×
Ad

ಮೈಸೂರಿನಲ್ಲಿ ಮಾದಕ ವಸ್ತು ಪ್ರಯೋಗಾಲಯ: ಖಚಿತಪಡಿಸಿದ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ

Update: 2026-02-01 00:08 IST

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಡ್ರಗ್ಸ್ ಪ್ರಯೋಗಾಲಯ ಇತ್ತು ಎಂಬುದನ್ನು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳ(ಎನ್‌ಸಿಬಿ) ಖಚಿತಪಡಿಸಿದೆ.

ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ಮಾದಕ ವಸ್ತುಗಳ ರಹಸ್ಯ ಉತ್ಪಾದನಾ ಪ್ರಯೋಗಾಲಯದ ಮೇಲೆ ದಾಳಿ ನಡೆಸಲಾಗಿತ್ತು ಎಂಬುದನ್ನು ಎನ್‌ಸಿಬಿ ಪ್ರಕಟಣೆ ಮೂಲಕ ತಿಳಿಸಿದೆ.

ರಾಜಸ್ಥಾನದ ನಾಲ್ವರನ್ನು ಬಂಧಿಸಿ, 10 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 35 ಕೆ.ಜಿ ಮೆಫೆಡ್ರೋನ್(ಎಂಡಿ) ಇದ್ದ ಕರ್ನಾಟಕ ನೋಂದಣಿಯ ಫಾರ್ಚ್ಯುನರ್ ಕಾರನ್ನು ಅಧಿಕಾರಿಗಳು ಜನವರಿ 28ರಂದು ಗುಜರಾತ್‌ನಲ್ಲಿ ಪತ್ತೆಹಚ್ಚಿದ್ದರು. ಈ ಬಗ್ಗೆ ತನಿಖೆ ನಡೆಸಿದ ವೇಳೆ ಮೈಸೂರಿನಲ್ಲಿ ಅವರು ಪ್ರಯೋಗಾಲಯ ನಡೆಸುತ್ತಿರುವುದು ತನಿಖೆಯ ವೇಳೆ ಪತ್ತೆಯಾಗಿದೆ.

ಈ ಮಾದಕ ವಸ್ತು ಸಾಗಣೆ ಜಾಲದ ಮಾಸ್ಟರ್‌ಮೈಂಡ್ ಎನ್ನಲಾದ ಮಹೀಂದ್ರ ಕುಮಾರ್ ವಿಷ್ಣೋಯಿ ಮತ್ತು ಇತರ ಮೂವರನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಗಜಪತ್‌ಲಾಲ್ ಎಂಬಾತನನ್ನು ಬಂಧಿಸಲಾಗಿದೆ. ’ಸ್ವಚ್ಛತೆಗೆ ಬಳಸುವ ರಾಸಾಯನಿಕ ವಸ್ತುಗಳ ತಯಾರಿಕಾ ಘಟಕದ ಹೆಸರಿನಲ್ಲಿ ಆರೋಪಿಗಳು 2024ರಲ್ಲಿ ಪ್ರಯೋಗಾಲಯವನ್ನು ನಿರ್ಮಿಸಿದ್ದರು. ಆರೋಪಿಗಳಲ್ಲಿ ಒಬ್ಬರಾದ ವಿಷ್ಣೋಯಿ ಸಂಬಂಧಿಯು ಕಟ್ಟಡವನ್ನು ಬಾಡಿಗೆಗೆ ನೀಡಿದ್ದರು’ ಎಂದು ಎನ್‌ಸಿಬಿ ಪ್ರಕಟಣೆ ತಿಳಿಸಿದೆ.

10 ಕೋಟಿ ರೂ. ಮೌಲ್ಯದ ಮಾದಕವಸ್ತು, 25.06 ಲಕ್ಷ ನಗದು, ಒಂದು ಎಸ್‌ಯುವಿ ಮತ್ತು 500 ಕೆ.ಜಿ ರಾಸಾಯನಿಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿರುವ ವಿಷ್ಣೋಯಿ, ರಹಸ್ಯ ಪ್ರಯೋಗಾಲಯಗಳಲ್ಲಿ ಮಾದಕ ವಸ್ತುಗಳನ್ನು ತಯಾರಿಸುವ ಯೋಜನೆಯನ್ನು ಜೈಲಿನಲ್ಲಿ ಇದ್ದಾಗ ರೂಪಿಸಿದ್ದ. ಆತನ ವಿರುದ್ಧ ರಾಜಸ್ಥಾನದಲ್ಲಿ ಮೂರು ಮತ್ತು ಗುಜರಾತ್ ಒಂದು ಪ್ರಕರಣ ದಾಖಲಾಗಿದೆ ಎಂದು ಎನ್‌ಸಿಬಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News