ಚಲಿಸುತ್ತಿದ್ದ ರೈಲಿನಲ್ಲಿ ನಾಲ್ಕು ಮಂದಿಯನ್ನು ಗುಂಡಿಕ್ಕಿ ಕೊಂದ ಚೇತನ್ ಸಿಂಗ್
ಆರ್. ಜೀವಿ
"ಪಾಕಿಸ್ತಾನ್ ಸೆ ಆಪರೇಟ್ ಹುಯೇ ಯೇ . ಔರ್ ಮೀಡಿಯಾ ಯಹೀ ಕವರೇಜ್ ದಿಖಾ ರಹೀ ಹೈ. ಉನ್ಕೋ ಸಬ್ ಪತಾ ಚಲ್ ರಹಾ ಹೈ ಯೇ ಕ್ಯಾ ಕರ್ ರಹೇ ಹೈನ್ ... ಅಗರ್ ವೋಟ್ ದೇನಾ ಹೈ , ಅಗರ್ ಹಿಂದೂಸ್ತಾನ್ ಮೇ ರೆಹನಾ ಹೈ ತೋ ಮೈ ಕೆಹತಾ ಹೂಂ ಮೋದಿ ಔರ್ ಯೋಗಿ, ಯೇ ದೋ ಹೈನ್.. ಔರ್ ಆಪ್ಕೆ ಠಾಕ್ರೆ.. "
"ಇವರು ಪಾಕಿಸ್ತಾನದಿಂದ ಆಪರೇಟ್ ಆಗುತ್ತಿದ್ದವರು... ಮೀಡಿಯಾ ಕೂಡ ಇದನ್ನೇ ಸುದ್ದಿ ಮಾಡಿ ತೋರಿಸ್ತಾ ಇದೆ... ಇವರು ಏನು ಮಾಡುತ್ತಿದ್ದರು ಎಂದು ಅವರಿಗೆ ಎಲ್ಲ ಗೊತ್ತಾಗಿ ಬಿಟ್ಟಿದೆ... ಇಲ್ಲಿ ವೋಟ್ ಕೊಡಬೇಕಿದ್ದರೆ, ಭಾರತದಲ್ಲಿ ಇರಬೇಕಾದರೆ ನಾನು ಹೇಳೋದು ಇಲ್ಲಿರೋದು ಮೋದಿ ಮತ್ತು ಯೋಗಿ ಇಬ್ಬರೇ... ಮತ್ತು ನಿಮ್ಮ ಠಾಕ್ರೆ... "
ಸೋಮವಾರ ಬೆಳಗ್ಗೆ ಚಲಿಸುತ್ತಿರುವ ಟ್ರೇನ್ ನಲ್ಲಿ ಒಬ್ಬರು ಹಿರಿಯಧಿಕಾರಿ ಹಾಗು ಮೂವರು ಅಮಾಯಕ ಪ್ರಯಾಣಿಕರನ್ನು ದಿಢೀರನೇ ಗುಂಡು ಹಾರಿಸಿ ಕೊಂದು ಹಾಕಿದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ನ ಗಾರ್ಡ್ ಚೇತನ್ ಸಿಂಗ್ ಆ ಬಳಿಕ ಹೇಳಿರುವ ಮಾತುಗಳಿವು. ದೇಶದ ಮೀಡಿಯಾ ಹಾಗು ಸೋಷಿಯಲ್ ಮೀಡಿಯಾದಲ್ಲಿ ಕಂಡು ಬರುತ್ತಿರುವ ವಿಪರೀತ ಹಾಗು ತೀರಾ ಧುವೀಕರಣಗೊಂಡ ವಾತಾವರಣದ ಫಲಿತಾಂಶ ಇದು ಎಂದು ಕಾಂಗ್ರೆಸ್ ಹೇಳಿದೆ.
ಆರ್ ಪಿ ಎಫ್ ಜವಾನ ಚೇತನ್ ಸಿಂಗ್ ನಾಲ್ಕು ಮಂದಿಯನ್ನು ಕೊಂದಿದ್ದಾನೆ. ಅದರಲ್ಲಿ ಮೂವರು ಮುಸ್ಲಿಮರು. ಇನ್ನೊಬ್ಬರು ಆದಿವಾಸಿ ಸಮುದಾಯದವರು. ನಾಳೆ ಚೇತನ್ ಸಿಂಗ್ ಮಾನಸಿಕವಾಗಿ ಅಸ್ವಸ್ಥ ಎಂದು ಘೋಷಿಸಲಾಗುತ್ತದೆ. ನನ್ನನ್ನು ನಂಬಿ. ಈ ಮಾನಸಿಕ ಅಸ್ವಸ್ಥತೆ ಈಗ ನಮ್ಮ ಇಡೀ ಸಮಾಜಕ್ಕೆ ಹರಡಿದೆ. ಎಂದು ಹೇಳಿದ್ದಾರೆ ಆರ್ ಜೆ ಡಿ ನಾಯಕ ಹಾಗು ರಾಜ್ಯಸಭಾ ಸಂಸದ ಮನೋಜ್ ಜಾ.
ಇದು ಮುಸ್ಲಿಮರನ್ನು ಟಾರ್ಗೆಟ್ ಮಾಡಿ ನಡೆಸಿರುವ ಭಯೋತ್ಪಾದಕ ಕೃತ್ಯ ಎಂದು ಹೇಳಿರುವ ಸಂಸದ ಅಸದುದ್ದೀನ್ ಉವೈಸಿ ದೇಶದಲ್ಲಿ ನಿರಂತರ ನಡೆಯುತ್ತಿರುವ ಮುಸ್ಲಿಂ ದ್ವೇಷದ ಭಾಷಣಗಳು ಹಾಗು ಅದನ್ನು ತಡೆಯಲು ಮನಸ್ಸಿಲ್ಲದ ಪ್ರಧಾನಿ ಮೋದಿಯವರ ಧೋರಣೆಯ ಫಲಿತಾಂಶ ಎಂದಿದ್ದಾರೆ. ಈ ಆರೋಪಿ ನಾಳೆ ಬಿಜೆಪಿ ಅಭ್ಯರ್ಥಿ ಆಗಲಿದ್ದಾನಾ ? ಆತನಿಗೆ ಸರಕಾರವೇ ಬೆಂಬಲಿಸಿ ಜಾಮೀನು ಕೊಡಿಸುತ್ತದೆಯೇ ? ಆತ ಬಿಡುಗಡೆಯಾದಾಗ ಆತನಿಗೆ ಹಾರ ಹಾಕಿ ಸ್ವಾಗತಿಸಲಾಗುವುದೇ ? ನಾನು ಹೇಳಿದ್ದು ಸುಳ್ಳಾದರೆ ಬಹಳ ಸಂತೋಷ ಎಂದೂ ಅಸದುದ್ದೀನ್ ಹೇಳಿದ್ದಾರೆ.
ಘಟನೆಯ ವಿವರ :
ಸೋಮವಾರ ಬೆಳ್ಳಂಬೆಳಗ್ಗೆ 5 ಗಂಟೆಗೆ ಜೈಪುರ್ ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ಟ್ರೇನ್ ವಾಪಿ ಸ್ಟೇಷನ್ ನಿಂದ ಹೊರಟು ವೈಟರ್ನ ಸ್ಟೇಷನ್ ಸಮೀಪಿಸುತ್ತಿದ್ದಾಗ ಇದ್ದಕ್ಕಿದ್ದಂತೆ ತನ್ನ ಸರಕಾರಿ ಆಟೋಮ್ಯಾಟಿಕ್ ರೈಫಲ್ ಕೈಗೆತ್ತಿಕೊಂಡ ರೈಲ್ವೆ ಗಾರ್ಡ್ ಚೇತನ್ ಸಿಂಗ್ ಮೊದಲು ತನ್ನ ಹಿರಿಯಧಿಕಾರಿ ಎ ಎಸ್ ಐ ಟೀಕಾರಾಮ್ ಮೀನಾ ಅವರಿಗೆ ಗುಂಡಿಕ್ಕುತ್ತಾನೆ. ಅವರು ಅಲ್ಲೇ ಮೃತಪಡುತ್ತಾರೆ. ಅಲ್ಲಿಗೇ ನಿಲ್ಲದ ಚೇತನ್ ಸಿಂಗ್ ಅದೇ ಕೋಚ್ ನಲ್ಲಿದ್ದ ಅಬ್ದುಲ್ ಖಾದರ್ ಹುಸೇನ್ ಎಂಬ ಪ್ರಯಾಣಿಕನನ್ನೂ ಗುಂಡು ಹಾರಿಸಿ ಕೊಲ್ಲುತ್ತಾನೆ. ಆಮೇಲೆ ಅಲ್ಲಿಂದ ಸುಮಾರು ಐದು ಕೋಚ್ ಗಳಲ್ಲಿ ಓಡಾಡುವ ಚೇತನ್ ಸಿಂಗ್ ಅಲ್ಲಿ - ಅಸ್ಗರ್ ಅಬ್ಬಾಸ್ ಶೇಖ್, ಅಬ್ದುಲ್ ಖಾದರ್ ಬಾಯ್ ಭನ್ಪುರ್ವಾಲಾ , ಸದರ್ ಮೊಹಮ್ಮದ್ ಹುಸೇನ್ ಎಂಬ ಪ್ರಯಾಣಿಕರ ಮೇಲೆ ಗುಂಡು ಹಾರಿಸಿ ಕೊಲೆ ಮಾಡುತ್ತಾನೆ. ಒಟ್ಟು 12 ಸುತ್ತು ಗುಂಡು ಹಾರಿಸಿದ್ದಾನೆ ಚೇತನ್ ಸಿಂಗ್. ರೈಲು ಮೀರಾ ರೋಡ್ ರೈಲ್ವೆ ಸ್ಟೇಷನ್ ನಲ್ಲಿ ನಿಂತಾಗ ಓಡಿ ಪರಾರಿಯಾಗಲು ಯತ್ನಿಸಿದ ಚೇತನ್ ಸಿಂಗ್ ನನ್ನು ಪೊಲೀಸರು ಹಾಗು ಆರ್ ಪಿ ಎಫ್ ನವರು ಹಿಡಿದಿದ್ದಾರೆ. ಈಗ ಆತ ಬಂಧನದಲ್ಲಿದ್ದಾನೆ. ಪ್ರಕರಣ ದಾಖಲಾಗಿದೆ.
ಆತ ಮಾತನಾಡಿದ್ದಾನೆ ಎಂದು ವೈರಲ್ ಆಗುತ್ತಿರುವ ವೀಡಿಯೊ ಬಗ್ಗೆ ಅದು ಅಸಲಿಯೇ ಎಂದು ತನಿಖೆ ನಡೆಸಲಾಗುವುದು ಎಂದು ಪಶ್ಚಿಮ ರೈಲ್ವೆಯ ವಕ್ತಾರ ಸುಮಿತ್ ಠಾಕೂರ್ ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ. ಘಟನೆ ನಡೆದ ಬೆನ್ನಿಗೇ ಚೇತನ್ ಸಿಂಗ್ ಅಸ್ವಸ್ಥನಾಗಿದ್ದ. ಆತ ತನ್ನನ್ನು ತನ್ನ ಡ್ಯೂಟಿ ಅವಧಿ ಮುಗಿಯುವ ಮುನ್ನವೇ ಕಳಿಸಬೇಕು ಎಂದು ಹೇಳಿದ್ದ. ಆಮೇಲೆ ತಾನು ಸರಿಯಾಗಿದ್ದೇನೆ. ಡ್ಯೂಟಿ ತಾನೇ ಮುಗಿಸುತ್ತೇನೆ ಎಂದು ಹೇಳಿದ್ದ ಎಂದೂ ವರದಿಯಾಗಿದೆ. ಈಗ ದಾಖಲಾಗಿರುವ ಎಫ್ ಐ ಆರ್ ಪ್ರಕಾರ ಡ್ಯೂಟಿ ಮುಗಿಸಿಯೇ ಹೋಗಬೇಕು ಎಂದು ಹಿರಿಯಧಿಕಾರಿಗಳು ಹೇಳಿದ್ದರಿಂದ ಚೇತನ್ ಸಿಂಗ್ ಸಿಟ್ಟಾಗಿದ್ದ. ಅವರೊಂದಿಗೆ ಜಗಳ ಮಾಡಿದ್ದ. ಪ್ರಯಾಣಿಕರ ಜೊತೆ ಕೂಡ ಆತ ಜಗಳ ಮಾಡಿದ್ದ. ಆಗ ಎ ಎಸ್ ಐ ಟೀಕಾರಾಮ್ ಮೀನಾ ಅವರು ಆತನೊಂದಿಗೆ ಮಾತಾಡಿದ್ದರು. ಇದೆಲ್ಲ ನಡೆದಿದ್ದು ಪಾಲ್ ಘರ್ ಸ್ಟೇಷನ್ ಬಳಿ. ಆಮೇಲೆ ಗುಂಡಿನ ದಾಳಿ ನಡೆದಿದೆ.
ಚೇತನ್ ಸಿಂಗ್ ಉತ್ತರ ಪ್ರದೇಶದ ಹತ್ರಸ್ ನವನು. ಪೇದೆಯಾಗಿದ್ದ ಆತನ ತಂದೆಯ ನಿಧನದ ಬಳಿಕ ಅನುಕಂಪದ ಆಧಾರದಲ್ಲಿ ಈ ಉದ್ಯೋಗ ಆತನಿಗೆ ಸಿಕ್ಕಿತ್ತು. 12 ದಿನಗಳ ರಜೆಯ ಬಳಿಕ ಆತ ಕರ್ತವ್ಯಕ್ಕೆ ಮರಳಿದ್ದ. "ಆತ ಸ್ವಲ್ಪ ಸಿಡುಕು ಸ್ವಭಾವದ ವ್ಯಕ್ತಿ. ಆದರೆ ಕಳೆದ ಐದು ವರ್ಷಗಳ ಆತನ ದಾಖಲೆಯಲ್ಲಿ ಈ ರೀತಿಯ ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ. ಅದಕ್ಕಾಗಿಯೇ ಆತನನ್ನು ನಾವು ಇಲ್ಲಿ ಕರ್ತವ್ಯಕ್ಕೆ ನಿಯೋಜಿಸಿದ್ದೆವು. ಐದು ವರ್ಷಕ್ಕೊಮ್ಮೆ ನಡೆಯುವ ಮೆಡಿಕಲ್ ಚೆಕ್ ಅಪ್ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಆಮೇಲೆ ಪ್ರತಿ ವರ್ಷ ನಡೆಯುವ ಮೆಡಿಕಲ್ ಚೆಕ್ ಅಪ್ ಕೂಡಾ ನಡೆದಿತ್ತು. ಅಲ್ಲಿ ಅಂತಹದ್ದೇನೂ ಅಸಹಜ ವಿಷಯಗಳು ಕಂಡು ಬಂದಿಲ್ಲ " ಎಂದಿದ್ದಾರೆ ವೆಸ್ಟರ್ನ್ ರೈಲ್ವೆಯ ಪ್ರಿನ್ಸಿಪಾಲ ಚೀಫ್ ಸೆಕ್ಯೂರಿಟಿ ಕಮಿಷನರ್ ಪಿ ಸಿ ಸಿನ್ಹಾ. ಅದೇ ಸಿನ್ಹಾ ಮೊದಲು ಚೇತನ್ ಸಿಂಗ್ ಗೆ ಮಾನಸಿಕ ಅರೋಗ್ಯ ಸಮಸ್ಯೆ ಇತ್ತು ಎಂದು ಹೇಳಿದ್ದರು. ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಆದರೆ ಬೊರಿವಲಿ ಜಿ ಆರ್ ಪಿ ಗೆ ಭೇಟಿ ನೀಡಿದ ಬಿಜೆಪಿ ಶಾಸಕ ಮನಿಷಾ ಚೌಧರಿ " ಘಟನೆಗೆ ಕಾರಣಗಳು ಏನೇನು ಎಂದು ಸಮಗ್ರ ತನಿಖೆ ನಡೆಯಬೇಕು. ಆರೋಪಿಗೆ ಡಿಪ್ರೆಶನ್ ಅಂದ್ರೆ ಮಾನಸಿಕ ಖಿನ್ನತೆ ಇತ್ತೇ ಅಥವಾ ಆತನಿಗೆ ಏನಾದರೂ ಸಮಸ್ಯೆ ಆಗಿತ್ತೇ ? " ಎಂದು ತನಿಖೆಯಾಗಬೇಕು ಎಂದು ಹೇಳಿದ್ದಾರೆ.
ಇಂತಹದೊಂದು ಭಯಾನಕ ದಾಳಿ ನಡೆದಾಗ ಬಿಜೆಪಿ ನಾಯಕರೊಬ್ಬರು ಇಷ್ಟೊಂದು ಸಂವೇದನಾಶೀಲರಾಗಿ, ಸಹಜವಾಗಿ, ಜನಪ್ರತಿನಿಧಿಯಂತೆ ಜವಾಬ್ದಾರಿಯುತವಾಗಿ ಮಾತನಾಡುವುದು ನಿಜಕ್ಕೂ ಎಲ್ಲರನ್ನೂ ಅಚ್ಚರಿಗೆ ಕೆಡವಿದೆ. ಮನಿಷಾ ಚೌಧರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಾಲ್ವರನ್ನು ಗುಂಡಿಕ್ಕಿ ಕೊಂದಿರುವ ಆರೋಪಿಗೇ ಏನಾದರೂ ಸಮಸ್ಯೆ ಆಗಿತ್ತೇ ಎಂದು ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ. ತನಗೇನಾದರೂ ಸಮಸ್ಯೆ ಆಗಿದ್ದಕ್ಕೆ ಆತ ನಾಲ್ವರನ್ನು ಕೊಂದಿರಬಹುದೇನೋ ಎಂಬ ಅವರ ಕಾಳಜಿ ನಿಜಕ್ಕೂ ಎಲ್ಲ ಬಿಜೆಪಿ ಜನಪ್ರನಿಧಿಗಳಿಗೆ ಮಾದರಿಯಾಗಿದೆ.
ಆದರೆ ನಾಲ್ವರು ಅಮಾಯಕರನ್ನು ಗುಂಡಿಕ್ಕಿ ಕೊಂದ ಮೇಲೆ ಚೇತನ್ ಸಿಂಗ್ ಹೇಳಿದ್ದಾನೆ ಎನ್ನಲಾದ ಮಾತುಗಳು ಮಾತ್ರ ಆತ ಡಿಪ್ರೆಶನ್ ನಲ್ಲಿರಲಿಲ್ಲ ಬದಲಾಗಿ ಆತ ಕೋಮು ದ್ವೇಷದ ಇನ್ಫೆಕ್ಷನ್ ನಿಂದ ಬಳಲುತ್ತಿದ್ದ ಎಂಬಂತೆಯೇ ತೋರಿಸುತ್ತಿವೆ.
ಆತ ಹೇಳುವಂತೆ ನಮ್ಮ ದೇಶದ ಬಹುತೇಕ ಎಲ್ಲ ಮಾಧ್ಯಮಗಳು ದಿನಬೆಳಗಾದರೆ ಏನು ಹೇಳುತ್ತಿವೆ ?. ಪಾಕಿಸ್ತಾನ, ಹಿಂದೂ ಮುಸ್ಲಿಂ ಎಂದಲ್ಲದೆ ಬೇರೆ ಏನನ್ನಾದರೂ ನಮ್ಮ ದೇಶದ ಪ್ರಮುಖ ಚಾನಲ್ ಗಳು, ಪತ್ರಿಕೆಗಳು, ಸೋಶಿಯಲ್ ಮೀಡಿಯಾದಲ್ಲಿರುವ ಬಿಜೆಪಿ ಪಡೆಗಳು ಹೇಳುತ್ತಿವೆಯೇ ?
90 ರ ದಶಕದಲ್ಲಿ ರವಾಂಡಾದಲ್ಲಿ ಹಸಿ ಹಸಿ ಸುಳ್ಳುಗಳನ್ನೇ ಪ್ರಸಾರ ಮಾಡಿ ನರಮೇಧಕ್ಕೆ ಕರೆ ಕೊಟ್ಟ ರೇಡಿಯೋ ರವಾಂಡಕ್ಕೂ ಇವತ್ತಿನ ಭಾರತದ ಬಹುತೇಕ ಚಾನಲ್ ಗಳಿಗೂ ಏನಾದರೂ ವ್ಯತ್ಯಾಸವಿದೆಯೇ ?. ಹಸಿ ಹಸಿ ಸುಳ್ಳುಗಳು, ಪ್ರತಿದಿನ ಮುಸ್ಲಿಂ ದ್ವೇಷ ಬಿಟ್ಟರೆ ನಮ್ಮ ದೇಶದ ಹೆಚ್ಚಿನೆಲ್ಲ ಚಾನಲ್ ಗಳಲ್ಲಿ ಏನು ಬರುತ್ತದೆ ?
ಹೋಗಲಿ ನಮ್ಮ ದೇಶದ ಆಡಳಿತಾರೂಢ ಪಕ್ಷದ ಪ್ರಮುಖ ನಾಯಕರು, ಅವರ ಬೆಂಬಲಿಗ ಪಡೆ ಅದೆಷ್ಟು ದ್ವೇಷ ಪ್ರಸಾರ ಮಾಡುತ್ತಿಲ್ಲ ?
ಹಾಗೆ ದ್ವೇಷ ಹರಡುವವರನ್ನು ನೇರವಾಗಿ ಅಥವಾ ಪರೋಕ್ಷವಾಗಿ ಇವರೇ ಪ್ರೋತ್ಸಾಹಿಸುತ್ತಿಲ್ಲವೇ ?
ಹಸಿ ಹಸಿ ಸುಳ್ಳು ಹಾಗು ಮುಸ್ಲಿಂ ದ್ವೇಷ ಹರಡುವವರನ್ನು ಸ್ವತಃ ಪ್ರಧಾನಿ ಮೋದಿಯವರೇ ಟ್ವಿಟರ್ ನಲ್ಲಿ ಫಾಲೋ ಮಾಡುತ್ತಿಲ್ಲವೇ ?
ಹಂತಕ ಚೇತನ್ ಸಿಂಗ್ ಹೇಳಿದ್ದಕ್ಕೂ ನಮ್ಮ ದೇಶದ ರಾಜಕೀಯ ಹಾಗು ಸುದ್ದಿ ಮಾಧ್ಯಮಗಳಲ್ಲಿ ಆಗುತ್ತಿರುವುದಕ್ಕೂ ತಾಳೆ ಆಗುತ್ತಿಲ್ಲವೇ ? ದೇಶದಲ್ಲಿ ಇರೋದೇ ಇಬ್ಬರು ನಾಯಕರು, ಇಲ್ಲಿ ಅವರನ್ನು ಬೆಂಬಲಿಸುವವರನ್ನು ಬಿಟ್ಟು ಉಳಿದವರೆಲ್ಲರೂ ಪಾಕಿಸ್ತಾನಕ್ಕೆ ಹೋಗಬೇಕು ಎಂದೇ ಅಲ್ಲವೇ ಬಿಜೆಪಿ , ಸಂಘ ಪರಿವಾರದ ನಾಯಕರು ಪ್ರತಿ ಹೇಳಿಕೆಗಳಲ್ಲಿ, ಭಾಷಣಗಳಲ್ಲಿ ಪರೋಕ್ಷವಾಗಿ ಅಥವಾ ಕೆಲವೊಮ್ಮೆ ನೇರವಾಗಿಯೇ ಹೇಳೋದು ?
ನಮ್ಮ ದೇಶದ ಟಿವಿ ಚಾನಲ್ ಗಳೂ ಅದನ್ನೇ ಹೇಳುತ್ತಾ ಬಂದಿಲ್ಲವೇ ? ಹಾಗಾಗಿ ಬಿಜೆಪಿ ಶಾಸಕಿ ಮನೀಶಾ ಚೌಧರಿ ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಆತನಿಗೆ ಕೋಮು ದ್ವೇಷದ ಇನ್ಫೆಕ್ಷನ್ ಹೇಗಾಗಿದೆ ಎಂದು ವಿವರವಾಗಿ ಪರಿಶೀಲಿಸಬೇಕು. ಅದರ ಕುರಿತು ಸಮಗ್ರ ನಿಷ್ಪಕ್ಷ ತನಿಖೆ ನಡೆಯಬೇಕು. ಅದರ ಫಲಿತಾಂಶವನ್ನು ದೇಶದ ಮುಂದಿಡಬೇಕು.