×
Ad

ಮೈಸೂರು ಒಡೆಯರ್ ಜೊತೆಗೆ ಹೈದರಾಲಿ, ಟಿಪ್ಪು ಜನರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ : ಮಣಿಶಂಕರ್ ಅಯ್ಯರ್

Update: 2025-07-07 17:37 IST

ಮಣಿಶಂಕರ್ ಅಯ್ಯರ್ | PC : PTI

ಮೈಸೂರು : ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿರುವ ಅತೀ ಕೆಟ್ಟ ಪ್ರಧಾನಿ ನರೇಂದ್ರ ಮೋದಿ, ಬಹುತ್ವವನ್ನು ನಾವು ಕಾಪಾಡದಿದ್ದರೆ ದೇಶದ ಭವಿಷ್ಯವೇ ನಾಶವಾಗಲಿದೆ ಎಂದು ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಆತಂಕ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ರವಿವಾರ ಮೈಸೂರು ಲಿಟರರಿ ಫೋರಂ ಚಾರಿಟೇಬಲ್ ಟ್ರಸ್ಟ್ ಹಾಗೂ ಮೈಸೂರು ಕ್ಲಬ್ ಆಯೋಜಿಸಿದ್ದ 9ನೇ ಆವೃತ್ತಿಯ ಮೈಸೂರು ಸಾಹಿತ್ಯ ಸಂಭ್ರಮದ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ದೇಶದ 3ನೇ ಒಂದರಷ್ಟು ಜನರು ಮಾತ್ರ ಮೋದಿ ಅವರಿಗೆ ಮತ ನೀಡಿದ್ದಾರೆ. ದೇಶದ ಶೇ.66ರಷ್ಟು, ಅಂದರೆ ಹಿಂದೂಗಳ ಅರ್ಧದಷ್ಟು ಜನರು ಒಂದು ಧರ್ಮ, ಒಂದು ಭಾಷೆ ನಿರ್ಮಿಸುವವರನ್ನು ತಿರಸ್ಕರಿಸಿದ್ದಾರೆ ಎಂದು ತಿಳಿಸಿದರು.

ಈಗಿನ ಬಹುತ್ವ ಭಾರತ ಉಳಿಸಲು ದೇಶದ ಜನರು ವೈವಿಧ್ಯಮಯ ಭಾಷೆ, ಧರ್ಮ, ಸಂಸ್ಕೃತಿಯನ್ನು ಪರಸ್ಪರ ಗೌರವಿಸಬೇಕು. ಕೋಮುವಾದದ ಹಾವನ್ನು ಮನೆಯೊಳಗೆ ಬಿಟ್ಟುಕೊಳ್ಳಬಾರದು ಎಂದು ಎಚ್ಚರಿಸಿದರು.

ಕಳೆದ 700 ವರ್ಷಗಳಿಂದ ಹಿಂದೂ-ಮುಸ್ಲಿಮರು ಜೊತೆಯಲ್ಲಿಯೇ ಬದುಕಿದ್ದಾರೆ. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ಒಡೆಯರ್ ಅವರ ಜೊತೆಗೇ ಹೈದರಾಲಿ, ಟಿಪ್ಪು ಸುಲ್ತಾನ್, ಮಿರ್ಜಾ ಇಸ್ಮಾಯಿಲ್ ಜನರ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ದೇಶವು ಹಿಂದೂ ಧರ್ಮೀಯರಿಗೆ ಮಾತ್ರ ಸೇರಿದ್ದಲ್ಲ. 20 ಕೋಟಿಯಷ್ಟಿರುವ ಮುಸ್ಲಿಮರು, ಆದಿವಾಸಿಗಳು, ಕ್ರೈಸ್ತರು, ಸಿಖ್ಖರಿಗೂ ಸೇರಿದ್ದು ಎಂದು ಹೇಳಿದರು.

ಭಾರತ ಕಂಡ ಶ್ರೇಷ್ಠ ಪ್ರಧಾನಿಗಳ ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಕೊಡುತ್ತೀರಿ ಎಂಬ ಲೇಖಕ ಅರುಣ್ ರಾಮನ್ ಅವರ ಪ್ರಶ್ನೆಗೆ ಉತ್ತರಿಸಿದ ಮಣಿಶಂಕರ್ ಅಯ್ಯರ್, ಜವಹಾರಲಾಲ್ ನೆಹರು ಶ್ರೇಷ್ಠ ಪ್ರಧಾನಿ, ರಾಜೀವ್ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ನರಸಿಂಹರಾವ್, ವಾಜಪೇಯಿ, ಐ.ಕೆ.ಗುಜ್ರಾಲ್ ಅವರಿಗೆ ನಂತರದ ಸ್ಥಾನ ಕೊಡುವೆ ಎಂದರು.

ತುರ್ತು ಪರಿಸ್ಥಿತಿ ಕಾರಣ ಇಂದಿರಾ ಗಾಂಧಿ ಅವರನ್ನು ಕ್ಷಮಿಸಲಾಗದು. ನರಸಿಂಹರಾವ್ ಅವರು ಅರ್ಧ ಸಿಂಹ, ಅರ್ಧ ಮನುಷ್ಯ, ಆರ್ಥಿಕ ನೀತಿಯಲ್ಲಿ ಸಿಂಹವಾದರೆ, ಈಗ ದೇಶ ಆಳುತ್ತಿರುವವರು ಬರುವುದಕ್ಕೆ ಬಾಬರಿ ಮಸೀದಿ ಧ್ವಂಸ ಮಾಡಲು ಅವಕಾಶ ನೀಡಿದರು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News