×
Ad

ಮೈಮೇಲೆ ಕಸದ ರಾಶಿ ಸುರಿದ ಪೌರ ಸಿಬ್ಬಂದಿ; ಮರದಡಿ ನಿದ್ದೆ ಮಾಡುತ್ತಿದ್ದ ವ್ಯಕ್ತಿ ಮೃತ್ಯು!

Update: 2025-05-24 08:35 IST

PC: x.com/Benarasiyaa

ಬರೇಲಿ: ಮರದಡಿ ನಿದ್ದೆ ಮಾಡುತ್ತಿದ್ದ 45 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರ ಮೇಲೆ ಪೌರ ಸಿಬ್ಬಂದಿ ಕಸದ ರಾಶಿ ಸುರಿದ ಪರಿಣಾಮ ನಿದ್ರಿಸುತ್ತಿದ್ದ ವ್ಯಕ್ತಿ ಕಸದ ರಾಶಿಯಡಿ ಸಿಲುಕಿ ಮೃತಪಟ್ಟ ಅಪರೂಪದ ಘಟನೆ ಉತ್ತರ ಪ್ರದೇಶದ ಬರೇಲಿ ನಗರದಲ್ಲಿ ನಡೆದಿದೆ.

ಬರೇಲಿ ಮಹಾನಗರ ಪಾಲಿಕೆಯ ಪೌರಕಾರ್ಮಿಕರು ಒಳಚರಂಡಿಯಿಂದ ತೆಗೆದಿದ್ದ ಹೂಳು ಮತ್ತು ಕಸವನ್ನು ಟ್ರಾಲಿಯಲ್ಲಿ ತಂದು ಸುನಿಲ್ ಕುಮಾರ್ ಪ್ರಜಾಪತಿ ಎಂಬುವವರ ಮೇಲೆ ಸುರಿದ ಪರಿಣಾಮ ಈ ದುರಂತ ಸಂಭವಿಸಿದೆ. ತರಕಾರಿ ಮಾರಾಟ ಮಾಡಿ ಕುಟುಂಬ ನಿರ್ವಹಿಸುತ್ತಿದ್ದ ಪ್ರಜಾಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ಕುಟುಂಬದವರು ವಿವರಿಸಿದ್ದಾರೆ.

ಬರೇಲಿ ನಗರದ ಬರದಾರಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದು ಅಸಹಜ ಸಾವು ಎನ್ನುವುದನ್ನು ಅಟಾಪ್ಸಿ ವರದಿ ದೃಢಪಡಿಸಿದೆ. ಇದು ನಿರ್ಲಕ್ಷ್ಯದ ಪ್ರಕರಣ ಎಂದು ಸರ್ಕಲ್ ಅಧಿಕಾರಿ ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ.

ಆರಂಭಿಕ ತನಿಖೆಯ ಬಳಿಕ ನೈರ್ಮಲ್ಯ ಗುತ್ತಿಗೆದಾರ ನಯೀಮ್ ಶಾಸ್ತ್ರಿ ವಿರುದ್ಧ ಭಾರತೀಯ ನ್ಯಾಯಸಂಹಿತೆಯ ಸೆಕ್ಷನ್ 106ರ ಅಡಿಯಲ್ಲಿ ಬರದಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.

ಮೃತ ವ್ಯಕ್ತಿಯ ತಂದೆ ಗಿರ್ವಾರ್ ಸಿಂಗ್ ಪ್ರಜಾಪತಿ ಈ ಬಗ್ಗೆ ದೂರು ನೀಡಿದ್ದು, ಸ್ಮಶಾನದ ಎದುರಿನ ಮರದ ಅಡಿಯಲ್ಲಿ ಮಗ ಮಲಗಿದ್ದ ಸಂದರ್ಭದಲ್ಲಿ ಪಾಲಿಕೆಯ ಟ್ರಾಲಿ ಉದ್ದೇಶಪೂರ್ವಕವಾಗಿ ಆತನ ಮೇಲೆ ತ್ಯಾಜ್ಯವನ್ನು ಸುರಿದಿದೆ. ಪೌರಸಿಬ್ಬಂದಿ ಆ ಬಗ್ಗೆ ತಿರುಗಿಯೂ ನೋಡಿಲ್ಲ. ಈ ಜಾಗ ತ್ಯಾಜ್ಯ ಅಥವಾ ಹೂಳು ಸುರಿಯಲು ನಿಗದಿಪಡಿಸಿದ ಪ್ರದೇಶವಾಗಿರಲಿಲ್ಲ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News