ʼಬಂಡೆ ರೀತಿ ನಮ್ಮ ಸರಕಾರ ಸುಭದ್ರʼ : ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿದ ಸಿಎಂ, ಡಿಸಿಎಂ
ಮೈಸೂರು : "ನಾನು ಮತ್ತು ಡಿ.ಕೆ.ಶಿವಕುಮಾರ್ ಚೆನ್ನಾಗಿಯೇ ಇದ್ದೇವೆ. ನಮ್ಮ ಸರಕಾರ 5 ವರ್ಷ ಬಂಡೆ ರೀತಿ ಗಟ್ಟಿಯಾಗಿ ಇರುತ್ತದೆ" ಎಂದು ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಪರಸ್ಪರ ಕೈಗಳನ್ನು ಹಿಡಿದು ಮೇಲಕ್ಕೆತ್ತಿ ಒಗ್ಗಟ್ಟು ಪ್ರದರ್ಶಿಸಿದರು.
ಕೆಆರ್‌ಎಸ್. ಜಲಾಶಯಕ್ಕೆ ಬಾಗಿನ ಅರ್ಪಿಸಲು ಸೋಮವಾರ ಬೆಂಗಳೂರಿನಿಂದ ಸಿಎಂ, ಡಿಸಿಎಂ ಒಟ್ಟಿಗೆ ಒಂದೇ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಕೈ ಕೈ ಹಿಡಿದುಕೊಂಡು ನಾವಿಬ್ಬರೂ ಒಟ್ಟಿಗೆ ಇದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.
ನಾನು ಡಿ.ಕೆ.ಶಿವಕುಮಾರ್ ಒಟ್ಟಿಗೆ ಇದ್ದೇವೆ. ನಮ್ಮಸರಕಾರ 5 ವರ್ಷ ಬಂಡೆ ರೀತಿ ಇರಲಿದೆ. ಅಂತಹದರಲ್ಲಿ ನಮ್ಮಿಬ್ಬರ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಬಿಜೆಪಿಯವರು ಬಿಂಬಿಸುತ್ತಿದ್ದಾರೆ. ಬಿಜೆಪಿಯವರು ಬರೀ ಸುಳ್ಳನ್ನೇ ಹೇಳುವುದು ಎಂದು ಕಿಡಿಕಾರಿದರು.
ಆಶೋಕ್‌ಗೆ ತಿರುಗೇಟು:
ಈ ಬಾರಿಯ ದಸರಾ ಹೊಸ ಸಿಎಂರಿಂದ ಉದ್ಘಾಟನೆಯಾಗಲಿದೆ ಎಂಬ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿಕೆಗೆ ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ ಸಿಎಂ, ನಿಮಗೆ ಏನನಿಸುತ್ತದೆ ಎಂದ ಅವರು, ನಾನೇ ಈ ಬಾರಿ ದಸರಾ ಉದ್ಘಾಟನೆ ಮಾಡುತ್ತೇನೆ ಎಂದರು.
ಸರಕಾರ ಬಿದ್ದು ಹೋಗಲಿದೆ ಎಂದು ಹೇಳಲು ಮಾಜಿ ಸಚಿವ ಶ್ರೀರಾಮುಲು ಯಾವ ಜ್ಯೋತಿಷಿ? ಆತನೇ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ಎರಡರಲ್ಲೂ ಸೋತಿದ್ದಾನೆ. ಅವನೇನು ಭವಿಷ್ಯ ಹೇಳುವುದು ಎಂದು ತಿರುಗೇಟು ನೀಡಿದರು.
ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯ ಉಸ್ತುವಾರಿ ಹಾಗಾಗಿ ಅವರು ರಾಜ್ಯಕ್ಕೆ ಬಂದು ಶಾಸಕರ ಅಭಿಪ್ರಾಯ ಕೇಳಲಿದ್ದಾರೆ. ಇದರಲ್ಲಿ ವಿಶೇಷತೆ ಏನು ಇಲ್ಲ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದರೆ ಹೆಚ್ಚುವರಿ ನೀರು ಸಂಗ್ರಹ:
ಮೇಕೆದಾಟು ಯೋಜನೆಗೆ ಕೇಂದ್ರ ಸರಕಾರ ಅನುಮತಿ ನೀಡಿದರೆ ತಮಿಳುನಾಡಿಗೆ ಹರಿದು ಹೋಗುವ ಹೆಚ್ಚುವರಿ ನೀರನ್ನು ಸಂಗ್ರಹ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಕಾವೇರಿ ಟ್ರಿಬ್ಯುನಲ್ ಪ್ರಕಾರ ತಮಿಳುನಾಡಿಗೆ 177.25 ಟಿಎಂಸಿ ಬಿಡಲಾಗುತ್ತಿದೆ. ಇದಕ್ಕೆ ನಮ್ಮ ತಕರಾರು ಇಲ್ಲ. ಅದರಂತೆ ನೀರು ಬಿಡುತ್ತಿದ್ದೇವೆ. ಪ್ರತಿ ತಿಂಗಳು ತಮಿಳುನಾಡಿಗೆ 9 ಟಿ.ಎಂ.ಸಿ ನೀರನ್ನು ಬಿಡಬೇಕು. ಅದೇ ರೀತಿ ಬಿಡುತ್ತಿದ್ದೇವೆ. ಜೂನ್ ತಿಂಗಳಲ್ಲಿ ಈಗಾಗಲೇ 22 ಟಿ.ಎಂ.ಸಿ. ನೀರನ್ನು ಬಿಡಲಾಗಿದ್ದು, ಟ್ರಿಬ್ಯುನಲ್ ಆದೇಶವನ್ನು ಪಾಲನೆ ಮಾಡುತ್ತೇವೆ. ಆದರೆ, ಹೆಚ್ಚುವರಿ ನೀರು ಉಪಯೋಗವಾಗಲು ಮೇಕೆದಾಟು ಯೋಜನೆ ಅನುಮತಿ ಅಗತ್ಯ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ದ್ವಿಭಾಷಾ ಸೂತ್ರ ಒಪ್ಪಿಕೊಂಡಿದೆ. ಅದರಂತೆ ಕರ್ನಾಟಕದಲ್ಲೂ ತ್ರಿಭಾಷಾ ಸೂತ್ರ ಒಪ್ಪಿಕೊಳ್ಳುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ ಮುಖ್ಯಮಂತ್ರಿಗಳು, ನಾವು ದ್ವಿ-ಭಾಷಾ ಸೂತ್ರವನ್ನು ಒಪ್ಪಿಕೊಳ್ಳಲು ಬದ್ಧವಾಗಿದ್ದೇವೆ ಎಂದರು.
ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಳ; ಕಾರಣ ತಿಳಿಯಲು ಕ್ರಮ :
ಹಾಸನ ಜಿಲ್ಲೆಯಲ್ಲಿ ಕಿರಿಯ ವಯಸ್ಸಿನವರಿಗೆ ಹೃದಯಾಘಾತ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಈ ರೀತಿ ಚಿಕ್ಕ ವಯಸ್ಸಿನಲ್ಲೇ ಹೃದಯಘಾತಗಳು ಏಕೆ ಆಗುತ್ತಿದೆ ಎಂಬುದನ್ನು ತಿಳಿಯಲು ಕ್ರಮ ವಹಿಸುತ್ತೇವೆ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಕನಕಪುರದಲ್ಲಿ ಕಚೇರಿ ಆರಂಭ: ಡಿ.ಕೆ.ಶಿವಕುಮಾರ್
ಮೇಕೆದಾಟು ಯೋಜನೆ ಜಾರಿಮಾಡುತ್ತೇವೆ. ಈ ಸಂಬಂಧ ಕೆಲಸ ಕಾರ್ಯ ನಡೆಯಲು ಈಗಾಗಲೇ ಕನಕಪುರದಲ್ಲಿ ಕಚೇರಿ ಆರಂಭ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.