×
Ad

ಬೆಂಗಳೂರು ಡಬಲ್ ಮರ್ಡರ್ ನಲ್ಲೂ ಬಿಜೆಪಿ ರಾಜಕೀಯ !

Update: 2023-07-14 22:25 IST

- ಆರ್. ಜೀವಿ

​ಎಲ್ಲವನ್ನೂ ಕೋಮುವಾದಿ ಕಣ್ಣುಗಳಿಂದಲೇ ನೋಡೋದು ಬಿಜೆಪಿಗೆ ಚಾಳಿಯೇ ಆಗಿಬಿಟ್ಟಿದೆ. ಎಲ್ಲದಕ್ಕೂ ಮತೀಯ ಬಣ್ಣ ಹಚ್ಚುವುದನ್ನು ಅದು ಉದ್ದೇಶಪೂರ್ವಕವಾಗಿಯೇ ಮಾಡುತ್ತಿರೋ ಹಾಗಿದೆ. ಕರ್ನಾಟಕದಲ್ಲಿನ ಸೋಲಿನ ಬಳಿಕವಂತೂ ಬಿಜೆಪಿ ಎಷ್ಟು ಹತಾಶಗೊಂಡಿದೆ ಎಂದರೆ, ಕರ್ನಾಟಕದಲ್ಲಿ ಏನೇ ಆದರೂ ಅದಕ್ಕೆ ಹಿಂದೂ ಮುಸ್ಲಿಂ ಎಂಬ ಆಯಾಮ ಕೊಡಲಾಗುತ್ತಿದೆ. ಈ ಬಾರಿ ರಾಜ್ಯ ನಾಯಕರು ಸಾಕಾಗೋದಿಲ್ಲ ಅಂತ ಆ ಪಕ್ಷದ ದಿಲ್ಲಿ ನಾಯಕರು, ಸಚಿವರೂ ಈ ಸುಳ್ಳು ಹರಡುವ ಅಭಿಯಾನದಲ್ಲಿ ಕೈ ಜೋಡಿಸಿದ್ದಾರೆ.

ಲೋಕಸಭಾ ಚುನಾವಣೆಗೂ ಮುನ್ನ ಹೇಗಾದರೂ ಹಿಂದೂ ಮುಸ್ಲಿಂ ಧ್ರುವೀಕರಣ ಮಾಡಲು ಪಣತೊಟ್ಟು ಕಣಕ್ಕಿಳಿದಂತಿದೆ ಬಿಜೆಪಿ. ಅದಕ್ಕಾಗಿ ಯಾವುದೇ ಘಟನೆಗೂ ಕೋಮು ಬಣ್ಣ ಹಚ್ಚುವ ಹತಾಶ ಪ್ರಯತ್ನವನ್ನು ಮತ್ತೆ ಮತ್ತೆ ಮಾಡುತ್ತಲೇ ಇದೆ. ಜನರಲ್ಲಿ ಮುಸ್ಲಿಂ ದ್ವೇಷವನ್ನು ಬಿತ್ತುವ ಮೂಲಕವೇ ತನ್ನ ಬೇಳೆ ಬೇಯಿಸಿಕೊಳ್ಳುವುದು ಅದು ಮಾಡುತ್ತಲೇ ಬಂದಿರುವ ಕೆಲಸ. ಈಗಲೂ ಅದನ್ನೇ ಮಾಡುತ್ತಿದೆ.

ಈಚೆಗೆ ಬೆಳಗಾವಿಯಲ್ಲಿ ಜೈನಮುನಿ ಹತ್ಯೆ ಹಾಗು ಮೈಸೂರಿನ ಟಿ ನರಸೀಪುರದಲ್ಲಿ ನಡೆದಿರೋ ಕೊಲೆ ವಿಚಾರದಲ್ಲೂ ಕೋಮುಬಣ್ಣ ಬಳಿಯಲು ನೋಡಿದ್ದ ಬಿಜೆಪಿ ಈಗ ಬೆಂಗಳೂರಿನಲ್ಲಿ ನಡೆದಿರೋ ಡಬಲ್ ಮರ್ಡರ್ ವಿಚಾರದಲ್ಲಿಯೂ ಅದನ್ನೇ ಮಾಡಹೊರಟಿದೆ. ಬಿಜೆಪಿ ರಾಷ್ಟ್ರೀಯ ನಾಯಕರುಗಳೇ ಕರ್ನಾಟಕದಲ್ಲಿ ಕೋಮು ಪ್ರಚೋದನೆಗೆ ಮುಂದಾಗಿರುವುದು ನೋಡಿದರೆ, ಏನೇ ಆದರೂ ಅದಕ್ಕೆ ಕೋಮುಸ್ವರೂಪ ಕೊಡಲೇಬೇಕು ಎಂದುಕೊಂಡಿರೋ ಹಾಗಿದೆ.

ಅಷ್ಟಕ್ಕೂ, ಬೆಂಗಳೂರಿನಲ್ಲಿ ನಡೆದ ಡಬಲ್ ಮರ್ಡರ್, ವ್ಯವಹಾರದ ಹಿನ್ನೆಲೆಯಲ್ಲಿನ ದ್ವೇಷದಿಂದ ನಡೆದಿರೋದು. ಆದರೆ ಕೊಲೆಯಾದವರಿಬ್ಬರನ್ನೂ ಹಿಂದೂ ರಾಷ್ಟ್ರೀಯ ಚಿಂತನೆ ಜೊತೆ ಲಿಂಕ್ ಮಾಡಿ, ಅವರಿಬ್ಬರ ಕೊಲೆಗೆ ಬೇರೆಯದೇ ಆಯಾಮ ಕೊಡಲು ಬಿಜೆಪಿ ನಾಯಕರು ಯತ್ನಿಸುತ್ತಿದ್ದಾರೆ.

ವಾಸ್ತವದಲ್ಲಿ ಹಾಗಿಲ್ಲವೇ ಇಲ್ಲ. ಡಬಲ್ ಮರ್ಡರ್ ಪ್ರಕರಣದಲ್ಲಿ ಮೂವರು ಆರೋಪಿಗಳ ಬಂಧನವಾಗಿದೆ. ಸಾಮಾನ್ಯವಾಗಿ ಹೀಗೆ ಬಂಧಿತರಲ್ಲಿ ಮುಸ್ಲಿಮರಿದ್ದರೆ ಕೂಡಲೇ ಬಿಜೆಪಿ, ಸಂಘ ಪರಿವಾರ ಅದನ್ನು ಕೋಮು ದ್ವೇಷಕ್ಕೆ ಲಿಂಕ್ ಮಾಡುತ್ತದೆ. ಆದರೆ ಇಲ್ಲಿ ಬಂಧಿತ ಮೂವರು ಶಬರಿಷ್ ಅಲಿಯಾಸ್ ಫಿಲಿಕ್ಸ್‌ , ರೂಪೇನಾ ಅಗ್ರಹಾರದ ವಿನಯ್ ರೆಡ್ಡಿ (23) ಹಾಗೂ ಮಾರೇನಹಳ್ಳಿ ಸಂತು ಅಲಿಯಾಸ್ ಸಂತೋಷ್‌ .

ಆದರೆ ಬಿಜೆಪಿ ಸುಳ್ಳು ಕಥೆ ಹೇಳತೊಡಗಿದೆ. ಕೊಲೆಯಾದ ಫಣೀಂದ್ರ ಸುಬ್ರಹ್ಮಣ್ಯ ಹಿಂದೂ ಸ್ವಾಮೀಜಿ ಎಂದು ಬಿಂಬಿಸುವ ಮಟ್ಟಕ್ಕೆ ಅದು ಎಗ್ಗಿಲ್ಲದೆ ಸುಳ್ಳು ಹೇಳುತ್ತಿದೆ. ಫಣೀಂದ್ರ ಬಿಜೆಪಿ ಹೇಳುವಂತಹ ಸಂತನೇನೂ ಆಗಿರಲಿಲ್ಲ. ಅವರು ಕಂಪನಿಯೊಂದರ ಎಂ.ಡಿ. ಆಗಿದ್ದರು.

ಉದ್ಯಮದಲ್ಲಿನ ದ್ವೇಷದಿಂದ ಮತ್ತೊಂದು ಕಂಪನಿಯ ವ್ಯಕ್ತಿಯೊಬ್ಬರು ಸುಪಾರಿ ಕೊಟ್ಟು ಕೊಲ್ಲಿಸಿರೋದು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಬಿಜೆಪಿಗೆ ಕೋಮು ಧ್ರುವೀಕರಣಕ್ಕೆ ನೆವ ಬೇಕಾಗಿದೆ. ಹೀಗಾಗಿ ಇದ್ದಕ್ಕಿದ್ದಂತೆ ಸುಳ್ಳು ಕಥೆ ಸೃಷ್ಟಿಸಲಾಗುತ್ತಿದೆ. ಇದೆಲ್ಲದರ ಉದ್ದೇಶ, ಚುನಾವಣೆಯಲ್ಲಿ ಮಣ್ಣುಮುಕ್ಕಿಸಿರೋ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವುದು. ಅದು ಅಲ್ಪಸಂಖ್ಯಾತರನ್ನು ಮೆಚ್ಚಿಸುವುದರಲ್ಲಿ ತೊಡಗಿದೆ ಎಂದು ಬಿಂಬಿಸುವುದು.

ಹೀಗೆ ಹೇಳಿ ಹೇಳಿಯೇ ಜನರ ಮನಸ್ಸಲ್ಲಿ ಒಂದು ಹಂತದಲ್ಲಿ ಜಿಗುಪ್ಸೆ ಮೂಡಿಸಿ, ಕಡೆಗೆ ಅಧಿಕಾರ ಕಳೆದುಕೊಂಡಿರೋ ಬಿಜೆಪಿಗೆ ಇನ್ನಾದರೂ ಬುದ್ಧಿ ಬಂದಿಲ್ಲ. ಬಿಜೆಪಿ ನಾಯಕ, ಕೇಂದ್ರ ಐಟಿ ಸಚಿವ ರಾಜೀವ್ ಚಂದ್ರಶೇಖರ್, ಡಬಲ್ ಮರ್ಡರ್ ಘಟನೆಗೆ ಸಂಬಂಧಿಸಿ ಮತ್ತೊಮ್ಮೆ ಕಾಂಗ್ರೆಸ್ ಅನ್ನು ದೂಷಿಸಿದ್ದಾರೆ.

" ಹಿಂದೂ ನಾಯಕನ ಹತ್ಯೆಯಾಗಿದೆ" ಎಂದು ಹಿಂದೂ ಜನಜಾಗೃತಿ ಸಮಿತಿಯ ಮೋಹನ್ ಗೌಡ ಎಂಬಾತನ ಟ್ವೀಟ್ ಹಂಚಿಕೊಂಡಿರೋ ರಾಜೀವ್ ಚಂದ್ರಶೇಖರ್, "ಇದು ಕಾಂಗ್ರೆಸ್ ಸರ್ಕಾರಗಳ ಮತ್ತೊಂದು ವಿಶಿಷ್ಟ ಲಕ್ಷಣಗಳಲ್ಲೊಂದಾಗಿದೆ. ಕಾಂಗ್ರೆಸ್ ನ ಅತಿಯಾದ ಓಲೈಕೆ ರಾಜಕಾರಣದಿಂದ, ಕೊಲೆಗಾರರು & ಭಯೋತ್ಪಾದಕ ಸಂಘಟನೆಗಳು ಕಾಂಗ್ರೆಸ್ ನ ಸುರಕ್ಷಿತ ಧಾಮಗಳಲ್ಲಿ ಉತ್ತೇಜನಗೊಳ್ಳುತ್ತಿದ್ದಾರೆ. ಟಿಎಂಸಿ ಅಂತಹ ಕಾಂಗ್ರೆಸ್ ನ ಮಿತ್ರ ಪಕ್ಷಗಳು ಆಡಳಿತದಲ್ಲಿರುವ ಕಡೆ, ಹಿಂದೂಗಳ ಮೇಲೆ ದಾಳಿ ಮಾಡುವ ಅಪರಾಧಿಗಳಿಗೆ, ಕಾಂಗ್ರೆಸ್ ನಾಯಕರು ಉಚಿತ ಪಾಸ್ ಗಳನ್ನು ನೀಡುತ್ತಿರುವುದು ನೂರಕ್ಕೆ ನೂರರಷ್ಟು ನಿಜವಾಗಿದೆ." ಎಂದು ತೀರಾ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ.

ಜೈನಮುನಿ ಹತ್ಯೆ ಸಂದರ್ಭದಲ್ಲೂ ಅವರು, " ಕರ್ನಾಟಕ ಕ್ರಿಮಿನಲ್ಗಳ ಸುರಕ್ಷಿತ ಸ್ವರ್ಗವಾಗುತ್ತಿದೆ " ಎಂದೇ ಟ್ವೀಟ್ ಮಾಡಿದ್ದರು. ಇವರಲ್ಲದೆ, ಮತ್ತೋರ್ವ ಬಿಜೆಪಿ ನಾಯಕ, ಸುನೀಲ್ ದಿಯೋಧರ್ ಕೂಡ ಟ್ವೀಟ್ ಮಾಡಿ, "ಬೆಂಗಳೂರಲ್ಲಿ ಹಿಂದೂ ಶ್ರೀಗಳ ಹತ್ಯೆಯಾಗಿದೆ. ಟಿಪ್ಪು ಸಿದ್ದಾಂತಿಗಳಿಂದ ಕರ್ನಾಟಕಕ್ಕೆ ಅಪಾಯಕಾರಿ ಸ್ಥಿತಿ ಬಂದೊದಗಿದೆ " ಎಂದು ಆರೋಪಿಸಿದ್ದಾರೆ.

ಇನ್ನು ಸಿಟಿ ರವಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, " ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಟಾರ್ಗೆಟ್ ಕಿಲ್ಲಿಂಗ್ ನಡೀತಿದೆ " ಎಂದು ಎಂದಿನಂತೆ ಆಧಾರರಹಿತ ಆರೋಪ ಮಾಡಿದ್ದಾರೆ. " ಫಣೀಂದ್ರ, ವಿನುಕುಮಾರ್ ಹತ್ಯೆ ಮೇಲ್ನೋಟಕ್ಕೆ ವೈಯಕ್ತಿಕ ಅನಿಸುತ್ತದೆ. ಆದರೆ ಇವರೆಲ್ಲರೂ ರಾಷ್ಟ್ರೀಯ ಚಿಂತನೆಯಲ್ಲಿ ಗುರುತಿಸಿಕೊಂಡ ಜನ. ಹಾಗಿದ್ದಾಗ ಸರಣಿ ಹತ್ಯೆಯ ಹಿಂದೆ ಪಿತೂರಿ ಇದ್ಯಾ ಎಂಬ ಅನುಮಾನ ಕಾಡುತ್ತಿದೆ " ಎಂದಿದ್ದಾರೆ.

ಅಂತೂ ಇವರಿಗೆಲ್ಲ ಕರ್ನಾಟಕದಲ್ಲಿ ಏನೇ ನಡೆದರೂ, ಅದರ ಹಿಂದೆ ಕೋಮುವಾದವೇ ಇದೆ ಎಂದು ಬಿಂಬಿಸುವುದಕ್ಕೆ ಬಹಳ ಆತುರ. ಮತ್ತು ಹಾಗೆ ಬಿಂಬಿಸುವುದಕ್ಕಾಗಿ ಅವರಿಗೆ ಹೇಗೆ ಬೇಕೊ ಹಾಗೆ ಸುಳ್ಳುಗಳನ್ನೂ ಸೃಷ್ಟಿಸಿಕೊಳ್ಳಬಲ್ಲರು. ಟಿಪ್ಪು ವಿಚಾರದಲ್ಲಿ ಉರಿಗೌಡ, ನಂಜೇಗೌಡ ಪಾತ್ರಗಳನ್ನು ಸೃಷ್ಟಿಸಿದವರು ಇವರೇ ಅಲ್ಲವೆ ?

ಎಲ್ಲ ವಿಚಾರದಲ್ಲೂ ಹೋದಲ್ಲಿ ಬಂದಲ್ಲೆಲ್ಲ ಸುಳ್ಳು ಹೇಳುವುದೇ ಈಗ ಬಿಜೆಪಿಯ ಕೆಲಸವಾಗಿಬಿಟ್ಟಿದೆ. ನಿಮಗೆ ನೆನಪಿರಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ದಂಗೆ ಆಗುತ್ತದೆ ಎಂದು ಚುನಾವಣಾ ಪ್ರಚಾರದ ವೇಳೆ ಅಮಿತ್ ಶಾ ಹೇಳಿದ್ದರು. ಬಿಜೆಪಿ ನಾಯಕರೆಲ್ಲರ ಈಗಿನ ವರಸೆ ನೋಡಿದರೆ, ಇವರೇ ಎಲ್ಲ ಸೇರಿ ಅಂಥ ಸನ್ನಿವೇಶ ಸೃಷ್ಟಿಸುವುದಕ್ಕೆ ಹೊರಟಂತಿದೆ.

ಇವರಿಗೆ ಬಾಲಾಸೋರ್ ರೈಲು ದುರಂತದ ಹಿಂದೆಯೂ ಇಲ್ಲದ ಪಿತೂರಿಯೇ ಕಾಣಿಸುತ್ತದೆ. ಅದಕ್ಕೂ ಇಲ್ಲದ ಕೋಮು ಬಣ್ಣ ಹಚ್ಚಲು ನೋಡಲಾಯಿತು ಎಂಬುದು ನಮಗೆ ನೆನಪಿದೆ. ಸ್ಟೇಷನ್ ಮಾಸ್ಟರ್ ಷರೀಫ್ ಎಂದು ಸುಳ್ಳು ಹೇಳಿದ್ದು, ಪಕ್ಕದಲ್ಲೇ ಮಸೀದಿ ಇದೆ ಎಂದು ಇಸ್ಕಾನ್ ದೇವಾಲಯವನ್ನು ತೋರಿಸಿ ಹೇಳಿದ್ದು ಇದೇ ಬಿಜೆಪಿ ಪಕ್ಷದವರು. ಆಮೇಲೆ ಆ ಸುಳ್ಳೂ ಬಯಲಾಯಿತು.

ಅಂತೂ ಬಿಜೆಪಿಯ ಸುಳ್ಳುಗಳು ಮುಗಿಯುವುದಿಲ್ಲ. ಹಿಂದು ಮುಸ್ಲಿಂ ಎನ್ನುತ್ತ ಅದು ದ್ವೇಷ ಹರಡುವುದು ನಿಲ್ಲುವುದಿಲ್ಲ. ಹಾಗೆ ಹೇಳುತ್ತ ದೇಶವನ್ನು ಹಾಳುಗೆಡಹುವುದನ್ನು ಇವರು ನಿಲ್ಲಿಸೋದು ಯಾವಾಗ ?

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News