೂ ತೆಗೆದುಕೊಳ್ಳುತ್ತಿದೆ. ಕಾಂಗ್ರೆಸಿಗರ ಮಾತು ಕಟ್ಟಿಕೊಂಡು ಮುಸ್ಲಿಂ ಯುವಕರು ಕಲ್ಲು ಎಸೆಯುವ ಕೆಲಸ ಆಗುತ್ತಿದೆ. ಮುಸ್ಲಿಂ ಧರ್ಮಗುರುಗಳು ಯುವಕರಿಗೆ ತಿಳಿ ಹೇಳಬೇಕು ಎಂದು ಅವರು ಮನವಿ ಮಾಡಿದರು.

ಕಾಂಗ್ರೆಸ್‍ನವರ ನಡವಳಿಕೆಗಳು ಜಿಹಾದಿ ಮನಸ್ಥಿತಿಗಳಿಗೆ ಕುಮ್ಮಕ್ಕು ನೀಡುತ್ತಿದೆ. ಹಿಂದೂಗಳ ಮತ ಪಡೆಯದೇ ಅಧಿಕಾರಕ್ಕೆ ಬಂದಂತೆ ತೋರುತ್ತಿದೆ. ಅವರ ಪಾಪದ ಕೊಡ ತುಂಬಿದೆ. ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಕಾಂಗ್ರೆಸ್ಸಿಗರ ಓಲೈಕೆ ರಾಜಕಾರಣ ಮುಸ್ಲಿಮರು ಕೊಬ್ಬಿದ್ದಾರೆ. ಹಾಗಾಗಿ ಕಲ್ಲು ತೂರುವ ಕೆಲಸ ಮಾಡಿದ್ದಾರೆ. ಇದು ಹೀಗೆಯೇ ಮುಂದುವರಿದರೆ ದೊಡ್ಡ ಪ್ರಮಾಣದ ಕೃತ್ಯಕ್ಕೆ ಮುಂದಾಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಂಸದೆ ಸುಮಲತಾ ಅಂಬರೀಶ್, ಶಾಸಕ ಸಿ.ಎನ್.ಅಶ್ವತ್ಥನಾರಾಯಣ, ಜೆಡಿಎಸ್‍ನ ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಸುರೇಶ್‍ಗೌಡ, ಕೆ.ಅನ್ನದಾನಿ ಮಾತನಾಡಿದರು.ಎಸ್.ಬಿ.ಸ್ವಾಮಿ, ಇಂಡುವಾಳು ಸಚ್ಚಿದಾನಂದ, ಅಶೋಕ್ ಜಯರಾಂ ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಉಪಸ್ಥಿತರಿದ್ದರು.

ವಿವಿಧ ಗ್ರಾಮಗಳಿಂದ ಬಂದಿದ್ದ 14 ಗಣೇಶಮೂರ್ತಿಗಳನ್ನು ಶಿಂಷಾನದಿಯಲ್ಲಿ ವಿಸರ್ಜನೆ ಮಾಡಲಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣದಾದ್ಯಂತ ಆಯಕಟ್ಟಿನ ಸ್ಥಳದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News