ಕೆಲವು ವಿವಿಗಳನ್ನು ಮುಚ್ಚುವ ರಾಜ್ಯ ಸರಕಾರದ ನಿಲುವು ಸರಿಯಾಗಿದೆ : ಎಚ್.ವಿಶ್ವನಾಥ್
ಮೈಸೂರು : ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳನ್ನು ಮುಚ್ಚಲು ಮುಂದಾಗಿರುವ ರಾಜ್ಯ ಸರಕಾರದ ನಿಲುವನ್ನು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬೆಂಬಲಿಸಿದ್ದು, ಇದು ಒಳ್ಳೆಯ ನಿರ್ಧಾರ ಎಂದಿದ್ದಾರೆ.
ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಲ್ಲೆಗೊಂದು ವಿವಿ ಕೊಟ್ಟರೆ ಏನಾಗಬೇಕು. ಅನುದಾನವೇ ಕೊಟ್ಟಿಲ್ಲ. ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಪಡೆಯಲು 5 ಕೋಟಿ ರೂ. ಫಿಕ್ಸ್ ಮಾಡಿದ್ದೇ ಈ ಹಿಂದಿನ ಬಿಜೆಪಿ ಸರಕಾರ. ಅದು ಈಗಲೂ ಮುಂದುವರಿದಿದೆ. ಈ ವಿಚಾರ ಎಲ್ಲರಿಗೂ ಗೊತ್ತಿದೆ. ಕೆಲವು ವಿವಿಗಳನ್ನು ಬಂದ್ ಮಾಡಲು ಮುಂದಾಗಿರುವ ರಾಜ್ಯ ಸರಕಾರದ ನಿಲುವು ಸರಿಯಾಗಿದೆ. ರಾಜ್ಯದಲ್ಲೀಗ ಅಕ್ಷರ, ಆರೋಗ್ಯ ಎರಡಕ್ಕೂ ಬೆಲೆ ಇಲ್ಲದಂತಾಗಿದೆ ಎಂದರು.
ಸಿಎಂ ಉತ್ತರಿಸಲಿ : ರಾಜ್ಯದಲ್ಲಿ ಶಾಂತಿಗೆ ಅವಕಾಶ ಇಲ್ಲದಂತಾಗಿದೆ. ಎಲ್ಲಾ ಕಡೆ ಗಲಾಟೆ, ಗಲಭೆ, ಕೊಲೆ, ಆತ್ಮಹತ್ಯೆಗಳು ನಡೆಯುತ್ತಿವೆ. ಇದಕ್ಕೆಲ್ಲ ಯಾರು ಕಾರಣ? ಜನ ಕಾರಣ ಅಲ್ಲ. ನಾವು ಆಯ್ಕೆ ಮಾಡಿದ ಸರಕಾರ ಕಾರಣ. ಸರಕಾರದ ಮುಖ್ಯಸ್ಥರಾಗಿರುವ ಸಿದ್ದರಾಮಯ್ಯ ಇದಕ್ಕೆಲ್ಲ ಉತ್ತರ ಕೊಡಬೇಕು ಎಂದು ಹೇಳಿದರು.
ರಾಜ್ಯ ಸರಕಾರದ ಗೃಹಲಕ್ಷ್ಮಿ-ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗದ ವಿಚಾರ ಕುರಿತು ಪ್ರತಿಕ್ರಿಯಿಸಿದ ಎವರು, ಗೃಹಲಕ್ಷ್ಮಿ ಯೋಜನೆಯ ಹಣ ಬರ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದರಿಂದ ಮನೆಗಳು ಮುರಿದು ಹೋಗುವ ಪರಿಸ್ಥಿತಿ ಬಂದಿದೆ ಎಂದರು.