×
Ad

ಬುಲ್ಡೋಜರ್ ಬಾಬಾನನ್ನು ಪ್ರಶಂಸಿಸುವ ಜರ್ಮನ್ ಡಾಕ್ಟರ್ ಯಾರು ?

Update: 2023-07-13 22:35 IST

- ಆರ್. ಜೀವಿ

ಸುಳ್ಳು, ಸುಳ್ಳು , ಸುಳ್ಳು...ಅದಕ್ಕೆ ದ್ವೇಷದ ಒಗ್ಗರಣೆ. ಜನರಿಗೆ ಹೇಳೋದು ಸುಳ್ಳು, ತೋರಿಸೋದು ಸುಳ್ಳು, ಅದನ್ನು ಇನ್ನಷ್ಟು ಆಕರ್ಷಕವಾಗಿಸಲು ಹದವಾಗಿ ದ್ವೇಷ ಬೆರೆಸೋದು. ಹೀಗೆ ಆಗಿ ಆಗಿ ... ಕೊನೆಗೆ ತಾವೇ ಸುಳ್ಳನ್ನು ಸತ್ಯ ಅಂತ ನಂಬೋದು. ಬೇರೆಯವರನ್ನೂ ಹಾಗೆ ನಂಬಿಸೋದು. ಇಂತಹದೊಂದು ಸುಳ್ಳಿನ ವಿಷವರ್ತುಲದಲ್ಲಿ ನಮ್ಮ ದೇಶ ಸಿಕ್ಕಿ ನರಳುತ್ತಿದೆ.

ನಮ್ಮ ಉತ್ತರ ಪ್ರದೇಶದ ಬುಲ್ಡೋಝರ್ ಮುಖ್ಯಮಂತ್ರಿ ಆದಿತ್ಯನಾಥ್ ಗೊತ್ತಲ್ವಾ... ಅವರನ್ನು ಬುಲ್ಡೋಜರ್ ಬಾಬಾ ಅಂತ ಅವರ ಕಟ್ಟಾ ಅಭಿಮಾನಿಗಳೇ ಕರೀತಾರೆ... ಅವರು ಬರೀ ಉತ್ತರ ಪ್ರದೇಶದಲ್ಲಿ ಮಾತ್ರ ಅಲ್ಲ, ಇಡೀ ವಿಶ್ವದಲ್ಲೇ ಭಯಂಕರ ಪ್ರಸಿದ್ಧಿ ಹೊಂದಿದವರು ಅನ್ನೋದು ನಿಮಗೆ ಗೊತ್ತಿದೆಯಾ.. ಅದೂ ಎಷ್ಟರಮಟ್ಟಿಗೆ ಅಂದ್ರೆ, ಫ್ರಾನ್ಸ್ ನಲ್ಲಿ ನಡೆಯುತ್ತಿರೊ ಹಿಂಸಾಚಾರವನ್ನು ಕೇವಲ ಇಪ್ಪತ್ತನಾಲ್ಕೇ ಗಂಟೆಗಳಲ್ಲಿ ನಿಲ್ಲಿಸುವಷ್ಟರ ಮಟ್ಟಿಗೆ..

ಕೇಳಿದ್ರೆ ನಗು ಬರ್ತಾ ಇದೆಯಲ್ವಾ. ಕೇಳಿದ ಯಾರು ಕೂಡ ಮುಸಿ ಮುಸಿ ನಗುವ ಈ ಜೋಕನ್ನು ಸ್ವತಃ ಆದಿತ್ಯನಾಥ್ ಮತ್ತು ಭಟ್ಟಂಗಿ ಮೀಡಿಯಾಗಳು ಸೀರಿಯಸ್ಸಾಗಿ ತೆಗೆದುಕೊಂಡ ಹೊಸ ಜೋಕೊಂದು ನಡೆದು ಹೋಗಿದೆ. ಸುಳ್ಳುಗಳನ್ನೇ ತಮ್ಮ ಬಂಡವಾಳ ಮಾಡಿಕೊಂಡು, ಅದರ ಮೂಲಕವೇ ಜನರ ದಾರಿ ತಪ್ಪಿಸಿದವರು ಕೊನೆಗೆ ಸುಳ್ಳೆಂಬ ವಿಷವರ್ತುಲದಲ್ಲಿ ಸಿಲುಕಿ ಸುಳ್ಳು ಯಾವುದು, ಸತ್ಯ ಯಾವುದು ಎನ್ನೋದು ಅರಿವಿಗೆ ಬಾರದೆ ಸ್ವತಃ ತಾವೇ ಸುಳ್ಳನ್ನೇ ಸತ್ಯವೆಂದು ನಂಬಿ ಮೋಸ ಹೋಗುತ್ತಾರೆ.

ಅದಕ್ಕೆ ಈ ಜರ್ಮನ್ ಡಾಕ್ಟರ್ ಘಟನೆ ತಾಜಾ ಉದಾಹರಣೆ. ಇಷ್ಟೆಲ್ಲಾ ನಡೆದದ್ದು ಒಂದು ಟ್ವೀಟ್ ನಿಂದ. ಜೂನ್ ​30 ರಂದು ಪ್ರೊ. ಜಾನ್ ಕ್ಯಾಮ್ ಎನ್ನೋ ಹೆಸರಿನ ಟ್ವಿಟರ್ ಖಾತೆಯಿಂದ ಟ್ವೀಟ್ ಒಂದನ್ನ ಮಾಡಲಾಗುತ್ತೆ. ಈ ಪ್ರೊ. ಜಾನ್ ಕ್ಯಾಮ್ ಜರ್ಮನಿ ಮೂಲದ ಒಬ್ಬ ಕಾರ್ಡಿಯಾಲಜಿಸ್ಟ್ ಅಂದ್ರೆ ಹೃದಯ ತಜ್ಞ ಅಂತ ಅವರ ಪ್ರೊಫೈಲ್ ನಲ್ಲಿ ಬರೆಯಲಾಗಿದೆ.

ಅಂದ ಹಾಗೆ ಈ ಜರ್ಮನಿ ಮೂಲದ ವೈದ್ಯರು ಎನ್ನಲಾದ ವ್ಯಕ್ತಿ ಟ್ವೀಟ್ ಮಾಡಿದ್ದು, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಬಗ್ಗೆ. " ಭಾರತವು ಫ್ರಾನ್ಸ್ ನ ಗಲಭೆ ಪರಿಸ್ಥಿತಿಯನ್ನು ನಿಯಂತ್ರಿಸಲು ಆದಿತ್ಯನಾಥ್ ಅವರನ್ನು ಫ್ರಾನ್ಸ್‌ಗೆ ಕಳುಹಿಸಬೇಕು. ಕೇವಲ 24 ಗಂಟೆಗಳ ಒಳಗೆ ಅವರು ಅಲ್ಲಿ ಗಲಭೆ ನಿಲ್ಲಿಸುತ್ತಾರೆ ’’ ಎಂದು ಆ ಟ್ವೀಟ್ ನಲ್ಲಿ ಬರೆಯಲಾಗಿತ್ತು.

ನ್ಯೂಯಾರ್ಕ್ ಟೈಮ್ಸ್, ದ ಟೆಲಿಗ್ರಾಫ್ ಪತ್ರಿಕೆಗಳ ಮುಖಪುಟವನ್ನು ಫೋಟೊಶಾಪ್ ಮಾಡಿ, ಪ್ರಧಾನಿ ಮೋದಿಯನ್ನು ಹೊಗಳುವ ನಕಲಿ ವರದಿಯ ಫೋಟೊ ರೆಡಿ ಮಾಡಿದ ಕುಖ್ಯಾತಿ ಈ ದೇಶದ ಬಲಪಂಥೀಯ ಟ್ರೋಲ್ ಪಡೆಗೆ ಈಗಾಗಲೇ ಇದೆ. ದೇಶಾದ್ಯಂತ ವಾಟ್ಸಾಪ್ ಯುನಿವರ್ಸಿಟಿಗಳಲ್ಲಿ ಸುಳ್ಳನ್ನೇ ಕಲಿಯುತ್ತಿರುವ ಮೂರ್ಖಶಿಖಾಮಣಿಗಳನ್ನು ಮಂಗ ಮಾಡುತ್ತಿರುವ ಬಲಪಂಥೀಯರಿಗೆ ಹಾರಾಡಲು ಆದಿತ್ಯನಾಥ್ ಬಗ್ಗೆ ವಿದೇಶಿ ಪ್ರಜೆಯೊಬ್ಬರು, ಅದರಲ್ಲೂ ಜರ್ಮನಿಯ ಸುಪ್ರಸಿದ್ಧ ವೈದ್ಯರೊಬ್ಬರು ಮಾಡಿದ್ದಾರೆ ಎನ್ನಲಾದ ಈ ಒಂದು ಟ್ವೀಟ್ ಸಾಕಾಯಿತು.

ಡಾಕ್ಟರ್ ಜಾನ್ ಕ್ಯಾಮ್ ಹೆಸರಿನಲ್ಲಿದ್ದ ಈ ಟ್ವೀಟನ್ನು ರಿಟ್ವೀಟ್ ಮಾಡಲಾಯಿತು. ಆದಿತ್ಯನಾಥ್ ರನ್ನು ಹಾಡಿ ಹೊಗಳಲಾಯಿತು. ಈ ಎಲ್ಲದರ ನಡುವೆ ಸ್ವತಃ ಆದಿತ್ಯನಾಥ್ ಅವರ ಕಚೇರಿಯ ಟ್ವಿಟರ್ ಖಾತೆಯೇ ಈ ಟ್ವೀಟ್ ಗೆ ಪ್ರತಿಕ್ರಿಯಿಸಿ ಇನ್ನಷ್ಟು ತಮಾಷೆ ಸೃಷ್ಟಿಸಿತು. ಈ ಸೋಕಾಲ್ಡ್ ಜರ್ಮನಿಯ ವೈದ್ಯ ಪ್ರೊ. ಜಾನ್ ಕ್ಯಾಮ್ ಟ್ವೀಟನ್ನು ರಿಟ್ವೀಟ್ ಮಾಡಿದ್ದ ಆದಿತ್ಯನಾಥ್ ಕಚೇರಿಯ ಟ್ವಿಟರ್ ಖಾತೆಯು, ಅದರ ಜೊತೆಗೆ, “ಪ್ರಪಂಚದ ಯಾವುದೇ ಭಾಗದಲ್ಲಿ ಉಗ್ರವಾದದಿಂದ ಗಲಭೆಗಳು ಶುರುವಾದಾಗ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಾಗ, ಜಗತ್ತು ಸಾಂತ್ವನವನ್ನು ಬಯಸುತ್ತದೆ. ಅದಕ್ಕಾಗಿ ಉತ್ತರ ಪ್ರದೇಶದಲ್ಲಿ ಮಹಾರಾಜ್ ಜಿ ಅಂದರೆ ಆದಿತ್ಯನಾಥ್ ಸ್ಥಾಪಿಸಿದ ಕಾನೂನು ಮತ್ತು ಸುವ್ಯವಸ್ಥೆಯ ಯೋಗಿ ಮಾದರಿಯನ್ನು ಬಯಸುತ್ತದೆ ’’ ಎಂದು ಆ ಟ್ವೀಟ್ ನಲ್ಲಿ ಸ್ವತಃ ಆದಿತ್ಯನಾಥ್ ಕಚೇರಿಯೇ ಆದಿತ್ಯನಾಥ್ ರನ್ನು ಹಾಡಿ ಹೊಗಳಿ ಬರೆದಿತ್ತು.

ಇದೊಂತರ ಸಾವರ್ಕರ್ ತನ್ನನ್ನು ತಾನೇ "ವೀರ" ಅಂತ ಬರೆದುಕೊಂಡಿದ್ರಲ್ಲ ಹಾಗೇನೇ. ಒಂದೇ ವ್ಯತ್ಯಾಸ ಅಂದ್ರೆ, ಸಾವರ್ಕರ್ ಬೇರೆ ಹೆಸರಲ್ಲಿ ಬರೆದು ತನಗೆ ತಾನೇ 'ವೀರ' ಅಂತ ಬಿರುದು ಕೊಟ್ಟುಕೊಂಡಿದ್ದರು. ಆದರೆ ಇಲ್ಲಿ ಸ್ವತಃ ಆದಿತ್ಯನಾಥ್ ಅವರ ಕಚೇರಿಯೇ ನೇರವಾಗಿ ಅವರನ್ನು ಹಾಡಿ ಹೊಗಳಿತ್ತು. ಪ್ರೊ ಜಾನ್ ಕ್ಯಾಮ್ ಎಂಬ ವ್ಯಕ್ತಿಯ ಈ ಟ್ವೀಟನ್ನು ಆದಿತ್ಯನಾಥ್, ಬಿಜೆಪಿ ಬೆಂಬಲಿಗರು, ಭಟ್ಟಂಗಿ ಮೀಡಿಯಾಗಳು ತಮಗೆ ಸಿಕ್ಕ ಅಂತಾರಾಷ್ಟ್ರೀಯ ಮಾನ್ಯತೆಯಾಗಿ ಪರಿಗಣಿಸಿ ಆಗಿತ್ತು. ಅದರ ಆಧಾರದಲ್ಲಿ ಆದಿತ್ಯನಾಥ್ ಸ್ವತಃ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದ್ದರು.

ಆದರೆ ಆದಿತ್ಯನಾಥ್ ಅವರ ಯುಪಿ ಮಾದರಿ ಗೊತ್ತಿಲ್ಲದವರು ಯಾರು ?

ದಲಿತ ಯುವತಿಯನ್ನು ಅತ್ಯಾಚಾರಗೈದು ಕೊಲ್ಲುವ, ಆ ಬಡ ಹೆಣ್ಣುಮಗಳ ಮೃತದೇಹವನ್ನು ರಾತ್ರೋರಾತ್ರಿ ವ್ಯವಸ್ಥೆಯೇ ಮುಂದೆ ನಿಂತು ಸುಟ್ಟು ಹಾಕುವ, ಅತ್ಯಾಚಾರ ಸಂತ್ರಸ್ತೆಯನ್ನು ಆಮೇಲೆಯೂ ಬಿಡದೆ ಆಕೆ ಮೇಲೆ , ಆಕೆಯ ಮನೆಯವರ ಮೇಲೆ ದಾಳಿ ಮಾಡುವ, ಅತ್ಯಂತ ಕೆಟ್ಟ ಆರೋಗ್ಯ ವ್ಯವಸ್ಥೆಯ ಕಾರಣ ಹಲವು ಮಕ್ಕಳು ಪ್ರಾಣ ಕಳೆದುಕೊಳ್ಳುವ, ಆ ಮಕ್ಕಳ ಪ್ರಾಣ ರಕ್ಷಿಸಲು ಯತ್ನಿಸಿದ್ದಕ್ಕಾಗಿ ವೈದ್ಯರೊಬ್ಬರ ಮೇಲೆ ಇನ್ನಿಲ್ಲದ ಕೇಸ್ ಗಳನ್ನ ಹಾಕಿ ಬಂಧಿಸುವ , ಬೇಕಾಬಿಟ್ಟಿ ಗನ್ ಗಳನ್ನು ಬಳಸುವ, ಪೊಲೀಸರಿದ್ದರೂ ಎಲ್ಲರ ಎದುರಲ್ಲಿ ಗುಂಡಿಕ್ಕಿ ಕೊಲ್ಲುವ ಅದ್ಭುತ ಯೋಗಿ ಮಾದರಿ ಉತ್ತರ ಪ್ರದೇಶದ್ದು. ಈ ಆಡಳಿತವನ್ನೇ ವಿದೇಶಿಗರೂ ಮೆಚ್ಚಿಕೊಂಡಿದ್ದಾರೆ ಎಂದೆಲ್ಲಾ ಅವರ ಅಭಿಮಾನಿಗಳು ಬಡಾಯಿ ಬಿಟ್ಟಿದ್ದೇ ಬಿಟ್ಟಿದ್ದು.

ಆದರೆ ಈ ಎಲ್ಲ ಮೇಲಾಟಗಳ ಹಿಂದಿನ ತಮಾಷೆ ಬಯಲಾದದ್ದು ಫ್ರಾನ್ಸ್ ರಕ್ಷಣೆಗೆ ಆದಿತ್ಯನಾಥ್ ಅವರೇ ಬರಬೇಕೆಂದು ಟ್ವೀಟ್ ಮಾಡಿದ ಜರ್ಮನಿಯ ವೈದ್ಯನ ಅಸಲಿಯತ್ತು ಬಯಲಾದಾಗ. ಪ್ರೊ. ಜಾನ್ ಕ್ಯಾಮ್ ಎನ್ನುವ ಟ್ವಿಟರ್ ಖಾತೆಯ ಬೆನ್ನು ಹತ್ತಿದವರಿಗೆ ಹಲವು ಕುತೂಹಲಕಾರಿ ಅಂಶಗಳು ತಿಳಿದು ಬಂದವು. ಅಸಲಿಗೆ ಪ್ರೊ. ಜಾನ್ ಕ್ಯಾಮ್ ಇಂತಹ ಒಂದು ಟ್ವೀಟನ್ನು ಮಾಡಿರಲೇ ಇಲ್ಲ. ಆ ಹೆಸರಿನ ಟ್ವೀಟ್ ನ ಹಿಂದಿದ್ದವನ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್. ಸಾಲದ್ದಕ್ಕೆ ಈತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಎನ್ನಲಾಗಿದೆ.

ಈ ಪ್ರೊಫೆಸರ್ ಜಾನ್ ಕ್ಯಾಮ್ ಎಂಬ ಹೆಸರಿನ ಟ್ವಿಟರ್ ಖಾತೆಯನ್ನೇ ಗಮನಿಸುವುದಾದರೆ ಅದರಲ್ಲಿ ತಾನೊಬ್ಬ ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯಾಲಜಿಸ್ಟ್ ಎಂದು ಪರಿಚಯಿಸಲಾಗಿದೆ. ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದ ಬೂಮ್ ಲೈವ್, ಜಾನ್ ಕ್ಯಾಮ್ ಎಂಬ ಖಾತೆಯ ಹಿಂದಿರುವ ವ್ಯಕ್ತಿಯ ಹೆಸರು ನರೇಂದ್ರ ವಿಕ್ರಮಾದಿತ್ಯ ಯಾದವ್ ಆಗಿದ್ದು, ಈತ ಬ್ರಿಟನ್ ನ ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಜಾನ್ ಕ್ಯಾಮ್ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ವರದಿ ಮಾಡಿದೆ.

ಈ ನರೇಂದ್ರ ವಿಕ್ರಮಾದಿತ್ಯ ಯಾರು, ಆತನ ಸರಿಯಾದ ಫೋಟೊ ಯಾವುದು ಎನ್ನುವ ಬಗ್ಗೆ ಇನ್ನೂ ಸ್ಪಷ್ಟ ಉತ್ತರ ಇಲ್ಲ. ಆದ್ರೆ ಬೂಮ್ ಲೈವ್ ಸಾಕಷ್ಟು ಪ್ರಯತ್ನಿಸಿ ಈ ಫೋಟೊದಲ್ಲಿರುವ ವ್ಯಕ್ತಿಯೇ ನರೇಂದ್ರ ವಿಕ್ರಮಾದಿತ್ಯ ಎಂದು ಹೇಳಿದೆ.

ಈ ನರೇಂದ್ರ ಯಾದವ್ ತನ್ನ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾನೆ ಎಂದು ಅಸಲಿ ಡಾ. ಜಾನ್ ಕ್ಯಾಮ್ ಅವರೂ ಬೂಮ್ ಲೈವ್ ಗೆ ಹೇಳಿದ್ದಾರೆ. ಯಾವಾಗ ಜಾನ್ ಕ್ಯಾಮ್ ಟ್ವಿಟರ್ ಖಾತೆಯಿಂದ ಆದಿತ್ಯನಾಥ್ ರನ್ನು ಹೊಗಳಿ ಟ್ವೀಟ್ ಮಾಡಲಾಯಿತೋ ಆ ಕೂಡಲೇ ಭಟ್ಟಂಗಿ ಮಾಧ್ಯಮಗಳೂ ಮೈಕೊಡವಿ ಎದ್ದು ನಿಂತವು. " ಫ್ರಾನ್ಸ್ ಹಿಂಸಾಚಾರ ನಿಲ್ಲಿಸಲು ಆದಿತ್ಯನಾಥ್ ಗೆ ಕರೆ " ಎಂದು ನ್ಯೂಸ್ 18 ಉತ್ತರ ಪ್ರದೇಶ ವರದಿ ಮಾಡಿತ್ತು. ಎಬಿಪಿ ಕೂಡ ಇದೇ ರೀತಿಯ ಸುದ್ದಿ ಪ್ರಸಾರ ಮಾಡಿತ್ತು.

ಅಂದ ಹಾಗೆ ಈ ಡಾ. ನರೇಂದ್ರ ವಿಕ್ರಮಾದಿತ್ಯ ಯಾದವ್ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ 2019ರಲ್ಲಿ ಬಂಧಿಸಲ್ಪಟ್ಟಿದ್ದ ಎನ್ನುವ ವಿಚಾರವೂ ಇಲ್ಲಿ ಮಹತ್ವದ್ದಾಗಿದೆ. ಉದ್ಯೋಗಿಗಳಿಗೆ ವಂಚಿಸಿದ ಆರೋಪದಲ್ಲಿ ಹೈದರಾಬಾದ್ ನ ರಾಚಕೊಂಡ ಪೊಲೀಸರು 2019ರ ಮೇ 25ರಂದು ಈತನನ್ನು ಬಂಧಿಸಿದ್ದರು. ಇದೀಗ ಈತ ಮತ್ತೊಮ್ಮೆ ಬೇರೆ ಯಾರದ್ದೋ ಹೆಸರು ಹಾಕಿ ಸ್ವತಃ ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನೇ ವಂಚಿಸಿದ್ದಾನೆ.

ಈ ಎಲ್ಲ ವಿಚಾರಗಳಾಚೆಗೆ ಒಂದು ಟ್ವಿಟರ್ ಖಾತೆಯನ್ನು, ಅದರ ಹಿನ್ನೆಲೆಯನ್ನು ಅದರ ಕ್ರೆಡಿಬಿಲಿಟಿಯನ್ನು ಪರಿಶೀಲಿಸುವ ಸಾಮರ್ಥ್ಯ ಇಲ್ಲದೆ ಮುಖ್ಯಮಂತ್ರಿಯ ಕಚೇರಿ ಕಾರ್ಯನಿರ್ವಹಿಸುತ್ತಿದೆ ಎನ್ನುವುದೇ ಆ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಯಂತ್ರ ಹೇಗಿರಬಹುದು ಎನ್ನುವುದಕ್ಕೆ ಒಂದು ಅತ್ಯುತ್ತಮ ಉದಾಹರಣೆಯಾಗಿದೆ.

ಯಾವುದೋ ನಕಲಿ ವ್ಯಕ್ತಿಯೊಬ್ಬನ ಹೊಗಳಿಕೆಯನ್ನು ಅಂತಾರಾಷ್ಟ್ರಿಯ ಮನ್ನಣೆ ಎಂದು ನಂಬಿ, ಇತರರನ್ನೂ ನಂಬಿಸಲು ಹೋಗಿ ನಗೆಪಾಟಲಿಗೀಡಾಗಿದೆ ಉತ್ತರ ಪ್ರದೇಶ ಆಡಳಿತ . ಚುನಾವಣೆ ಗೆಲ್ಲಲು, ಮತ ಧ್ರುವೀಕರಣ ಮಾಡಲು, ಜನರನ್ನು ಒಡೆಯಲು ಸುಳ್ಳು ಸುದ್ದಿಗಳನ್ನೇ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡವರೀಗ ಸಂಪೂರ್ಣವಾಗಿ ಸುಳ್ಳಿನಲ್ಲೇ ಮುಳುಗಿದ್ದಾರೆ. ಸುಳ್ಳಿನ ಕಡಲಿನಲ್ಲಿರುವ ಅವರಿಗೆ ಕಣ್ಣೆದುರಿಗೆ ಇರುವುದು ಸುಳ್ಳೋ, ಸತ್ಯವೋ ಎನ್ನುವುದನ್ನು ಅರ್ಥ ಮಾಡಿಕೊಳ್ಳಲೂ ಆಗದ ಪರಿಸ್ಥಿತಿ ಇದೆ. ಅಥವಾ ಅವರ ಮೂರ್ಖತನ ಅವರನ್ನು ಆಲೋಚಿಸಲು ಬಿಡುತ್ತಿಲ್ಲ. ಇಲ್ಲದಿದ್ದರೆ ನಕಲಿ ಟ್ವೀಟೊಂದನ್ನು ರಿಟ್ವೀಟ್ ಮಾಡಿ ತನ್ನನ್ನು ತಾನೇ ಹಾಡಿ ಹೊಗಳಿ ಈ ದೇಶದ ಅತಿದೊಡ್ಡ ರಾಜ್ಯದ ಮುಖ್ಯಮಂತ್ರಿ ನಗೆಪಾಟಲಿಗೆ ಈಡಾಗುತ್ತಿರಲಿಲ್ಲ.

ಈ ಹಿಂದೆಲ್ಲಾ ಪೋಸ್ಟ್ ಕಾರ್ಡ್ ಎನ್ನುವ ಸುಳ್ಳುಗಳ ಫ್ಯಾಕ್ಟರಿ ವಿದೇಶಗಳ ಸೇತುವೆ, ವಿಮಾನ ನಿಲ್ದಾಣಗಳ ಫೋಟೊ ಹಾಕಿ ಇದು ನಮ್ಮ ಮೋದಿ ಸರ್ಕಾರ ನಿರ್ಮಿಸಿದ್ದು ಎಂದು ಸುಳ್ಳೇ ಸುಳ್ಳು ಹೇಳಿ ಸಿಕ್ಕಿಬಿದ್ದ ಹಲವು ಘಟನೆಗಳು ನಡೆದಿದ್ದವು. ಫೊಟೊ ಶಾಪ್ ಸುಳ್ಳುಗಳನ್ನು ನೋಡಿ ನೋಡಿ ಭಕ್ತರು ರೋಸಿ ಹೋದ ಮೇಲೆ, ಇದೀಗ ಮತ್ತೊಂದು ರೀತಿಯ ಸುಳ್ಳುಗಳ ವರ್ಷನ್ ರೆಡಿಯಾಗುತ್ತಿದೆ. ಬಹುಷ ಜಾನ್ ಕ್ಯಾಮ್ ಟ್ವೀಟ್ ಕೂಡ ಇದರದ್ದೇ ಭಾಗ ಆಗಿರಲೂ ಬಹುದು.

ಜಾನ್ ಎಂಬ ಹೆಸರು ಕಂಡ ತಕ್ಷಣ ಆದಿತ್ಯನಾಥ್ ಕಚೇರಿ ರಿಟ್ವೀಟ್ ಮಾಡಿದೆ. ಇನ್ನು ಈ ಖಾತೆಯಲ್ಲಿ ಫೋಟೊಶಾಪ್ ಮಾಡಿದಂತೆ ಕಾಣುವ ಹಲವು ಫೋಟೊಗಳಿದ್ದು, ದಲಿತರು ಮತ್ತು ಮುಸ್ಲಿಮರ ವಿರುದ್ಧ ಈ ಹಿಂದೆ ಹಲವು ಬಾರಿ ದ್ವೇಷದ ಟ್ವೀಟ್ ಗಳನ್ನು ಮಾಡಲಾಗಿದೆ. ಈ ಖಾತೆಗೆ 29 ಸಾವಿರಕ್ಕೂ ಹೆಚ್ಚು ಫಾಲೋವರ್ ಗಳೂ ಇದ್ದಾರೆ. ವಿಶೇಷ ಅಂದ್ರೆ ಈ ಹಿಂದೆಲ್ಲಾ ಫೋಟೊಶಾಪ್ ನಲ್ಲಿ ನಕಲಿ ಸುದ್ದಿಗಳನ್ನು ಸೃಷ್ಟಿಸಿ ಸಾಮಾನ್ಯ ಕಾರ್ಯಕರ್ತರು, ಭಕ್ತರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದ್ದರೆ, ಈ ಬಾರಿ ಡಾ. ಜಾನ್ ಕ್ಯಾಮ್ ಟ್ವೀಟ್ ಗೆ ಆದಿತ್ಯನಾಥ್ ಆಡಳಿತವೇ ಬೇಸ್ತು ಬಿದ್ದಿದೆ.

ಗೋಡೆಗಳ ಬಣ್ಣ ಬದಲಿಸುವ, ನಗರಗಳ ಹೆಸರು ಬದಲಿಸುವ ಕೆಲಸಗಳನ್ನೇ ಅಭಿವೃದ್ಧಿ ಎಂದು ಪರಿಗಣಿಸುವ, ಎನ್ ಕೌಂಟರ್ ಗಳ ಮೂಲಕ ಇನ್ ಸ್ಟಂಟ್ ಜಸ್ಟಿಸ್ ಹೆಸರಲ್ಲಿ ಅಕ್ರಮ ಎಸಗುವ, ದಲಿತರು, ಅಲ್ಪಸಂಖ್ಯಾತರ ಮೇಲೆ ನಿರಂತರ ಹಲ್ಲೆ , ದೌರ್ಜನ್ಯಗಳು ನಡೆಯುವ, ಶಿಕ್ಷಣ ಸೇರಿ ಬಹುತೇಕ ಎಲ್ಲ ಸೂಚ್ಯಂಕಗಳಲ್ಲೂ ಅತ್ಯಂತ ಕನಿಷ್ಟ ಮಟ್ಟದಲ್ಲಿರುವ ಉತ್ತರ ಪ್ರದೇಶವನ್ನು ಯಾವುದೇ ನಾಚಿಕೆ ಇಲ್ಲದೆ ಮಾದರಿ ಆಡಳಿತ ಎಂದು ಸ್ವತಃ ಅಲ್ಲಿನ ಸರ್ಕಾರವೇ ಹೇಳುತ್ತಿದೆ. ಅದನ್ನೇ ವಿವಿಧ ರೀತಿಯಲ್ಲಿ ಪ್ರಚಾರ ಮಾಡಲು ಭಟ್ಟಂಗಿ ಮೀಡಿಯಾಗಳೂ ಇವೆ. ಕಾನೂನುಗಳೇನು, ಶಿಕ್ಷೆಗಳೇನು ಎನ್ನುವುದನ್ನು ದೇಶದ ನ್ಯಾಯಾಂಗ ವ್ಯವಸ್ಥೆ ಹೇಳಿದ್ದರೂ ಬುಲ್ಡೋಝರ್ ಗಳನ್ನು ಬಳಸಿ ಮನೆ ಒಡೆಯುವ , ಇಂತಹ ದುಷ್ಕೃತ್ಯವನ್ನು​​ ಹೀರೋಯಿಸಂನಂತೆ ಬಿಂಬಿಸುವ ಮಾಧ್ಯಮಗಳು ಪ್ರಭುತ್ವದ ಪಾದ ನೆಕ್ಕುವ ಕೆಲಸವನ್ನೇ ಮಾಡುತ್ತಿದೆ.

ಈಗಲೂ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮಾಡಲು ದೇಶದ ಎಲ್ಲ ರಾಜ್ಯಗಳಿಗೂ ಹೋಗುವ ಅಲ್ಲಿನ ಭಯ್ಯಾಗಳು ಆ ರಾಜ್ಯದ ಶೋಚನೀಯ ಪರಿಸ್ಥಿತಿಗೆ ಉದಾಹರಣೆಯಾಗಿದ್ದಾರೆ. ಈ ಎಲ್ಲವುಗಳ ಹೊರತಾಗಿ ಆದಿತ್ಯನಾಥ್ ಅವರಿಗೆ ಸಾಧ್ಯವಿದ್ದರೆ ಫ್ರಾನ್ಸ್ ನಷ್ಟು ದೂರ ಹೋಗೋದೆಲ್ಲಾ ಬೇಡ. ಹತ್ತಿರದಲ್ಲೇ ಹೊತ್ತಿ ಉರಿಯುತ್ತಿರುವ ಮಣಿಪುರವೆಂಬ ನಮ್ಮದೇ ದೇಶದ ರಾಜ್ಯದತ್ತ ನೋಡಿದರೂ ಸಾಕಿತ್ತು.

ಯಾಕೆಂದರೆ ಬಿಜೆಪಿಗರು ಹೇಳುವಂತೆ ಡಬಲ್ ಎಂಜಿನ್ ಸರಕಾರವಿರುವ ಮಣಿಪುರದಲ್ಲಿ ಎರಡು ತಿಂಗಳುಗಳಿಂದ ನಿರಂತರ ಆಂತರಿಕ ಹಿಂಸಾಚಾರ ನಡೆಯುತ್ತಿದ್ದರೂ ನಮ್ಮ ದೇಶದ ಪ್ರಧಾನಿ ಮಣಿಪುರದ ಬಗ್ಗೆ ಒಂದು ಮಾತನ್ನೂ ಆಡಿಲ್ಲ, ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ಗೋಜಿಗೂ ಹೋಗಿಲ್ಲ. ಪುಟಿನ್ ಜೊತೆ ಮಾತನಾಡಿ ರಷ್ಯಾ ಯುದ್ಧ ನಿಲ್ಲಿಸಬಲ್ಲ ವಿಶ್ವಗುರುವಿಗೆ ತನ್ನದೇ ದೇಶದ ರಾಜ್ಯವೊಂದರ ಸಮಸ್ಯೆ ಪರಿಹರಿಸಲು ಸಾಧ್ಯವಾಗಿಲ್ಲ ಅನ್ನೋದೇ ಹಾಸ್ಯಾಸ್ಪದ.

ಹೀಗಾಗಿ ಆದಿತ್ಯನಾಥ್ ಅವರೇ... ಫ್ರಾನ್ಸನ್ನು ರಕ್ಷಿಸುವ ಕನಸು ಕಾಣೋದು ಬಿಟ್ಟು, ಮಣಿಪುರದ ಕಡೆಗೆ ಪ್ರಧಾನಿ ಕಣ್ಣು ಹಾಯಿಸುವ ಹಾಗೆ ಮಾಡಿದರೂ ಸಾಕು. ಅಲ್ಲಿನ ಜನ ನಿಮ್ಮನ್ನು ಎಂದಿಗೂ ಮರೆಯಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News