ಹೊಟ್ಟೆಗೆ ಇಳಿಯಲಿದೆ ಪ್ಯಾಂಗೊಲಿನ್ ಪ್ರೇರಿತ ರೊಬೋಟ್

ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಇಂಟೆಲಿಜೆಂಟ್ ಸಿಸ್ಟಮ್ಸ್‌ನ ಸಂಶೋಧಕರು ಪ್ಯಾಂಗೊಲಿನ್‌ನ ಒರಟು ಚರ್ಮದಿಂದ ಸ್ಫೂರ್ತಿ ಪಡೆದು ಮಿನಿ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ರೊಬೋಟ್ ಚಲಿಸಲು ಕಾಂತೀಯ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ರೊಬೋಟ್‌ನ ಸಹಾಯದಿಂದ ದೇಹದ ಒಳಗಿನ ಭಾಗಗಳ ಶಸ್ತ್ರಚಿಕಿತ್ಸೆಯನ್ನು ಮಾಡುವ ಉದ್ದೇಶ ಹೊಂದಲಾಗಿದೆ.

Update: 2023-06-24 18:30 GMT

ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಇಂಟೆಲಿಜೆಂಟ್ ಸಿಸ್ಟಮ್ಸ್‌ನ ಸಂಶೋಧಕರು ಪ್ಯಾಂಗೊಲಿನ್‌ನ ಒರಟು ಚರ್ಮದಿಂದ ಸ್ಫೂರ್ತಿ ಪಡೆದು ಮಿನಿ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ರೊಬೋಟ್ ಚಲಿಸಲು ಕಾಂತೀಯ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ರೊಬೋಟ್‌ನ ಸಹಾಯದಿಂದ ದೇಹದ ಒಳಗಿನ ಭಾಗಗಳ ಶಸ್ತ್ರಚಿಕಿತ್ಸೆಯನ್ನು ಮಾಡುವ ಉದ್ದೇಶ ಹೊಂದಲಾಗಿದೆ.

ಮಾನವನ ಕಾಯಿಲೆಗಳನ್ನು ನಿವಾರಿಸಲು ಅನೇಕ ತಂತ್ರ ಮತ್ತು ವಿಧಾನಗಳನ್ನು ಅನುಸರಿಸಲಾಗುತ್ತದೆ. ಪ್ರತಿಯೊಂದು ತಂತ್ರ ಅಥವಾ ವಿಧಾನವು ಬಾಹ್ಯ ಪ್ರೇರಣೆಯಿಂದ ಸ್ಫೂರ್ತಿ ಪಡೆದಿರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಕೆಲವು ಚಿಕಿತ್ಸಾ ಕ್ರಮಗಳು ಉದ್ದೇಶ ಪೂರ್ವಕವಾಗಿದ್ದರೆ ಕೆಲವು ಆಕಸ್ಮಿಕವಾಗಿರುತ್ತವೆ. ವಿಶ್ವದ ನಾನಾ ಭಾಗಗಳಲ್ಲಿ ಕಂಡುಬರುವ ವಿಶಿಷ್ಟ ಸಸ್ತನಿಯಾದ ಪ್ಯಾಂಗೊಲಿನ್ ಅಥವಾ ಚಿಪ್ಪುಹಂದಿಗಳು ಮಿನಿ ರೊಬೋಟ್ ತಯಾರಿಸಲು ಪ್ರೇರಣೆಯಾದದ್ದು ತುಂಬಾ ವಿಶೇಷ. ಸಾಮಾನ್ಯವಾಗಿ ಚಿಪ್ಪುಹಂದಿಯು ಒರಟಾದ ಮೈಯನ್ನು ಹೊಂದಿದ್ದು, ಚಿಪ್ಪುಗಳಿಂದ ಆವೃತ್ತವಾಗಿರುತ್ತದೆ. ಕೂದಲುಗಳೇ ಚಿಪ್ಪುಗಳಾಗಿ ಮಾರ್ಪಾಟು ಹೊಂದಿರುವುದರಿಂದ ಇದರ ಹೊರಮೈ ತುಂಬಾ ಒರಟಾಗಿರುತ್ತದೆ. ಅಲ್ಲದೆ ಆ ಚಿಪ್ಪುಗಳು ದೇಹವನ್ನು ಚೆಂಡಿನಂತೆ ಸುತ್ತಿಕೊಳ್ಳಲು ಸಹಾಯ ಮಾಡುತ್ತವೆ. ಚಿಪ್ಪುಹಂದಿಯ ಹೊರಮೈಮೇಲಿನ ಗಟ್ಟಿಯಾದ ಆದರೆ ಸ್ಥಿತಿಸ್ಥಾಪಕ ಗುಣವೇ ಶಸ್ತ್ರಚಿಕಿತ್ಸಾ ಮಿನಿ ರೊಬೋಟ್ ವಿನ್ಯಾಸಗೊಳಿಸಲು ಪ್ರೇರಣೆಯಾಗಿದೆ. ಜರ್ಮನಿಯ ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್ ಫಾರ್ ಇಂಟೆಲಿಜೆಂಟ್ ಸಿಸ್ಟಮ್ಸ್‌ನ ಸಂಶೋಧಕರು ಪ್ಯಾಂಗೊಲಿನ್‌ನ ಒರಟು ಚರ್ಮದಿಂದ ಸ್ಫೂರ್ತಿ ಪಡೆದು ಮಿನಿ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ರೊಬೋಟ್ ಚಲಿಸಲು ಕಾಂತೀಯ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ರೊಬೋಟ್‌ನ ಸಹಾಯದಿಂದ ದೇಹದ ಒಳಗಿನ ಭಾಗಗಳ ಶಸ್ತ್ರಚಿಕಿತ್ಸೆಯನ್ನು ಮಾಡುವ ಉದ್ದೇಶ ಹೊಂದಲಾಗಿದೆ. ಮಾನವ ದೇಹದ ಹೊಟ್ಟೆ ಮತ್ತು ಸಣ್ಣ ಕರುಳಿನಂತಹ ಕಿರು ಮಾರ್ಗಗಳುಳ್ಳ ಭಾಗಗಳಲ್ಲಿನ ರೋಗ ಪತ್ತೆ ಮತ್ತು ಚಿಕಿತ್ಸೆಗೆ ರೊಬೋಟ್‌ಗಳು ಸಹಾಯ ಮಾಡುತ್ತವೆ. ಇಂತಹ ರೋಗನಿದಾನ ಕ್ರಮಗಳಿಗೆ ಮಡಿಕೆಗಳುಳ್ಳ ಹಾಗೂ ಸ್ಥಿತಿಸ್ಥಾಪಕ ಗುಣವುಳ್ಳ ರೊಬೋಟ್‌ಗಳ ಅಗತ್ಯವಿರುತ್ತದೆ. ಪ್ಯಾಂಗೊಲಿನ್‌ನ ಹೊರಮೈ ದೇಹದ ಮಾದರಿಯನ್ನು ಗಮನದಲ್ಲಿರಿಸಿಕೊಂಡು, ಮಾನವ ದೇಹದೊಳಗೆ ಸುಲಭವಾಗಿ ನುಸುಳಬಲ್ಲ ಹಾಗೂ ನಿಖರವಾದ ಮಾಹಿತಿ ಪತ್ತೆ ಹಚ್ಚುವ ರೊಬೋಟ್‌ನ್ನು ಸಂಶೋಧಕರು ವಿನ್ಯಾಸಗೊಳಿಸಿದ್ದಾರೆ. ಸಂಶೋಧಕರು ತಯಾರಿಸಿದ ಪ್ರಸ್ತುತ ರೊಬೋಟ್ ಮಾನವನ ದೇಹದಲ್ಲಿ ಕ್ಯಾನ್ಸರ್‌ನಂತಹ ಕೆಲವು ರೋಗಗಳಿಗೆ ಶಾಖ ನೀಡುವ ಮೂಲಕ ಶಸ್ತ್ರಚಿಕಿತ್ಸೆಗೆ ನೆರವಾಗುತ್ತದೆ. ರೊಬೋಟ್ ಅನ್ನು ಕಡಿಮೆ ಆವರ್ತನದ ಕಾಂತೀಯ ಕ್ಷೇತ್ರದೊಂದಿಗೆ ಗುರಿಯ ಸ್ಥಳಕ್ಕೆ ಸಕ್ರಿಯಗೊಳಿಸಲಾಗುತ್ತದೆ. ಅಧಿಕ ಆವರ್ತನದ ಕಾಂತೀಯ ಕ್ಷೇತ್ರದ ಅನ್ವಯವು ಲೋಹದ ಫಲಕಗಳ ಜೌಲ್ ತಾಪನಕ್ಕೆ ಕಾರಣವಾಗುತ್ತದೆ. ನಂತರ ಶಾಖದ ಶಕ್ತಿಯನ್ನು ದೇಹದ ಪರಿಸರದೊಂದಿಗೆ ಸಂವಹನ ಮಾಡಲು ಬಳಸಬಹುದು ಎಂದು ಅಧ್ಯಯನವು ಉಲ್ಲೇಖಿಸಿದೆ.

ಶಾಖದ ಶಕ್ತಿಯನ್ನು ಸಾಮಾನ್ಯವಾಗಿ ಹಲವಾರು ವೈದ್ಯಕೀಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆಯನ್ನು ಸರಿಪಡಿಸಲು ಅಥವಾ ದೇಹದೊಳಗಿನ ಕೆಲವು ಗಡ್ಡೆಗಳನ್ನು ಕರಗಿಸಲು ಶಾಖ ಶಕ್ತಿಯನ್ನು ಬಳಸಲಾಗುತ್ತದೆ. ಸಂಶೋಧಕರು ವಿನ್ಯಾಸಗೊಳಿಸಿದ ಪ್ರಸ್ತುತ ರೊಬೋಟ್ ಸಹ ಅಂತಹ ದೇಹದಲ್ಲಿನ ವಿವಿಧ ಶಸ್ತ್ರಚಿಕಿತ್ಸೆಗೆ ಪೂರಕವಾಗಿ ಶಾಖದ ಶಕ್ತಿಗೆ ಬಳಸಿಕೊಳ್ಳಲಾಗುತ್ತದೆ. ಮಾನವ ಅಂಗಾಂಶಗಳನ್ನು ಸುರಕ್ಷಿತವಾಗಿ ಭೇದಿಸುವ ಕಾಂತಕ್ಷೇತ್ರದ ಸಾಮರ್ಥ್ಯದಿಂದಾಗಿ ಬಯೋಮೆಡಿಕಲ್ ಅಪ್ಲಿಕೇಶನ್‌ಗಳಲ್ಲಿ ರೊಬೋಟ್‌ಗಳಿಗೆ ಮ್ಯಾಗ್ನೆಟಿಕ್ ಆಕ್ಚುಯೇಶನ್ ಒಂದು ಭರವಸೆಯ ವಿಧಾನವಾಗಿ ಹೊರಹೊಮ್ಮಿದೆ. ಈ ಹಿಂದೆ ವೈದ್ಯಕೀಯ ಇಂಜಿನಿಯರ್‌ಗಳು ಕಡಿಮೆ ಸಾಮರ್ಥ್ಯದ ಒಳನುಗ್ಗುವ ವೈದ್ಯಕೀಯ ವಿಧಾನಗಳನ್ನು ಕೈಗೊಳ್ಳಲು ಘನ ಲೋಹಗಳ ಕವಚ ಹೊಂದಿದ ಮೃದುವಾದ ಮ್ಯಾಗ್ನೆಟಿಕ್ ರೊಬೋಟ್‌ಗಳನ್ನು ಬಳಸುವುದನ್ನು ಪ್ರದರ್ಶಿಸಿದ್ದರು. ಅದರಿಂದ ಅವರು ಕನಿಷ್ಠ ವೈದ್ಯಕೀಯ ಉಪಯುಕ್ತತೆಯನ್ನು ಹೊಂದಿದ್ದರು. ಇದನ್ನು ಗಮನಿಸಿದ ಸಂಶೋಧಕರು ಈ ನವೀನ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಉದ್ದೇಶಿತ ಔಷಧಿಗಳನ್ನು ಸಹ ತಲುಪಿಸುತ್ತದೆ.

ಈ ರೊಬೋಟ್ ಅನ್ನು ತಂಡವು ಪ್ರಯೋಗಾಲಯದಲ್ಲಿ ಪರೀಕ್ಷಿಸಿದೆ. ಪ್ರಯೋಗದ ವೇಳೆ ಚಿಕ್ಕ ರೊಬೋಟ್ ಯಶಸ್ವಿಯಾಗಿ 70 ಡಿಗ್ರಿ ಸೆಲ್ಸಿಯಸ್‌ವರೆಗೆ ನಿಗದಿತ ಅಂಗಾಂಶವನ್ನು ಬಿಸಿಮಾಡುತ್ತದೆ ಮತ್ತು ಉದ್ದೇಶಿತ ಅಂಗಾಂಶದ ಮೇಲೆ ಶಾಖದ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುತ್ತದೆ ಎಂದು ತೋರಿಸಿದೆ. ಅಲ್ಲದೇ ಅದರ 1ಸೆ.ಮೀ ್ಡ 2 ಸೆ.ಮೀ. ್ಡ

0.2 ಸೆ.ಮೀ. ಗಾತ್ರವೂ ಕೂಡಾ ದೇಹದೊಳಗೆ ಸುಲಭವಾಗಿ ನುಸುಳುವಂತೆ ರೂಪಿಸಲಾಗಿದೆ. ಭವಿಷ್ಯದಲ್ಲಿ ಹೈಪರ್‌ಥರ್ಮಿಯಾ ಚಿಕಿತ್ಸೆಗಾಗಿ ಕ್ಲಿನಿಕಲ್ ಅಪ್ಲಿಕೇಶನ್‌ಗಳಲ್ಲಿ ಈ ರೊಬೋಟ್ ಅನ್ನು ಬಳಸಿಕೊಳ್ಳಲು ತಂಡವು ಬಯಸುತ್ತದೆ. ಇದು ಸುತ್ತಮುತ್ತಲಿನ ಅಂಗಾಂಶಗಳ ಮೇಲೆ ಕಡಿಮೆ ಪ್ರಭಾವ ಬೀರುವ ಮೂಲಕ ಕ್ಯಾನ್ಸರ್‌ನಂತಹ ಕೋಶಗಳನ್ನು ನಾಶ ಮಾಡಲು ಆ ಅಂಗಾಂಶವನ್ನು ಬಿಸಿಮಾಡುವುದನ್ನು ಒಳಗೊಂಡಿರುತ್ತದೆ. ದೇಹದೊಳಗೆ ಶಸ್ತ್ರಚಿಕಿತ್ಸಾ ಸಾಧನಗಳು ತಲುಪಲು ಕಷ್ಟಕರವಾದ ಪ್ರದೇಶಗಳಲ್ಲಿ ರಕ್ತಸ್ರಾವವನ್ನು ನಿಯಂತ್ರಿಸಲು ಸಹ ಇದನ್ನು ಬಳಸಬಹುದು. ಇದಲ್ಲದೆ ರೊಬೋಟ್ ಕೆಲವು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ಔಷಧಿ ಸರಕು ಅಥವಾ ಇತರ ಚಿಕಿತ್ಸಕ ಅನ್ವಯಿಕೆಗಳನ್ನು ಅಂಗಾಂಶಗಳಿಗೆ ತಲುಪಿಸುತ್ತದೆ. ಮಿನಿ ರೊಬೋಟ್‌ಗಳು ಅಂಗಾಂಶಗಳ ಮೇಲೆ ಚಿಕಿತ್ಸಕ ಸಾಮಗ್ರಿಗಳನ್ನು ಬಿಡುಗಡೆ ಮಾಡಲು ಡಿಮ್ಯಾಗ್ನೆಟೈಜ್ ಮಾಡಲು ಸಮರ್ಥವಾಗಿವೆ. ಇದನ್ನು ಭವಿಷ್ಯದಲ್ಲಿ ಔಷಧಿಗಳನ್ನು ತಲುಪಿಸಲು ಬಳಸಬಹುದು ಎಂದು ಲೇಖಕರು ಸಂಶೋಧನಾ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ಸದ್ಯಕ್ಕೆ ರೊಬೋಟ್ ಅನ್ನು ಸಣ್ಣಕರುಳಿನ ಅಂಗಾಂಶದ ಮೇಲೆ ಮಾತ್ರ ಪರೀಕ್ಷಿಸಲಾಗಿದ್ದು, ಮತ್ತಷ್ಟು ಪರೀಕ್ಷೆಯ ಅಗತ್ಯವಿದೆ ಎಂದು ಅದರ ರಚನೆಕಾರರು ಹೇಳಿದ್ದಾರೆ. ಕ್ಯಾನ್ಸರ್ ಚಿಕಿತ್ಸೆ ಅಥವಾ ರಕ್ತಸ್ರಾವವನ್ನು ನಿಲ್ಲಿಸಲು ಮತ್ತು ಔಷಧಗಳನ್ನು ಸಾಗಿಸಲು ಉಪಯುಕ್ತವಾದ ರೀತಿಯಲ್ಲಿ ಅಂಗಾಂಶದ ಮೇಲೆ ವೈದ್ಯಕೀಯ ಚಿಕಿತ್ಸೆಗಳನ್ನು ನಿರ್ವಹಿಸುತ್ತದೆ ಎಂದು ರಚನಾಕಾರರು ಹೇಳಿದ್ದಾರೆ. ಮೃದುವಾದ ಲೋಹಗಳಿಂದ ತಯಾರಿಸಿದ ಮ್ಯಾಗ್ನೆಟಿಕ್ ಸಾಫ್ಟ್ ರೊಬೋಟ್‌ಗಳು ಶಸ್ತ್ರಚಿಕಿತ್ಸೆ ಅಥವಾ ಇತರ ಆಕ್ರಮಣಕಾರಿ ವಿಧಾನಗಳಿಲ್ಲದೆ ದೇಹದಾದ್ಯಂತ ಸಂಚರಿಸಲು ಅನುವು ಮಾಡಿಕೊಡುವ ಮೂಲಕ ವೈದ್ಯಕೀಯ ಪ್ರಕ್ರಿಯೆಗಳಿಗೆ ಉಪಯುಕ್ತವಾಗಬಹುದು. ಆದಾಗ್ಯೂ ಇಂತಹ ಸಂಕೀರ್ಣ ಕಾರ್ಯಗಳ ನಿರ್ವಹಣೆಗೆ ತುಂಬಾ ಹೆಣಗಾಡಬೇಕಾಗುತ್ತದೆ. ಏಕೆಂದರೆ ರೊಬೋಟ್‌ಗಳನ್ನು ಅಭಿವೃದ್ಧಿಪಡಿಸಿದಂತೆ ಸುರಕ್ಷತೆ ಮತ್ತು ಕ್ರಿಯಾತ್ಮಕತೆಯನ್ನು ಸೀಮಿತಗೊಳಿಸಲಾಗುತ್ತದೆ. ಆ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನದಲ್ಲಿ, ಸಂಶೋಧಕರು ಪ್ಯಾಂಗೊಲಿನ್‌ನತ್ತ ತಮ್ಮ ಚಿತ್ತವನ್ನು ಹರಿಸಿದರು. ಪ್ಯಾಂಗೊಲಿನ್‌ನ ಚಿಪ್ಪುಗಳು ಪ್ರಸಕ್ತ ಸಂಶೋಧನೆಗೆ ನಾಂದಿಯಾದದ್ದು ವಿಶೇಷವಲ್ಲವೇ?

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಆರ್.ಬಿ ಗುರುಬಸವರಾಜು

contributor

Similar News