×
Ad

ಕ್ಷೀರಭಾಗ್ಯಕ್ಕೆ ದಶಕ : ಜಾಗತಿಕ ಮನ್ನಣೆ ಪಡೆದ ಕರುನಾಡ ಯೋಜನೆ

Update: 2023-08-02 22:11 IST

ಆರ್. ಜೀವಿ

ರಾಜಕೀಯ ಇಚ್ಛಾ ಶಕ್ತಿಯಿದ್ದರೆ ಸರ್ಕಾರದ ಯೋಜನೆಯೊಂದು ಹೇಗೆ ತಂತಾನೇ ಹಲವು ಆಯಾಮಗಳಲ್ಲಿ ಸಾಮಾಜಿಕ ಅಗತ್ಯವನ್ನು ಪೂರೈಸಬಲ್ಲದು ಎಂಬುದಕ್ಕೆ ನಿದರ್ಶನ, ಹತ್ತು ವರ್ಷಗಳ ಹಿಂದೆ ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿದ್ದ ಕ್ಷೀರಭಾಗ್ಯ.

ದೇಶದಲ್ಲೇ ಮೊದಲ ಬಾರಿಗೆ ಶಾಲಾ ಮಕ್ಕಳಿಗೆ ಹಾಲು ಪೂರೈಸುವ ಯೋಜನೆಯಾಗಿ ಬಂದದ್ದು ಕ್ಷೀರಭಾಗ್ಯ. 2013ರ ಆಗಸ್ಟ್ 1ರಂದು ಜಾರಿಯಾಗಿದ್ದ ಕ್ಷೀರಭಾಗ್ಯ ಯೋಜನೆಗೆ ಈ ಆಗಸ್ಟ್ 1ಕ್ಕೆ ಹತ್ತು ವರ್ಷಗಳು ತುಂಬಿದವು. ಪ್ರತಿನಿತ್ಯ ಒಂದು ಕೋಟಿಗೂ ಅಧಿಕ ಮಕ್ಕಳಿಗೆ ಹಾಲು ನೀಡುವ ಮೂಲಕ ಅವರ ಶೈಕ್ಷಣಿಕ ಸಾಧನೆಗೆ ನೆರವಾದ ಸಂತೃಪ್ತಿ ನನ್ನದು ಎಂಬ ಸಾರ್ಥಕ ಭಾ​ವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ಈ ಯೋಜನೆ ಆರಂಭಗೊಂಡಿದ್ದು ಹೇಗೆಂದು ನೋಡುವ ಮೊದಲು ಅದಕ್ಕಿರುವ ಆಯಾಮಗಳನ್ನು ಗಮನಿಸಬೇಕು. ಮೊದಲನೆಯದು, ಕರ್ನಾಟಕದ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳ ಅಪೌಷ್ಟಿಕತೆ ನಿವಾರಣೆ. ಇದರ ಜೊತೆಗೇ ಹೈನುಗಾರಿಕೆಯನ್ನು ಮತ್ತಷ್ಟು ಲಾಭದಾಯಕ ಉದ್ಯೋಗವಾಗಿಸಿ, ರೈತರ ಕೈಹಿಡಿದದ್ದು ಈ ಯೋಜನೆಗಿರುವ ಎರಡನೇ ಆಯಾಮ. ನಷ್ಟದ ಹಾದಿಯಲ್ಲಿದ್ದ ಹೈನೋದ್ಯಮಕ್ಕೆ ಮರುಜೀವ ನೀಡುತ್ತಲೇ, ಕೆಎಂಎಫ್ನ ಒಟ್ಟು 14 ಜಿಲ್ಲಾ ಹಾಲು ಒಕ್ಕೂಟಗಳ ಆರ್ಥಿಕ ಸಂಕಷ್ಟಕ್ಕೂ ಪರಿಹಾರೋಪಾಯವಾಗಿ ಒದಗಿದ್ದು ಈ ಯೋಜನೆಗಿರುವ ಮತ್ತೊಂದು ಆಯಾಮ.

ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ನಿತ್ಯ ಕೆನೆಭರಿತ ಹಾಲು ನೀಡುವ ಈ ಯೋಜನೆ ರೂಪುಗೊಂಡಿದ್ದು ಮತ್ತು ಜಾರಿಯಾದದ್ದು ಬಹಳ ವಿಶಿಷ್ಟ ಎನ್ನಬಹುದಾದ ಸಂದರ್ಭದಲ್ಲಿ. ಯಾಕೆಂದರೆ ಇದು ಪಕ್ಷವೊಂದು ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯ ಭಾಗವಾಗಿ ಬಂದ ಯೋಜನೆಯಾಗಿರಲಿಲ್ಲ.

2013ರಲ್ಲಿ ಕಾಂಗ್ರೆಸ್ ಸರಕಾರ ರಚನೆಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಪ್ರಣಾಳಿಕೆಯಲ್ಲಿನ ಯೋಜನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಕೆಲಸಗಳು ಸಾಗಿದ್ದವು. ಅಂಥ ಹೊತ್ತಿನಲ್ಲಿ ಪ್ರಣಾಳಿಕೆಯಲ್ಲಿ ಇದ್ದಿರದ ಯೋಜನೆಯೊಂದು ಸರ್ಕಾರದ ಹೆಮ್ಮೆಯ ಯೋಜನೆಯಾಗಿ ರೂಪುಗೊಳ್ಳುವಂತಾಯಿತು. ಎಲ್ಲದಕ್ಕೂ ಹಿನ್ನೆಲೆಯಾದದ್ದು ಅದೇ ಸಮಯದಲ್ಲಿ ರಾಜ್ಯದ ಸಹಕಾರಿ ಕ್ಷೇತ್ರ ಎದುರಿಸುತ್ತಿದ್ದ ದೊಡ್ಡ ಪ್ರಮಾಣದ ನಷ್ಟ.

ಕೆಎಂಎಫ್ಗೆ ನಿತ್ಯ ಸಂಗ್ರಹವಾಗುತ್ತಿದ್ದ 53 ಲಕ್ಷ ಲೀ. ಹಾಲಿನಲ್ಲಿ ಮಾರಾಟವಾಗುತ್ತಿದ್ದದ್ದು 29 ಲಕ್ಷ ಲೀ. ಮಾತ್ರ. ಕೆಎಂಎಫ್‌ ಆಗ ದಿನಕ್ಕೆ ಕೇವಲ 10 ಲಕ್ಷ ಲೀ. ಹಾಲನ್ನು ಮಾತ್ರ ಪುಡಿಯಾಗಿ ಪರಿವರ್ತಿಸುವ ವ್ಯವಸ್ಥೆ ಹೊಂದಿತ್ತು. ಉಳಿದ ಹೆಚ್ಚುವರಿ ಹಾಲನ್ನು ಬೆಣ್ಣೆ ಇಲ್ಲವೆ ಪುಡಿಯಾಗಿ ಪರಿವರ್ತಿಸಲು ಬೇರೆ ರಾಜ್ಯಗಳಿಗೆ ಕಳಿಸುವುದು ಅನಿವಾರ್ಯವಾಗಿತ್ತು. ಈ ಅನಿವಾರ್ಯತೆಯ ಕಾರಣದಿಂದಾಗಿ ಕೆಎಂಎಫ್ ನಷ್ಟದ ಹಾದಿಯಲ್ಲಿತ್ತು.

ಹಾಲಿನ ಪುಡಿಗೆ ಮಾರುಕಟ್ಟೆಯಲ್ಲಿ ನಿಗ​ದಿಯಾಗಿರುವ ದರಕ್ಕಿಂತ ದುಪ್ಪಟ್ಟು ಹಣ ಅದರ ತಯಾರಿಕೆಗೆ ಖರ್ಚಾಗುತ್ತಿದ್ದದ್ದು ಮತ್ತೊಂದು ಬಿಕ್ಕಟ್ಟಾಗಿತ್ತು. ಈ ನಿತ್ಯ ನಿರ್ವಹಣಾ ವೆಚ್ಚ ಕೂಡ ಕೆಎಂಎಫ್ಗೆ ದೊಡ್ಡ ಹೊರೆಯಾಗಿತ್ತು. ​ಇದರಿಂದಾಗಿ ರೈತರಿಗೆ ನೀಡುವ ದರವನ್ನೂ ಕಡಿಮೆ ಮಾಡಬೇಕಾದ ಸ್ಥಿತಿಯಿತ್ತು.

ಇಂಥ ಹೊತ್ತಲ್ಲಿ​ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಲವು ಹಂತಗಳ ಮಾತುಕತೆಯ ಫಲವಾಗಿ ಕ್ಷೀರಭಾಗ್ಯ ಯೋಜನೆ ರೂಪುಗೊಂಡಿತು. ವಾರ್ಷಿಕ 15,000 ಮೆಟ್ರಿಕ್ ಟನ್‌ನಿಂದ 30,000 ಮೆಟ್ರಿಕ್ ಟನ್ ಹಾಲಿನ ಪುಡಿ ಸರಕಾರಿ ಶಾಲೆಗಳಿಗೆ ಪೂರೈಕೆ ಮಾಡಿದ ಹಿನ್ನೆಲೆ ವಾರ್ಷಿಕ 500ರಿಂದ 900 ಕೋಟಿ ರೂ. ಸರಕಾರದಿಂದ ಅನುದಾನ ಲಭಿಸಿತು. ಹೈನೋದ್ಯಮ ಚೇತರಿಸಿಕೊಂಡಿತು.

ಕ್ಷೀರಭಾಗ್ಯದ ಯಶಸ್ಸಿನ ಕಥೆಯನ್ನು ನೆನಪಿಸಿಕೊಳ್ಳುವ ಕೆಎಂಎಫ್ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಪ್ರೇಮನಾಥ್, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೃದಯವಂತಿಕೆ ದೊಡ್ಡದು ಎನ್ನುತ್ತಾರೆ. ಇಂಥದೊಂದು ಯೋಜನೆಯ ಅಗತ್ಯವನ್ನು ಅರ್ಥಮಾಡಿಕೊಂಡ ಸಿದ್ದರಾಮಯ್ಯನವರು ಕೋಟ್ಯಂತರ ಮಕ್ಕಳಿಗೆ, ರೈತರಿಗೆ ನೆರವಾದರು ಎಂದು ಪ್ರೇಮನಾಥ್ ಹೇಳುತ್ತಾರೆ.

ಸರಕಾರದಿಂದ ಕ್ಷೀರಭಾಗ್ಯಕ್ಕೆ ಅನುದಾನ ನೀಡುವ ಬದಲು, ಕೆಎಂಎಫ್‌ನಿಂದಲೇ ಹಾಲು ಉಚಿತವಾಗಿ ಪೂರೈಸುವ ಕ್ರಮದಿಂದ ಏಕಕಾಲಕ್ಕೇ ಮಕ್ಕಳಿಗೆ ಹಾಲು, ರೈತರಿಗೆ ಸಹಾಯ ಮತ್ತು ಹೈನೋದ್ಯಮಕ್ಕೆ ಶಕ್ತಿ ದೊರಕಿಬಿಟ್ಟಿತು. ಬಹಳ ಸಲ ಆಡಳಿತದ ಮಟ್ಟದಲ್ಲಿ ಪ್ರೇಮನಾಥ್ ಅವರಂಥ ಅಧಿಕಾರಿಗಳಿರುತ್ತಾರೆ. ಅಂಥವರು ಅತ್ಯಂತ ಮಹತ್ವದ ಆಲೋಚನೆಗಳನ್ನೂ ಹೊಂದಿರುತ್ತಾರೆ.

ಆದರೆ ಅದನ್ನು ಅಷ್ಟೇ ಸರಿಯಾಗಿ ಅರ್ಥ ಮಾಡಿಕೊಂಡು, ಸರ್ಕಾರದ ಕಾರ್ಯಕ್ರಮವಾಗಿ ಜಾರಿಗೊಳಿಸಲು ಸರ್ಕಾರದ ಸೂತ್ರ ಹಿಡಿದವರಿಗೆ ಇಚ್ಛಾ ಶಕ್ತಿ ಬೇಕಿರುತ್ತದೆ. ಯೋಜನೆಗಿರುವ ತಾಕತ್ತನ್ನು ಗ್ರಹಿಸಬಲ್ಲ ಸಾಮರ್ಥ್ಯವೂ ಬೇಕಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ನಿಟ್ಟಿನಲ್ಲಿ ಸೂಕ್ತ ಹೊತ್ತಿನಲ್ಲಿ ನಿರ್ಣಯ ತೆಗೆದುಕೊಳ್ಳುವುದಕ್ಕೆ ಸಾಮಾಜಿಕ ಕಳಕಳಿಯೂ ಇರಬೇಕಾಗುತ್ತದೆ.​ ಜನಪರ ಕಾಳಜಿಯೂ ಅತ್ಯಗತ್ಯ.

ಸಿದ್ದರಾಮಯ್ಯ ಅವರ ಮೂಲಕ ಈ ಯೋಜನೆ ಜಾರಿಯಾಗುವಂತಾದದ್ದು ಅವರಿಗಿರುವ ಈ ಶಕ್ತಿ ಮತ್ತು ಕಳಕಳಿಯ ಕಾರಣದಿಂದಾಗಿ. ಕ್ಷೀರಭಾಗ್ಯದ ಹೆಚ್ಚುಗಾರಿಕೆಗಳನ್ನು ಪಟ್ಟಿ ಮಾಡುವುದಾದರೆ, ಶಾಲೆ ಹಾಗೂ ಅಂಗನವಾಡಿ ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಿ ಆರೋಗ್ಯವಂತರನ್ನಾಗಿಸುವ ನಿಟ್ಟಿನಲ್ಲಿ ಉತ್ತರ ಕರ್ನಾಟಕ ಸೇರಿ ರಾಜ್ಯದ ಕೋಟ್ಯಂತರ ಮಕ್ಕಳ ಪಾಲಿಗೆ ಈ ಯೋಜನೆ ಒದಗಿತು.

ರಾಜ್ಯದ ಎಲ್ಲಾ ಒಕ್ಕೂಟಗಳು ನಷ್ಟದ ಹಾದಿಯಿಂದ ಲಾಭದೆಡೆಗೆ ಹೆಜ್ಜೆಯಿಡಲು ಕಾರಣವಾಯಿತು.

ಹಾಲಿನ ಪುಡಿಯನ್ನು ಸರಕಾರಿ ಶಾಲೆಗಳಿಗೆ ಪೂರೈಸುವ ಯೋಜನೆಯಿಂದಾಗಿ ಮಾರುಕಟ್ಟೆಗೆ ಪೂರೈಕೆಯನ್ನು ಕೆಎಂಎಫ್ ಸ್ಥಗಿತಗೊಳಿಸಿದಾಗ, ಮಾರುಕಟ್ಟೆಯಲ್ಲಿನ ಆ ಬೇಡಿಕೆ ಪೂರೈಸಲು ಅಮೂಲ್‌ಗೆ ಅವಕಾಶ ಸಿಕ್ಕಿತು. ರಾಜ್ಯದ ಯೋಜನೆಯೊಂದು ಈ ಮೂಲಕ ಹೊರರಾಜ್ಯದ ಸಂಸ್ಥೆಗೂ ನೆರವಾಯಿತು. ವಿಶ್ವ ಡೇರಿ ಫೆಡರೇಶನ್‌ನಿಂದ ನೀಡಲಾಗುವ ಅಂತಾರಾಷ್ಟ್ರೀಯ ಅತ್ಯುತ್ತಮ ಯೋಜನೆ ಪ್ರಶಸ್ತಿ ಈ ಕ್ಷೀರಭಾಗ್ಯ ಯೋಜನೆಗಾಗಿ 2022ರಲ್ಲಿ ಕೆಎಂಎಫ್‌ಗೆ ಸಿಕ್ಕಿತು. ಪುರಸ್ಕಾರಕ್ಕೆ ಆ ವರ್ಷ 144 ದೇಶಗಳಿಂದ ಅರ್ಜಿಗಳು ಸಲ್ಲಿಕೆಯಾಗಿದ್ದವು. ನಾರ್ವೆ ಸೇರಿದಂತೆ ಹಲವು ರಾಷ್ಟ್ರಗಳ ಪೈಪೋಟಿಯ ನಡುವೆ ರಾಜ್ಯದ 'ಕ್ಷೀರಭಾಗ್ಯ' ಯೋಜನೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆಯಿತೆಂಬುದು ವಿಶೇಷ.

ಇಷ್ಟೆಲ್ಲ ಹೆಚ್ಚುಗಾರಿಕೆಯಿದ್ದ ಯೋಜನೆಯನ್ನು ನಡುವೆ ಬಂದ ಬಿಜೆಪಿ ಸರ್ಕಾರ ಅಲಕ್ಷಿಸಿದ್ದ ಬಗ್ಗೆ ಕಾಂಗ್ರೆಸ್ ಅನೇಕ ಸಲ ಆರೋಪಿಸಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿರುವ ಬಗ್ಗೆ ಬರುತ್ತಿದ್ದ ವರದಿಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ಈ ಆರೋಪ ಮಾಡಿತ್ತು. ಜನಪರವಾದ ಎಲ್ಲವನ್ನೂ ಬಿಜೆಪಿ ಹೇಗೆ ಹಳ್ಳ ಹಿಡಿಸಬಲ್ಲದು ಎಂಬುದಕ್ಕೆ ಅದು ಅನ್ನಭಾಗ್ಯದಂಥ ಯೋಜನೆಯ ವಿಚಾರದಲ್ಲಿ ನಡೆದುಕೊಂಡ ರೀತಿಯೆ ಸಾಕ್ಷಿ. ಕ್ಷೀರಭಾಗ್ಯವೂ ಅದರ ಕಣ್ಣಿಗೆ ಸಾಮಾಜಿಕ ಕಳಕಳಿಯುಳ್ಳ ಯೋಜನೆಯಾಗಿ ಕಾಣದೇ ಹೋಗಿದ್ದರೆ ಅಚ್ಚರಿಯೇನಿಲ್ಲ.

ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಕ್ಷೀರಭಾಗ್ಯಕ್ಕೆ ಹತ್ತು ತುಂಬಿದ ಹೆಮ್ಮೆಯನ್ನು ಸಿದ್ದರಾಮಯ್ಯ ಸಾರ್ಥಕ ಭಾವದಿಂದ ವ್ಯಕ್ತಪಡಿಸಿದ್ದಾರೆ. ಆ ಸಾರ್ಥಕ ಭಾವನೆ ಕ್ಷೀರಭಾಗ್ಯವನ್ನು ಇನ್ನಷ್ಟು ಪುಷ್ಟಿಗೊಳಿಸುವಂತಾಗಲಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News