ಸೆ.4ರಂದು ಹುಣಸೂರು ನಗರಸಭೆ ಚುನಾವಣೆ: ಯಾರಿಗೆ ಒಲಿಯಲಿದೆ ಅಧ್ಯಕ್ಷ ಸ್ಥಾನ ?
ಹುಣಸೂರು, ಆ.31: ನಗರಸಭೆಯ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸೆ.4ರಂದು ಚುನಾವಣೆ ನಡೆಯಲಿದ್ದು, ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ನಗರದ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ 2ಬಿ ಸಾಮಾನ್ಯ ಸ್ಥಾನಕ್ಕೆ ಈ ಬಾರಿ ಮುಸ್ಲಿಮ್ ಸಮುದಾಯದ ಇಬ್ಬರು ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಹೆಸರು ಕೇಳು ಬರುತ್ತಿದೆ. ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂದು ಕಾದು ನೋಡಬೇಕಿದೆ.
ನಗರದ 13ನೇ ವಾರ್ಡ್‌ನ ಖಾಜಿ ಮೊಹಲ್ಲಾದ ಪಕ್ಷೇತರ ಅಭ್ಯರ್ಥಿಯಾದ ಮಾಲಿಕ್ ಪಾಷಾ ಹಾಗೂ 14ನೇ ವಾರ್ಡ್
ನ ಮುಸ್ಲಿಮ್ ಬ್ಲಾಕ್‌ನ ಜೆಡಿಎಸ್ ಪಕ್ಷದಿಂದ ನಗರಸಭೆ ಸದಸ್ಯೆ ಶಾಹಿನ್ ತಾಜ್‌ರವರ ಹೆಸರೂ ಕೇಳು ಬರುತ್ತಿದೆ. ಅಲ್ಪ ಅವಧಿಗೆ ಯಾರಿಗೆ ಅಧ್ಯಕ್ಷ ಸ್ಥಾನ ಅಧಿಕಾರ ಒಲಿಯಲಿದೆ ನೋಡಬೇಕಾಗಿದೆ.
ನಗರಸಭೆ ಒಟ್ಟು ಸದಸ್ಯರು 31. ಇದರಲ್ಲಿ ಕಾಂಗ್ರೆಸ್ 14, ಜೆಡಿಎಸ್ 7, ಬಿಜೆಪಿ 3, ಪಕ್ಷೇತರ 5, ಎಸ್‌ಡಿಪಿ 2, ಸಂಸದರು 1, ಶಾಸಕರು 1 ಸೇರಿ ಒಟ್ಟು 33 ಮತ ಚಲಾಯಿಸುವ ಹಕ್ಕು ನಗರಸಭೆ ಅಧ್ಯಕ್ಷ ಚುನಾವಣೆಗೆ ಇದೆ.
ಪಕ್ಷೇತರ ನಗರಸಭೆ ಸದಸ್ಯರಾದ 13ನೇ ವಾರ್ಡ್‌ನ ಖಾಜಿ ಮೊಹಲ್ಲಾದ ಮಾಲಿಕ್ ಪಾಷಾ ಮಾತನಾಡಿ, ನಮ್ಮ ಶಾಸಕ ಜಿ.ಟಿ.ಹರೀಶ್ ಗೌಡ ನುಡಿದಂತೆ ನಡೆದುಕೊಳ್ಳುತ್ತಾರೆ ಎಂದು ಅವರ ಮೇಲೆ ನಂಬಿಕೆ ಇದೆ. ಪಕ್ಷೇತರ ಅಭ್ಯರ್ಥಿಗೆ ಅವಕಾಶ ಕಲ್ಪಿಸಿಕೊಡುವ ಸಂಪೂರ್ಣ ಭರವಸೆ ನನಗಿದೆ ಎಂದರು.
14ನೇ ವಾರ್ಡ್‌ನ ಮುಸ್ಲಿಮ್ ಬ್ಲಾಕ್‌ನ ಜೆಡಿಎಸ್‌ನ ನಗರಸಭೆ ಸದಸ್ಯೆ ಶಾಹಿನ್ ತಾಜ್ ಮಾತನಾಡಿ, ಈ ಬಾರಿ ನಾನು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ. ನಮ್ಮ ಶಾಸಕ ಜಿ.ಟಿ.ಹರೀಶ್ ಗೌಡರ ಮೇಲೆ ಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಎಸ್‌ಡಿಪಿಐ 31ನೇ ವಾರ್ಡ್‌ನ ನಗರಸಭೆ ಸದಸ್ಯ ಸೈಯದ್ ಯೂನುಸ್ ಮಾತನಾಡಿ, ನಮ್ಮ ಮತ ಬಿಜೆಪಿ ಪಕ್ಷದ ವಿರುದ್ಧ. ನಮ್ಮ ಪಕ್ಷದ ಸಿದ್ಧಾಂತದಂತೆ ಯಾರಿಗೆ ಮತ ಚಲಾಯಿಸಲು ಸೂಚನೆ ನೀಡಿತ್ತಾರೋ ಅವರಿಗೆ ಮತ ನೀಡುತ್ತೇವೆ. ಶಾಸಕರು ಜಿ.ಟಿ.ಹರೀಶ್ ಗೌಡ 3 ವರ್ಷಗಳಿಂದ ಅಲ್ಪಸಂಖ್ಯಾತರು ಹೆಚ್ಚು ವಾಸವಿರುವ ಶಬ್ಬೀರ್ ನಗರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಮಾಡಿಲ್ಲ ಎಂದು ದೂರಿದ್ದಾರೆ.
13ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಮಾಲಿಕ್ ಪಾಷಾ ಕಾಂಗ್ರೆಸ್ ಪಕ್ಷಕ್ಕೆ ಸಹಾಯ ಮಾಡಿದ್ದಾರೆ. ಆದ್ದರಿಂದ ನಾವು ಅವರ ವಿರುದ್ಧ ಅಭ್ಯರ್ಥಿ ಹಾಕುವುದಿಲ್ಲ.
-ಎಚ್.ಪಿ.ಮಂಜುನಾಥ್, ಮಾಜಿ ಶಾಸಕ
ಒಂದೇ ಸಮುದಾಯದ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಇರುವುದರಿಂದ ಯಾರನ್ನಾದರೂ ಸ್ವಾಗತಿಸುತ್ತೇನೆ.
-ಎಚ್.ವಿಶ್ವನಾಥ್, ವಿಧಾನ ಪರಿಷತ್ ಸದಸ್ಯ