×
Ad

ನಾಲ್ವಡಿ ಮಹಾರಾಜರಿಗಿಂತ ಸಿದ್ದರಾಮಯ್ಯ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ದುರಹಂಕಾರದ ಪರಮಾವಧಿ : ಎಚ್.ವಿಶ್ವನಾಥ್

Update: 2025-07-26 18:50 IST

ಸಿದ್ದರಾಮಯ್ಯ/ಎಚ್‌.ವಿಶ್ವನಾಥ್‌

ಮೈಸೂರು : ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಮೈಸೂರು ನಗರವನ್ನು ಹೆಚ್ಚು ಅಭಿವೃದ್ಧಿ ನಮ್ಮ ತಂದೆ ಸಿಎಂ ಸಿದ್ದರಾಮಯ್ಯ ಅವರು ಮಾಡಿದ್ದಾರೆ ಎಂಬ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರ ಹೇಳಿಕೆ ದುರಹಂಕಾರದ ಪರಮಾವಧಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ನಾನೇ ಡಿ.ದೇವರಾಜ ಅರಸುಗಿಂತ ದೊಡ್ಡವನು ಎನ್ನುತ್ತಾರೆ. ಮಗ ಯತೀಂದ್ರ ಮೈಸೂರು ಮಹರಾಜರಿಗಿಂತ ದೊಡ್ಡವರು ಎನ್ನುತ್ತಾರೆ ಎಂದು ಕಿಡಿಕಾರಿದರು.

5 ಕೆ.ಜಿ. ಅಕ್ಕಿ ಕೊಟ್ಟಾಕ್ಷಣ ದೇವರಾಜ ಅರಸು ಆಗಲು ಸಾಧ್ಯವೇ?. ದೇವರಾಜ ಅರಸು ಅವರು 21 ಲಕ್ಷ ಹೆಕ್ಟೇರ್ ಭೂಮಿ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಮತ್ತು ಅವರ ಮಗ ಮನುಷ್ಯ ದ್ವೇಷದ ತರಹ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯತೀಂದ್ರ ನೀನು ಇನ್ನೂ ಎಂ.ಎಲ್.ಸಿ. ಆಗಿದ್ದೀಯ ಇನ್ನೂ ಬೆಳೀಬೇಕು ನೀನಾಗಲಿ, ಸಿದ್ದರಾಮಯ್ಯ ಅವರಗಾಲಿ ಡಿ.ದೇವರಾಜ ಅರಸು, ನಾಲ್ಬಡಿ ಅವರಿಗೂ ಸಮ ಇಲ್ಲ. ಅವರಿಗಿಂತ ಬಹಳ ಕೆಳಗೆ ಇದ್ದೀರ. ಹೋಗಲಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೂ ನೀವು ಸಮ‌ ಇಲ್ಲ ಎಂದು ಹರಿಹಾಯ್ದರು.

ಮೈಸೂರು ಮಹರಾಜರ ಕೊಡುಗೆ ಬಹಳಷ್ಟಿದೆ. ಬಡವರಿಗೆ ಭೂಮಿ ಕೊಟ್ಟಿದ್ದಾರೆ .‌ಅಕ್ಷರ, ಅನ್ನ, ಆರೋಗ್ಯ ಕೊಟ್ಟಿದ್ದಾರೆ. ನೀವೇನು ಕೊಟ್ಟಿದ್ದೀರಿ ಎಂದು ಹೇಳಿ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಟ್ಟಂತ ಆಡಳಿತ ಇಡೀ ಭಾರತದಲ್ಲಿ ಯಾವ ರಾಜಕಾರಣಿಯೂ ಕೊಟ್ಟಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News