×
Ad

ಪಂಚ ʼಗ್ಯಾರಂಟಿʼಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

► ಶೀಘ್ರವೇ ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಸ್ಥಾಪನೆ ► ಮಹಿಳಾ ದಸರಾ ಉದ್ಘಾಟನೆ

Update: 2025-09-23 18:00 IST

ಮೈಸೂರು , ಸೆ.23 : ಮಹಿಳೆ ಎಂದರೇ ಸ್ವಾವಲಂಬನೆಯ ಪ್ರತೀಕ. ಪಂಚ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಮಹಿಳೆಯರ ಬದುಕು ಸುಧಾರಣೆ ಕಂಡಿದೆ‌ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದರು.

ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜೆ.ಕೆ.ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಮಹಿಳಾ ದಸರಾ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬಿ ಜೀವನವನ್ನು ಕಟ್ಟಿಕೊಡಬೇಕು, ದುಡಿಯುವ ಕೈಗಳಿಗೆ ಕೆಲಸ ಕೊಡಬೇಕು, ಮಹಿಳೆಯರು ಸ್ವಾವಲಂಬಿಯಾಗಿ ಜೀವಿಸಲು ಸಹಾಯ ಮಾಡಬೇಕು ಎಂಬ ಚಿಂತನೆಯನ್ನು ಇಟ್ಟುಕೊಂಡು ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಮಹಿಳೆಯರನ್ನು ಕೇಂದ್ರೀಕೃತವಾಗಿ ಇಟ್ಟುಕೊಂಡು ಈ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರು.

ಶೀಘ್ರವೇ ಗೃಹಲಕ್ಷ್ಮೀ ಹೆಸರಲ್ಲಿ ಸಹಕಾರ ಸಂಘಗಳ ಸ್ಥಾಪನೆ:

ಮಹಿಳೆಯರಿಗೆ ಬ್ಯಾಂಕ್‌ಗಳಿಂದ ಸರಿಯಾಗಿ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರ ಪರಿಣಾಮ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳಲು ಕಷ್ಟವಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರವು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳ ಹೆಸರಿನಲ್ಲಿ ಸಹಕಾರ ಸಂಘ ಆರಂಭಿಸಲು ಚಿಂತನೆ ನಡೆಸಿದೆ. ಈ‌ ಮೂಲಕ ಮಹಿಳೆಯರಿಗೆ ಸಾಲ ಸೌಲಭ್ಯ ನೀಡಿ ಅವರನ್ನು ಸ್ವಾವಲಂಬಿಗಳಾಗಿ ಮಾಡಲಾಗುವುದು ಎಂದು ಹೇಳಿದರು.

ಮಹಿಳೆಯರ ಸ್ವಾಭಿಮಾನ, ಸಮೃದ್ಧಿ, ತಾಳ್ಮೆ, ಶಕ್ತಿಯ ಪ್ರತೀಕವೇ ದಸರಾ ಹಬ್ಬ. ನವ ದೇವಿಯ ಆರಾಧನೆ ಮಾಡಿ. ದುಷ್ಟರ ವಿರುದ್ಧ ಶಿಷ್ಟರ ರಕ್ಷಣೆ ಮಾಡುವ ದೇವಿಯ ಆರಾಧನೆ ಮಾಡುವುದೇ ವಿಜಯ ದಶಮಿ. ಇಡೀ ವಿಶ್ವಕ್ಕೆ ಸಂಸ್ಕೃತಿಯ ರುಚಿಯನ್ನು ಕೊಟ್ಟವರು ಮಹಿಳೆಯರು. ಹಿಂದೆ ರಾಜರು ಆಳ್ವಿಕೆ ಮಾಡುತ್ತಿದ್ದರು. ಆದರೆ ಈಗ ಸರಕಾರ ಬಹಳ ವಿಜೃಂಭಣೆಯಿಂದ ದಸರಾ ಆಚರಿಸುತ್ತಾ ಬರುತ್ತಿದೆ ಎಂದರು.‌

ಐಸಿಡಿಎಸ್ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರ ಆರಂಭವಾಗಿ ಐವತ್ತು ವರ್ಷ ಆಗಿದ್ದು, ಇದೀಗ ಸುವರ್ಣ ಮಹೋತ್ಸವ ಕಾರ್ಯಕ್ರಮ ಮಾಡಲು ಚಿಂತನೆ ನಡೆದಿದೆ. ಎಲ್ ಕೆಜಿ, ಯುಕೆಜಿ ಆರಂಭಿಸುವ ಮೂಲಕ ಅಂಗನವಾಡಿಯನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದರು.

ಈ ವೇಳೆ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಉಪಾಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮಹಿಳಾ ದಸರಾ ಸಮಿತಿ ಅಧ್ಯಕ್ಷರಾದ ಮಲ್ಲಿಗೆ ವೀರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕರಾದ ಮಹೇಶ್ ಬಾಬು, ಮಹಿಳಾ ದಸರಾ ಉಪ ಸಮಿತಿಯ ಉಪ ವಿಶೇಷಾಧಿಕಾರಿ ಸವಿತಾ.ಬಿ.ಎಂ, ಮಹಿಳಾ ದಸರಾ ಸಮಿತಿಯ ಲತಾ ಮೋಹನ್, ಶಿಲ್ಪಶ್ರೀ, ಮಂಜುಳಾ ಮಂಜುನಾಥ್, ವರಲಕ್ಷ್ಮೀ, ಶಶಿ ರೇಖಾ, ಮಾಲೇಗೌಡ, ಲತಾ ಜಗದೀಶ್ ಸೇರಿದಂತೆ ಮಹಿಳಾ ದಸರಾ ಉಪ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News