ಮಣಿಪುರದ ಬಗ್ಗೆ 79 ದಿನಗಳ ಬಳಿಕ ಮಾತಾಡಿದ ಪ್ರಧಾನಿ ಮೋದಿ
Photo: modi | PTI
ಮಣಿಪುರ ಹಿಂಸಾಚಾರ ಶುರುವಾಗಿ 79 ದಿನಗಳ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೌನ ಮುರಿದಿದ್ದಾರೆ. ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದಂತೆ ಹೇಳುವುದಾದರೆ, 1800 ಗಂಟೆಗಳ ಸುದೀರ್ಘ ಮೌನದ ಬಳಿಕ ಪ್ರಧಾನಿ 30 ಸೆಕೆಂಡ್ ಮಾತನಾಡಿದ್ದಾರೆ.
ಆದರೆ ಮೋದಿ ಆಡಿದ ಈ 30 ಸೆಕೆಂಡುಗಳ ಮಾತುಗಳೇನು ಅಂತ ನೋಡಿದ್ರೆ ಅವು ಅವರ 1800 ಗಂಟೆಗಳ ಮೌನಕ್ಕಿಂತಲೂ ಕೆಟ್ಟದ್ದಾಗಿದೆ. ಮಣಿಪುರದಲ್ಲಿ ಏನಾಯಿತು, ಏನಾಗುತ್ತಿದೆ ಎಂಬುದರ ಕುರಿತ ಗಾಢ ವಿಷಾದ, ಕಳವಳಕ್ಕಿಂತಲೂ, ಈ ಮಾತಿನಲ್ಲಿ ಕೊಳಕು ರಾಜಕೀಯವೇ ಬೆರೆತಿದೆ.
ಮಣಿಪುರದಲ್ಲಿ ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ, ಲೈಂಗಿಕ ದೌರ್ಜನ್ಯವೆಸಗಿದ ಹೇಯ ಘಟನೆಯ ಕುರಿತು ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾದ ಬಳಿಕ ಮಾತನಾಡಿದ ಮೋದಿ, " ಇದು ಯಾವುದೇ ನಾಗರಿಕ ಸಮಾಜಕ್ಕೆ ನಾಚಿಕೆಗೇಡು" ಎನ್ನುತ್ತಾರೆ. " ನಮ್ಮ ತಾಯಂದಿರು ಮತ್ತು ಸಹೋದರಿಯರನ್ನು ರಕ್ಷಿಸಲು ಎಲ್ಲಾ ರಾಜ್ಯಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು" ಎಂದು ಸೂಚಿಸುತ್ತಾರೆ. " ಛತ್ತೀಸ್ಘಡ ಇರಲಿ, ರಾಜಸ್ಥಾನ ಇರಲಿ, ಮಣಿಪುರ ಇರಲಿ - ಸರ್ಕಾರಗಳು ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗಿದೆ" ಎಂದು ಪ್ರಸ್ತಾಪಿಸುತ್ತಾರೆ.
ಹಾಗೆ ಹೇಳುವ ಮೂಲಕ, ಮಣಿಪುರದಲ್ಲಿನ ಅತ್ಯಂತ ಹೇಯ ಘಟನೆಯನ್ನು, ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳ ಬೇರೆ ಘಟನೆಗಳೊಂದಿಗೆ ಸಮೀಕರಿಸುತ್ತಾರೆ. ಇಡೀ ದೇಶವೇ ನೋಡಿ ನಡುಗಿದ, ಅಸಹ್ಯಪಟ್ಟುಕೊಂಡ, ಆಕ್ರೋಶ ವ್ಯಕ್ತಪಡಿಸಿದ ಮಣಿಪುರದ ಗಂಭೀರ ಘಟನೆಯ ಬಗ್ಗೆ ಮಾತನಾಡುವಾಗಲೂ ದೇಶದ ಅತ್ಯುನ್ನತ ಅಧಿಕಾರದ ಹುದ್ದೆಯಲ್ಲಿರುವ ಪ್ರಧಾನಿ ಕೆಟ್ಟ ರಾಜಕೀಯವನ್ನು ಎಳೆದು ತರುತ್ತಾರೆ.
ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಘಟನೆಗಳ ಪ್ರಸ್ತಾಪ ಮಾಡುವ ಮೂಲಕ ಮಣಿಪುರದ ಘಟನೆಯ ಕ್ರೌರ್ಯ ಮತ್ತು ಅಮಾನುಷತೆಯನ್ನೇ ಮರೆಮಾಚುತ್ತಾರೆ. ಪ್ರಧಾನಿಯಾಗಿ ಮಾತನಾಡುವ ಬದಲು ಬಿಜೆಪಿ ಮುಖಂಡನಾಗಿ ಮಾತನಾಡುತ್ತ, ಗಮನ ಬೇರೆಡೆಗೆ ಸೆಳೆಯುವ ಕೆಲಸವನ್ನು ಬರೀ 30 ಸೆಕೆಂಡಿನಲ್ಲೇ ಮಾಡಿ ಮುಗಿಸಿಬಿಡುತ್ತಾರೆ.
ಪ್ರಧಾನಿಗಳೇ, ಮಣಿಪುರದಲ್ಲಿ ನಡೆದಂತಹ ಘಟನೆ ರಾಜಸ್ಥಾನ, ಛತ್ತೀಸ್‌ಗಢದಲ್ಲಿ ನಡೆದಿಲ್ಲ. ಅಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಜನರು ಶಸ್ತ್ರಾಸ್ತ್ರ ಲೂಟಿ ಮಾಡಿಲ್ಲ. ಅಲ್ಲಿ ಮಹಿಳೆಯರನ್ನು ಪೊಲೀಸರೇ ದುಷ್ಟರಿಗೆ ಹಸ್ತಾಂತರಿಸಿಲ್ಲ. ಮಹಿಳೆಯರ ಮೇಲೆ ನಡೆಯುವ ಇತರ ದೌರ್ಜನ್ಯಗಳಿಗೂ ಮಣಿಪುರದಲ್ಲಿ ನಡೆದಿರುವ ದೌರ್ಜನ್ಯಕ್ಕೂ ಎಲ್ಲಿಂದೆಲ್ಲಿಯ ಹೋಲಿಕೆ ? ಅತ್ಯಾಚಾರ ಪ್ರಕರಣಗಳನ್ನೇ ನೋಡುವುದಾದರೂ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಅದೆಷ್ಟು ಭೀಕರ ಅತ್ಯಾಚಾರ , ಕೊಲೆ ಪ್ರಕರಣಗಳು ಬೆಳಕಿಗೆ ಬಂದಿವೆ ? ಅತ್ಯಾಚಾರ ಮಾಡಿದ ಮೇಲೂ ಆಕೆಯನ್ನು ಬದುಕಲು ಬಿಡದೆ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿಲ್ಲವೇ ?
ಕಾಂಗ್ರೆಸ್ ಆಡಳಿತವಿರುವ ಛತ್ತಿಸ್ಘಡ, ರಾಜಸ್ಥಾನಗಳ ಬಗ್ಗೆ ಹೇಳುವ ಪ್ರಧಾನಿಯ ಬಾಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ನಂಥ ರಾಜ್ಯಗಳಲ್ಲಿಯೂ ಮಹಿಳೆಯರ ಮೇಲೆ ದೌರ್ಜನ್ಯಗಳಾಗುತ್ತಿರುವುದರ ಪ್ರಸ್ತಾಪ ಬರುವುದೇ ಇಲ್ಲ. ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡನ ಪುತ್ರನಿಂದಲೇ ಕೊಲೆಯಾದ ಅಂಕಿತ ಭಂಡಾರಿ ಪ್ರಧಾನಿಗೆ ನೆನಪಾಗಲಿಲ್ಲ.
ಕಥುವಾ ಅತ್ಯಾಚಾರ, ಕೊಲೆ ಪ್ರಕರಣ ಮತ್ತು ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಇವರದೇ ಬಿಜೆಪಿಯವರು ಆರೋಪಿಗಳ ಪರ ನಿಂತಿದ್ದರೆಂಬುದು ಪ್ರಧಾನಿಗೆ ಗೊತ್ತಿದೆಯಲ್ಲವೆ? ಹಾಗಿರುವಾಗ ಅವೆಲ್ಲವನ್ನು ಬದಿಗೆ ಸರಿಸಿ, ಛತ್ತಿಸ್ಘಡ, ರಾಜಸ್ಥಾನಗಳನ್ನು ಮಾತ್ರ ಆ ಮೂವತ್ತೇ ಸೆಕೆಂಡುಗಳ ಮಾತಿನಲ್ಲೂ ಮರೆಯದೇ ಎಳೆದು ತರುತ್ತಾರೆಂದರೆ, ಅದು ಅತ್ಯಂತ ಕೆಟ್ಟ ರಾಜಕೀಯವಲ್ಲದೆ ಮತ್ತೇನು?
ಈ ಮಾತು ಬಿಟ್ಟರೆ ಮಣಿಪುರದಲ್ಲಿ ಎರಡೂವರೆ ತಿಂಗಳಿಂದ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಒಂದೇ ಒಂದು ಮಾತು ಕೂಡ ಪ್ರಧಾನಿ ಬಾಯಿಂದ ಬರುವುದಿಲ್ಲ. ಅಲ್ಲಿ ಆದ ನೂರಾರು ಸಾವುಗಳು, ಹತ್ತಾರು ಸಾವಿರ ಮಂದಿಯ ಸ್ಥಳಾಂತರ, ಇಡೀ ಇಡೀ ಗ್ರಾಮಗಳಿಗೇ ಬೆಂಕಿಯಿಟ್ಟಿದ್ದು, ಶಸ್ತ್ರಾಸ್ತ್ರಗಳ ಲೂಟಿ, ಮಹಿಳೆಯರೂ, ಮಕ್ಕಳೂ ಸೇರಿದಂತೆ ಅಮಾಯಕರ ಮೇಲಾದ ದೌರ್ಜನ್ಯಗಳು ಇದಾವುದೂ ಮಣಿಪುರದಲ್ಲಿ ನಡೆದೇ ಇಲ್ಲವೇನೋ ಎನ್ನಿಸುವ ಹಾಗೆ ಪ್ರಧಾನಿ ಮಾತಿದೆ.
ಇನ್ನು ಶಾಂತಿ ಕಾಪಾಡುವಂತೆ ಜನರಲ್ಲಿ ಪ್ರಧಾನಿ ಮನವಿ ಮಾಡಿಕೊಳ್ಳುವ ವಿಚಾರ ದೂರವೇ ಉಳಿಯಿತು. ಇಷ್ಟಕ್ಕೂ, ಮಹಿಳೆಯರನ್ನು ಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆ ಘಟನೆ ನಡೆದು ಎರಡು ತಿಂಗಳುಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಮೇ 4ರಂದು ನಡೆದ ಘಟನೆ ಅದು. ಆದರೆ ದೇಶಕ್ಕೆ ಗೊತ್ತಾಗುವುದು ಜುಲೈ 19ರಂದು. ಸಂತ್ರಸ್ತ ಮಹಿಳೆಯೇ ಹೇಳಿಕೆ ಕೊಟ್ಟಿರುವಂತೆ, ಎಫ್ಐಆರ್ ದಾಖಲಾಗಿಯೇ ಎರಡು ತಿಂಗಳುಗಳಾಗಿವೆ.
ದೇಶದ ಮುಂದೆ ಆ ವೀಡಿಯೊ ಬಂದು ಎಲ್ಲರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಪ್ರಧಾನಿ ಕ್ಯಾಮೆರಾಗಳ ಮುಂದೆ ಬರುತ್ತಾರೆ. "ಈ ಘಟನೆಯಿಂದಾಗಿ ತನ್ನ ಮನಸ್ಸು ದುಃಖ ಮತ್ತು ಕೋಪದಿಂದ ತುಂಬಿಹೋಗಿದೆ" ಎನ್ನುತ್ತಾರೆ. ಆದರೆ ಯಾವಾಗ ಅವರು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿನ ಘಟನೆಗಳ ಅಡಿಯಲ್ಲಿ ಮಣಿಪುರದ ಹೇಯ ಕೃತ್ಯವನ್ನು ಅಡಗಿಸಲು ನೋಡಿದರೊ, ಆಗ ಅವರ ಮನಸ್ಸಿನಲ್ಲಿ ತುಂಬಿರುವುದು ಕೊಳಕು ರಾಜಕೀಯ ಮಾತ್ರ ಎಂಬುದು ಇಡೀ ದೇಶದೆದುರು ಬಯಲಾಗಿಬಿಡುತ್ತದೆ.
"ನಮ್ಮ ತಾಯಂದಿರು ಮತ್ತು ಸಹೋದರಿಯರ ರಕ್ಷಣೆಗೆ ನಿಲ್ಲಬೇಕಾಗಿದೆ" ಎನ್ನುವ ಪ್ರಧಾನಿಗೆ, ಅದೇ ಕ್ಷಣದಲ್ಲಿ ತಮ್ಮದೇ ಪಕ್ಷದ ಸಂಸದ ಬ್ರಿಜ್ ಭೂಷಣ್ ಸಿಂಗ್ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟಿರುವ ವಿಚಾರದಲ್ಲಿ ತಾವೂ ಸೇರಿದಂತೆ ಇಡೀ ಸರ್ಕಾರ ಹೇಗೆ ಸಂತ್ರಸ್ತರ ಬದಲು ಆರೋಪಿಗೇ ರಕ್ಷಣೆ ಕೊಟ್ಟೆವು ಎಂಬುದು ನೆನಪಾಗಲಿಲ್ಲವೆ?
ದೇಶಕ್ಕೆ ಕೀರ್ತಿ ತಂದವರಾಗಿದ್ದ ಆ ಹೆಣ್ಣುಮಕ್ಕಳು ಪ್ರಧಾನಿ ಕಚೇರಿ ಹಾಗು ನಿವಾಸಕ್ಕೆ ಸಮೀಪದಲ್ಲೇ ಬೀದಿಯಲ್ಲಿ ನಿಂತು ಕಣ್ಣೀರು ಹಾಕುತ್ತಿದ್ದರೂ ಕರಗದೆ, ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ ತಾವು ಆರೋಪಿ ಜೊತೆ ಮೆರೆದಿದ್ದು ನೆನಪಾಗಲಿಲ್ಲವೇ ? ಇತ್ತ ಹೊಸ ಸಂಸತ್ ಭವನ ವೈಭವದಿಂದ ಉದ್ಘಾಟನೆಯಾಗುವಾಗ ಅತ್ತ ಪಕ್ಕದ ಬೀದಿಗಳಲ್ಲಿ ಮಹಿಳಾ ಕುಸ್ತಿಪಟುಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆದದ್ದು ನೆನಪಾಗಲಿಲ್ಲವೆ?
ಬಿಲ್ಕಿಸ್ ಬಾನೊ ಅತ್ಯಾಚಾರಿಗಳನ್ನು ಸನ್ನಡತೆ ಆಧಾರದಲ್ಲಿ ಅವಧಿಗೂ ಮೊದಲೇ ಬಿಡುಗಡೆಗೊಳಿಸಿ, ಅವರನ್ನು ಬಿಜೆಪಿ, ಸಂಘ ಪರಿವಾರದ ಮುಖಂಡರೇ ಹಾರ ಹಾಕಿ ಸ್ವಾಗತಿಸಿ, ಸಿಹಿ ಹಂಚಿ ಸಂಭ್ರಮಿಸಿದರು ಎಂಬುದು ನೆನಪಾಗಲಿಲ್ಲವೆ ? ಸಾಮೂಹಿಕ ಅತ್ಯಾಚಾರ ಮಾಡಿದ ಅಪರಾಧ ಸಾಬೀತಾಗಿ ಜೈಲಿಗೆ ಹೋದವರನ್ನು " ಅವರು ಬ್ರಾಹ್ಮಣರು , ಸಂಸ್ಕಾರವಂತರು " ಎಂದು ಬಿಜೆಪಿ ಶಾಸಕರೇ ಹೇಳಿದ್ದು, ಹಾಗೆ ಹೇಳಿದ ಶಾಸಕನಿಗೇ ಮತ್ತೆ ಮೋದೀಜಿ ಹಾಗು ಅಮಿತ್ ಶಾ ಬಿಜೆಪಿ ಟಿಕೆಟ್ ಕೊಟ್ಟು ಗೆಲ್ಲಿಸಿದ್ದು ಮರೆತು ಹೋಯಿತೇ ?
ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ನಡೆದ ಆ ಹೇಯ ಕೃತ್ಯದ ವಿವರಗಳು, ಆ ಸಂತ್ರಸ್ತೆಯರ ಸಂಕಟ ನೆನೆದರೆ ಎಂತಹ ಕಲ್ಲು ಹೃದಯವೂ ಕಲಕಿಹೋಗುತ್ತದೆ. ಕುಕಿ ಸಮುದಾಯಕ್ಕೆ ಸೇರಿದ ಮಹಿಳೆಯರ ಮೇಲೆ ಆ ದೌರ್ಜನ್ಯ ಅಂದು ಪೊಲೀಸರ ಪೂರ್ಣ ಸಹಕಾರದಲ್ಲೇ ನಡೆದುಹೋಗಿದೆ ಎಂಬ ಆಘಾತಕಾರಿ ಮಾಹಿತಿಯೂ ಈಗ ಹೊರಬಂದಿದೆ. .
ಹಳ್ಳಿಯ ಮೇಲೆ ಯುವಕರ ಗುಂಪೊಂದು ದಾಳಿ ಮಾಡಿದಾಗ ಮೊದಲು ಪೊಲೀಸರು ನಮ್ಮನ್ನು ಪೊಲೀಸ್ ಠಾಣೆಗೆ ಕಡೆಗೆ ಕರೆದೊಯ್ದರು. ಹಿಂಬಾಲಿಸಿದ ಯುವಕರ ಗುಂಪು ನಮ್ಮನ್ನು ಒಪ್ಪಿಸುವಂತೆ ಪೊಲೀಸರಿಗೆ ಒತ್ತಾಯಿಸಿತು. ಆಗ ಪೊಲೀಸರೇ ನಮ್ಮನ್ನು ಯುವಕರಿಗೆ ಒಪ್ಪಿಸಿದರು ಎಂದಿದ್ದಾರೆ ಕಿರಿಯ ಸಂತ್ರಸ್ತ ಮಹಿಳೆ.
ಪೊಲೀಸ್ ಠಾಣೆಯಿಂದ ಸುಮಾರು ಎರಡು ಕಿಲೋಮೀಟರ್ ದೂರದವರೆಗೂ ನಮ್ಮನ್ನು ಬೆತ್ತಲು ಮಾಡಿ ಯುವಕರು ಕರೆದೊಯ್ದರು ಎಂದು ಸಂತ್ರಸ್ತೆಯರು ನೀಡಿರುವ ದೂರಿನಲ್ಲಿ ದಾಖಲಾಗಿರುವುದು ವರದಿಯಾಗಿದೆ. ನಮ್ಮ ಹಳ್ಳಿಯ ಮೇಲೆ ದಾಳಿ ಮಾಡುತ್ತಿದ್ದ ಗುಂಪಿನೊಂದಿಗೆ ಪೊಲೀಸರು ಇದ್ದರು. ಪೋಲೀಸರು ನಮ್ಮನ್ನು ಮನೆಯಿಂದ ಕರೆದುಕೊಂಡು ಹೋದರು. ಹಳ್ಳಿಯಿಂದ ಸ್ವಲ್ಪ ದೂರ ಕರೆದುಕೊಂಡು ಹೋಗಿ ಯುವಕರ ಗುಂಪಿನಲ್ಲಿ ನಮ್ಮನ್ನು ಬಿಟ್ಟರು. ಪೊಲೀಸರೇ ಮುಂದೆ ನಿಂತು ಅವರಿಗೆ ನಮ್ಮನ್ನು ಒಪ್ಪಿಸಿದರು ಎಂದು ಸಂತ್ರಸ್ತೆ ಹೇಳಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಘಟನೆ ಕುರಿತು ಗಂಡನ ಫೋನ್ ಮೂಲಕ ಮಾತನಾಡಿರುವ ಕಿರಿಯ ಸಂತ್ರಸ್ತೆ, ಬೆತ್ತಲಾಗದಿದ್ದರೆ ಗುಂಡಿಟ್ಟು ಸಾಯಿಸುವುದಾಗಿ ಗುಂಪು ಬೆದರಿಸಿತು ಎಂದೂ ಹೇಳಿಕೊಂಡಿರುವುದು ವರದಿಯಲ್ಲಿದೆ. ವಿಡಿಯೊದಲ್ಲಿ ಕಾಣಿಸಿಕೊಂಡ ಇಬ್ಬರು ಮಹಿಳೆಯರ ಜೊತೆ 50ರ ಹರೆಯದ ಇನ್ನೊಬ್ಬ ಮಹಿಳೆಯನ್ನು ಸಹ ವಿವಸ್ತ್ರಗೊಳಿಸಲಾಗಿದೆ. ಕಿರಿಯ ಮಹಿಳೆಯ ತಂದೆ ಮತ್ತು ಸಹೋದರರನ್ನು ಹತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ನಮ್ಮ ಜೊತೆಗಿದ್ದ ಪುರುಷರನ್ನು ಕೊಲ್ಲಲಾಯಿತು. ಯುವಕರ ಗುಂಪು ನಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿತು ಎಂದು ಸಂತ್ರಸ್ತೆ ಹೇಳಿದ್ದಾರೆ. ಇಂಥದೊಂದು ಅಮಾನುಷ ಮತ್ತು ನಾಗರಿಕ ಸಮಾಜವೇ ತಲೆತಗ್ಗಿಸುವಂಥ ಘಟನೆ ಬಗ್ಗೆ ಎಫ್‌ಐಆರ್ ದಾಖಲಾಗಿಯೇ ಎರಡು ತಿಂಗಳು ಕಳೆದಿದ್ದರೂ, ನಿನ್ನೆವರೆಗೂ ಯಾವ ಕ್ರಮವೂ ಆಗಿಯೇ ಇಲ್ಲ.
ಕ್ರಮ ಕೈಗೊಳ್ಳದಿದ್ದರೆ ತಾವು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಎಚ್ಚರಿಸುತ್ತಿದ್ದಂತೆ, ಒಬ್ಬನ ಬಂಧನವಾಗಿದೆ ಎಂದು ಮಣಿಪುರ ಸಿಎಂ ಬಿರೇನ್ ಸಿಂಗ್ ಹೇಳಿಕೆ ಕೊಡುತ್ತಾರೆ. " ನಿಮಗೆ ಕ್ರಮ ತೆಗೆದುಕೊಳ್ಳಲು ಆಗದಿದ್ದರೆ ನಾವು ತೆಗೆದುಕೊಳ್ಳುತ್ತೇವೆ " ಎಂದು ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಮೇಲೆ ಈ ಕ್ರಮವಾಗಿದೆ. ಅದೂ ಒಬ್ಬನ ಬಂಧನ.
ಆ ದುಷ್ಟ ಗುಂಪಿನಲ್ಲಿ ಐನೂರಕ್ಕೂ ಹೆಚ್ಚು ಜನರಿದ್ದರು. ಅವರನ್ನು ಯಾವಾಗ ಬಂಧಿಸಲಾಗುತ್ತದೆ ?. ಯಾವ್ಯಾವುದೋ ಸುಳ್ಳು ಕಥೆ ಕಟ್ಟಿ, ಸುಳ್ಳು ಸುದ್ದಿ ಹಬ್ಬಿಸಿ, ತಮಗಾಗದವರನ್ನು ಹಣಿಯಲು ನೋಡುವ, ತಮಗಾಗದವರ ವಿರುದ್ಧ ಅಪಪ್ರಚಾರ ಮಾಡುವ ಈ ಅಧಿಕಾರಸ್ಥರಿಗೆ, ಅವರದೇ ಸರ್ಕಾರವಿರುವ ಮಣಿಪುರದಲ್ಲಿ ಮಹಿಳೆಯರ ಮೇಲೆ ನಡೆದ ಈ ಅಮಾನುಷ ದೌರ್ಜನ್ಯದ ಘಟನೆಯ ಬಗ್ಗೆ ಕಿಂಚಿತ್ತೂ ನಾಚಿಕೆಯಾಗುತ್ತಿಲ್ಲ. ಅಲ್ಲಿ ತಮ್ಮದೇ ಪೊಲೀಸರು ದುಷ್ಟರೊಂದಿಗೆ ಸೇರಿಕೊಂಡಿದ್ದಕ್ಕೆ ನಾಚಿಕೆ ಪಟ್ಟುಕೊಂಡು ನಾವು ವಿಫಲವಾಗಿದ್ದೇವೆ ಎಂದು ರಾಜೀನಾಮೆ ಕೊಡುವ ನೈತಿಕತೆ ಇವರಿಗಿಲ್ಲ.
ಇನ್ನೂ ಸಮರ್ಥಿಸಿಕೊಳ್ಳುವ ಧಾಟಿಯಲ್ಲೇ, ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿನ ಘಟನೆಗಳ ಬಗ್ಗೆ ಹೇಳುವುದು ನೋಡಿದರೆ, ಅಸಹ್ಯ ರಾಜಕೀಯ ಮಾಡುವುದು ಬಿಟ್ಟು ಬೇರಾವ ಕಾಳಜಿಯೂ ಇವರಿಗಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ದೇಶಾದ್ಯಂತ ಅಲ್ಪಸಂಖ್ಯಾತರನ್ನು ಗುರಿಯಾಗಿಸುವ ತಂತ್ರಗಾರಿಕೆಯಂತೆ ಮಣಿಪುರದಲ್ಲಿ ಕುಕಿ ವಿರೋಧಿ ತಂತ್ರಗಾರಿಕೆ ನಡೆಯುತ್ತಿದೆ. ಮೈತೇಯಿಗಳ ಜೊತೆಗೆ ಸ್ವತಃ ಅಲ್ಲಿನ ಮುಖ್ಯಮಂತ್ರಿಯೇ ಗುರುತಿಸಿಕೊಂಡಿರುವುದೂ ರಹಸ್ಯ ವಿಚಾರವೇನಲ್ಲ. ಇಂಥದೊಂದು ಪಕ್ಷಪಾತಿ, ದುಷ್ಟ ಸರ್ಕಾರ, ಕುಕಿಗಳನ್ನು ದುಸ್ವಪ್ನದಂತೆ ಕಾಡುತ್ತಿದೆ.
ಈ ವಿವರಗಳನ್ನು ಗಮನಿಸುತ್ತಾ ಹೋದಂತೆ ನಿಮಗೆ ದೇಶದ ಬೇರೆ ಯಾವ ರಾಜ್ಯ ನೆನಪಾಗುತ್ತದೆ ? ಅಲ್ಪಸಂಖ್ಯಾತರ ವಿರುದ್ಧ ಮೊದಲು ಸುಳ್ಳಾರೋಪಗಳ ಅಭಿಯಾನ, ಆಮೇಲೆ ಪೋಲೀಸರ ನಿಷ್ಕ್ರಿಯತೆ, ಕೆಲವು ಕಡೆ ದುಷ್ಟರಿಗೆ ಪೊಲೀಸರಿಂದಲೇ ಪರೋಕ್ಷ ಸಹಕಾರ, ಸರಕಾರ ಸಂಪೂರ್ಣ ಮೌನವಾಗಿದ್ದುಕೊಂಡು ಹಿಂಸೆಗೆ ಪರೋಕ್ಷ ಬೆಂಬಲ ನೀಡುವುದು, ಸರಣಿ ಸಾಮೂಹಿಕ ಅತ್ಯಾಚಾರ, ಕೊಲೆಗಳು - ಇವೆಲ್ಲ ದೇಶದ ಯಾವ ರಾಜ್ಯವನ್ನು ನೆನಪಿಸುತ್ತವೆ ? ಅಲ್ಲಿ ಆವಾಗ ಅಧಿಕಾರದಲ್ಲಿದವರು ಯಾರು ?
ದೆಹಲಿಯಲ್ಲಿ ನೆಲೆಸಿರುವ ಮಣಿಪುರದ ಜನರು ಅನೇಕ ಬಾರಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿ, ಮಧ್ಯಪ್ರವೇಶಿಸುವಂತೆ ಪ್ರಧಾನಿಯನ್ನು ಕೇಳಿಕೊಂಡಿದ್ದಾರೆ. ಅಮಿತ್ ಶಾ ಅವರ ಮನೆಗೇ ಹೋಗಿ ಮನವಿ ಮಾಡಿದ್ದಾರೆ. ಆದರೆ ಅಮೆರಿಕ, ಈಜಿಪ್ಟ್ , ಫ್ರಾನ್ಸ್ , ಅಬುಧಾಬಿಗೆ ಹೋಗುವುದಕ್ಕೆ ಬೇಕಾದಷ್ಟು ಸಮಯವಿರುವ ಪ್ರಧಾನಿಗೆ ಮಣಿಪುರಕ್ಕೆ ಹೋಗುವಷ್ಟು ಸಮಯವಿಲ್ಲ. ಶಾಂತಿ ಸ್ಥಾಪನೆಗೆ ಮನವಿ ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲ.
ರಾಹುಲ್ ಗಾಂಧಿ ಮಣಿಪುರಕ್ಕೆ ಹೋಗಿ, ಬಿಜೆಪಿ ಒಡ್ಡಿದ ಎಲ್ಲ ಅಡೆತಡೆಗಳ ನಡುವೆಯೂ ಸಂತ್ರಸ್ತರನ್ನು ಕಂಡು ಮಾತನಾಡಿಸುವಾಗ ಇವರಿಗೆ ಭಯ ಶುರುವಾಗುತ್ತದೆ. ಅದರಲ್ಲೂ ರಾಜಕೀಯ ಮಾಡಲಾಗುತ್ತದೆ. ಮಣಿಪುರದಲ್ಲಿ ಇಂಟರ್ನೆಟ್ ಸ್ಥಗಿಸಗೊಳಿಸಿದ್ದರು. ಹಾಗಾಗಿ ಎರಡು ತಿಂಗಳ ಹಿಂದಿನ ಈ ವೀಡಿಯೊ ಈಗ ಬಹಿರಂಗವಾಗಿದೆ. ಅಲ್ಲಿ ಕಳೆದ ಎರಡೂವರೆ ತಿಂಗಳಲ್ಲಿ ಎಂತೆಂತಹ ಭೀಭತ್ಸ ಘಟನೆಗಳು ನಡೆದಿರಬಹುದು ಎಂದು ಊಹಿಸಿದರೇ ಮೈ ಕಂಪಿಸುತ್ತದೆ.
ಇವರ ಈ ಕೊಳಕು ರಾಜಕೀಯ, ಮಣಿಪುರದಲ್ಲಿನ ಹೇಯ ಕೃತ್ಯಕ್ಕೆ ವ್ಯಕ್ತಪಡಿಸಿರುವ ಪ್ರತಿಕ್ರಿಯೆಯಲ್ಲಿ ಮತ್ತೊಮ್ಮೆ ಬಯಲಾಗಿದೆ. ಪ್ರಧಾನಿಯಾದವರಿಗೆ, ಮಹಿಳೆಯರ ಮೇಲಿನ ಹೇಯ ಕೃತ್ಯದ ಬಗ್ಗೆ ಮಾತನಾಡುವುದಕ್ಕೂ ಚುನಾವಣಾ ಭಾಷಣಕ್ಕೂ ವ್ಯತ್ಯಾಸ ಗೊತ್ತಿಲ್ಲವೆಂಬುದಕ್ಕಾಗಿ, ಈ ದೇಶದ ಮತದಾರ ತಲೆತಗ್ಗಿಸಬೇಕಾಗಿದೆ.