ಮಂಡ್ಯ | ಆತ್ಮಹತ್ಯೆಗೆ ಯತ್ನಿಸಿ ನದಿ ಮಧ್ಯೆ ಸಿಲುಕಿದ್ದ ವಿದ್ಯಾರ್ಥಿನಿಯ ರಕ್ಷಣೆ
ಮಂಡ್ಯ: ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಕಾವೇರಿ ನದಿಗೆ ಹಾರಿದ ಯುವತಿಯೊಬ್ಬಳು ನದಿಯ ಮಧ್ಯ ಮರವೊಂದರಲ್ಲಿ ಸಿಲುಕಿ ಬದುಕಿಳಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದೆ. ಯುವತಿಯನ್ನು ಶುಕ್ರವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ರಕ್ಷಿಸಿದ್ದಾರೆ.
ಬೆಂಗಳೂರಿನ ಇಲೆಕ್ಟ್ರಾನಿಕ್ ಸಿಟಿ ನಿವಾಸಿ ಪವಿತ್ರಾ(19) ರಕ್ಷಿಸಲ್ಪಟ್ಟ ಯುವತಿ. ಅವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ಕಾನೂನು ಪದವಿ ವಿದ್ಯಾರ್ಥಿನಿಯಾಗಿರುವ ಪವಿತ್ರಾ ಗುರುವಾರ ಸಂಜೆ ಕಾವೇರಿ ನದಿಗೆ ಹಾರಿದ್ದರೆನ್ನಲಾಗಿದೆ. ಸುಮಾರು ಐದು ಕಿ.ಮೀ. ದೂರ ಪ್ರವಾಹದಲ್ಲಿ ಕೊಚ್ಚಿ ಹೋದ ಪವಿತ್ರಾ ನದಿಯ ಮಧ್ಯೆ ಮರವೊಂದಕ್ಕೆ ಸಿಕ್ಕಿಕೊಂಡಿದ್ದರು. ಇಡೀ ರಾತ್ರಿ ಮರದ ಮೇಲೆ ಕುಳಿತಿದ್ದ ಅವರು, ಶುಕ್ರವಾರ ಮುಂಜಾನೆ ಕಾಪಾಡುವಂತೆ ಜೋರಾಗಿ ಕೂಗಿದ್ದಾರೆ. ನದಿ ಮಧ್ಯದಲ್ಲಿ ಯುವತಿಯ ಬೊಬ್ಬೆ ಕೇಳಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಅರಕೆರೆ ಠಾಣೆ ಸಬ್ ಇನ್ ಸ್ಪೆಕ್ಟರ್ ಎನ್. ವಿನೋದಕುಮಾರ್ ನೇತೃತ್ವದ ಪೊಲೀಸರ ತಂಡ ಮತ್ತು ಅಗ್ನಿಶಾಮಕ ಸಿಬ್ಬಂದಿ ಪವಿತ್ರಾರನ್ನು ರಕ್ಷಿಸಿದ್ದು, ಪವಿತ್ರಾರ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.