ರಾಜ್ಯದ ಜನತೆಗೆ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ, ವಿಜಯ ದಶಮಿ ಶುಭಾಶಯ ಕೋರಿದ ಸಿದ್ದರಾಮಯ್ಯ
ಮೈಸೂರು, ಅ.2: ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೈಸೂರಿನ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಗುರುವಾರ ಬೆಳಿಗ್ಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಮಹತ್ಮಾ ಗಾಂಧಿ ಜನ್ಮದಿನೋತ್ಸವವನ್ನು ಪ್ರತಿವರ್ಷ ದೇಶಾದ್ಯಂತ ಆಚರಣೆ ಮಾಡಿ ಸ್ಮರಿಸಲಾಗುತ್ತದೆ. ಗಾಂಧೀಜಿ ನೇತೃತ್ವದಲ್ಲಿ ನಮಗೆ ಸ್ವಾತಂತ್ರ್ಯ ಲಭಿಸಿದ್ದು, ಸ್ವಾತಂತ್ರ್ಯ ದೊರಕಲು ಅವರು ಪ್ರಮುಖ ಕಾರಣ ಕರ್ತರು. ಹಾಗಾಗಿ ನಾವು ಇಂದು ಸ್ವತಂತ್ರವಾಗಿದ್ದೇವೆ ಎಂದು ಹೇಳಿದರು.
ಗಾಂಧಿಯವರನ್ನು ಸ್ಮರಿಸಿ ಅವರು ನಡೆದ ದಾರಿಯಲ್ಲಿ ನಡೆಯುವ ಶಕ್ತಿ ನಮಗೆ ಲಭಿಸಲಿ ಎಂದರು.
ಜೊತೆಗೆ ಇಂದು ದೇಶದ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನ ಕೂಡ ಇದ್ದು, ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಅವರ ಆತ್ಮಕ್ಕೂ ಶಾಂತಿ ದೊರಕಲಿ, ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಪ್ರಯತ್ನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾಕತಾಳೀಯ ಎಂಬಂತೆ ಇಂದು ವಿಜಯದಶಮಿ ಹಬ್ಬವನ್ನು ಕೂಡ ಆಚರಣೆ ಮಾಡಲಾಗುತ್ತಿದೆ. ನಾಡಿನ ಜನರಿಗೆ ವಿಜಯದಶಮಿ ಶುಭಾಶಯಗಳು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದರು.
ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರುಗಳಾದ ಎ.ಆರ್.ಕೃಷ್ಣಮೂರ್ತಿ, ಕೆ.ಹರೀಶ್ ಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾರ್ಯದರ್ಶಿ ಶಿವಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.