×
Ad

ಮಾರ್ಚ್- ಜೂನ್ ಅವಧಿ: ರಾಜಧಾನಿಯಲ್ಲಿ 14 ವರ್ಷಗಳಲ್ಲೇ ಕನಿಷ್ಠ ಮಳೆ

Update: 2024-06-25 10:27 IST

PC: PTI

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಪ್ರಸಕ್ತ ವರ್ಷದ ಮಾರ್ಚ್ 1ರಿಂದ ಜೂನ್ 24ರ ವರೆಗೆ ಕೇವಲ 17.6 ಮಿಲಿಮೀಟರ್ ಮಳೆ ಬಿದ್ದಿದ್ದು, ಇದು ಕಳೆದ 14 ವರ್ಷಗಳಲ್ಲಿ ಈ ಅವಧಿಯ ಕನಿಷ್ಠ ಮಳೆ ಎನಿಸಿದೆ. ವಾಡಿಕೆಯಂತೆ ಈ ಅವಧಿಯಲ್ಲಿ 112.7 ಮಿಲಿಮೀಟರ್ ಮಳೆ ಬೀಳಬೇಕಿದ್ದು, ಶೇಕಡ 84ರಷ್ಟು ಮಳೆ ಅಭಾವ ಸ್ಥಿತಿ ಇದೆ ಎಂದು 2011-2024ರ ಅವಧಿಯ ಭಾರತೀಯ ಹವಾಮಾನ ಅಂಕಿ ಅಂಶಗಳನ್ನು ಪರಿಶೀಲಿಸಿದಾಗ ತಿಳಿದು ಬರುತ್ತದೆ.

ಈ ಅವಧಿಯಲ್ಲಿ ಕನಿಷ್ಠ ಮಳೆಯಾಗಿರುವುದು ಮೇ ಮತ್ತು ಜೂನ್ ತಿಂಗಳ ಅವಧಿಯಲ್ಲಿ ತೀವ್ರ ತಾಪಮಾನಕ್ಕೆ ಕಾರಣವಾಗಿದೆ. ಮುಂದಿನ ಕೆಲ ದಿನಗಳಲ್ಲಿ ಲಘು ಮಳೆಯನ್ನು ನಿರೀಕ್ಷಿಸಿದ್ದರೂ, ಮುಂಗಾರು ಆಗಮನದ ಬಳಿಕವಷ್ಟೇ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ವಾಡಿಕೆಯಂತೆ ಜೂನ್ 27ರ ವೇಳೆಗೆ ರಾಜಧಾನಿಗೆ ಮುಂಗಾರು ಆಗಮಿಸುತ್ತದೆ. ಹವಾಮಾನ ಇಲಾಖೆ ಜೂನ್ 29 ಮತ್ತು 30ರಂದು ದೆಹಲಿ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಆದರೆ ಮುಂಗಾರು ರಾಜಧಾನಿಗೆ ಯಾವಾಗ ಆಗಮಿಸುವ ಸಾಧ್ಯತೆ ಇದೆ ಎನ್ನುವುದನ್ನು ಇನ್ನೂ ಪ್ರಕಟಿಸಿಲ್ಲ.

ಮಾರ್ಚ್ 1 ರಿಂದ ಜೂನ್ 24ರ ಅವಧಿಯಲ್ಲಿ ಸಫ್ದರ್ ಜಂಗ್ ಹವಾಮನ ಕೇಂದ್ರದಲ್ಲಿ 2023ರಲ್ಲಿ 207.5 ಮಿಲಿಮೀಟರ್ ಮಳೆ ದಾಖಲಾಗಿತ್ತು. 2022ರಲ್ಲಿ 72.5 ಮಿಲಿಮೀಟರ್, 2021ರಲ್ಲಿ 186.2 ಮಿ.ಮೀ, 2020ರಲ್ಲಿ 209.5 ಮಿ.ಮೀ, 2019ರಲ್ಲಿ 59.8 ಮಿ.ಮೀ ಹಾಗೂ 2018ರಲ್ಲಿ 43.8 ಮಿ.ಮೀ ಮಳೆ ಬಿದ್ದಿದೆ.

2011ರಿಂದ 2024ರ ಅವಧಿಯಲ್ಲಿ ಎರಡನೇ ಕನಿಷ್ಠ ಮಳೆ ಬಿದ್ದಿರುವ ದಾಖಲೆ ಇರುವುದು 2012ಯಲ್ಲಿ. ಆ ವರ್ಷ ಮಾರ್ಚ್ನಿಂದ ಜೂನ್ ಅವಧಿಯಲ್ಲಿ 42.8 ಮಿಲಿಮೀಟರ್ ಮಳೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News