ನಂಜನಗೂಡು | ಫೋಕಸ್ ಲೈಟ್ ಮೇಲೆ ಬಸವೇಶ್ವರ ಭಾವಚಿತ್ರ ವಿವಾದ: ಅರ್ಧಕ್ಕೆ ಜಾತ್ರೆ, ದೇವಾಲಯಕ್ಕೆ ಬೀಗ; ಗ್ರಾಮದಲ್ಲಿ ಬಿಗುವಿನ ವಾತಾವರಣ
ಸಾಂದರ್ಭಿಕ ಚಿತ್ರ
ನಂಜನಗೂಡು : ಗ್ರಾಮದ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಬಾವುಟ ಅಳವಡಿಸಿದ ಹಿನ್ನಲೆ ಉಂಟಾದ ವಿವಾದ ಜಾತ್ರೆ ಸಂಭ್ರಮವನ್ನು ಮೊಟಕುಗೊಳಿಸಿದ ಘಟನೆ ನಂಜನಗೂಡು ತಾಲೂಕು ಹಗಿನವಾಳು ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಬಾವುಟ ತೆಗೆಯುವ ವಿಚಾರದಲ್ಲಿ ಎರಡು ಸಮುದಾಯದ ನಡುವೆ ಉಂಟಾದ ಮಾತಿನ ಚಕಮಕಿ ಜಾತ್ರೆ ಸ್ಥಗಿತವಾಗುವಂತೆ ಮಾಡಿದೆ. ವಿಧ್ಯುಕ್ತ ಚಾಲನೆ ದೊರೆತು ಅದ್ದೂರಿಯಿಂದ ಆರಂಭವಾದ ರಥೋತ್ಸವ ರಸ್ತೆ ಮಧ್ಯದಲ್ಲೇ ಅನಾಥವಾಗಿ ನಿಂತಿದೆ. ಈ ಘಟನೆಯಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನಂಜನಗೂಡು ತಾಲೂಕು ಹಗಿನವಾಳು ಗ್ರಾಮದ ಪಟ್ಟದ ಅಮ್ಮ ರಾಣಿ ದೇವತೆಯ ಜಾತ್ರಾ ಮಹೋತ್ಸವಕ್ಕೆ ಶನಿವಾರ ಚಾಲನೆ ದೊರೆಯಿತು. ಶನಿವಾರದಿಂದ ಮೂರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸಿದ್ದರು. ದೇವಾಲಯದ ಸಮೀಪವಿರುವ ವೃತ್ತದ ಬಳಿ ಫೋಕಸ್ ಲೈಟ್ ಮೇಲೆ ಬಸವೇಶ್ವರರ ಭಾವಚಿತ್ರವಿರುವ ಬಾವುಟ ಅಳವಡಿಸಲಾಗಿತ್ತು. ಜಾತ್ರೆ ತೇರು ಇದೇ ವೃತ್ತದಿಂದ ಸಾಗಬೇಕಿತ್ತು. ಒಂದು ಸಮುದಾಯ ಬಾವುಟವನ್ನು ತೆರವುಗೊಳಿಸುವಂತೆ ಪಟ್ಟು ಹಿಡಿಯಿತು. ಮತ್ತೊಂದು ಸಮುದಾಯ ಬಾವುಟ ತೆರವುಗೊಳಿಸಲು ವಿರೋಧಿಸಿತು. ಸಧ್ಯ ಪೊಲೀಸರು ಸ್ಥಳಕ್ಕೆ ಬಂದು ಎರಡು ಸಮುದಾಯದ ಮುಖಂಡರ ಮನ ಒಲಿಕೆಗೆ ಯತ್ನಿಸಿದರಾದರೂ ಪಟ್ಟು ಸಡಿಲಿಸಲಿಲ್ಲ.ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.