×
Ad

ಮೈಸೂರು | ಆಕಸ್ಮಿಕ ಬೆಂಕಿ ಅವಘಡ; ಮೂರು ಮನೆಗಳು ಬೆಂಕಿಗಾಹುತಿ

Update: 2025-05-18 21:45 IST

ಮೈಸೂರು : ಆಕಸ್ಮಿಕ ಅಗ್ನಿಅವಘಡ ಸಂಭವಿಸಿ ಮೂರು ಮನೆಗಳು ಸುಟ್ಟು ಕರಕಲಾಗಿರುವ ಘಟನೆ ಶನಿವಾರ ರಾತ್ರಿ ಮೈಸೂರಿನಲ್ಲಿ ನಡೆದಿದೆ.

ಮೈಸೂರು ತಾಲೂಕಿನ ಬೋರೆ ಆನಂದೂರಿನಲ್ಲಿ ಈ ದುರ್ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಮನೆಯಲ್ಲಿ ಯಾರು ಇಲ್ಲದಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ.

ಬೋರೆ ಆನಂದೂರು ಗ್ರಾಮದ ಶನಿವಾರೆಗೌಡ, ವೆಂಕಟೇಶ್ ಗೌಡ ಹಾಗು ಶ್ರೀನಿವಾಸಗೌಡ ಎಂಬುವವರ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಮೂರು ಮನೆಗಳಲ್ಲಿ ಇದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಷಯ ತಿಳದು ತಕ್ಷಣ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಸಕ ಜಿ.ಟಿ.ದೇವೇಗೌಡ ಭೇಟಿ:

ಅಗ್ನಿ ಅವಘಡದಿಂದ ಸಂಪೂರ್ಣವಾಗಿ ಮನೆಗಳು ಸುಟ್ಟು ಹೋಗಿದ್ದ ಮೂವರು ಕುಟುಂಬದವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ವೈಯಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರವನ್ನು ವಿತರಿಸಿದರು.

ಮೈಸೂರು ತಾಲ್ಲೂಕಿನ ಬೋರೆ ಆನಂದೂರು ಗ್ರಾಮಕ್ಕೆ ರವಿವಾರ ಭೇಟಿ ನೀಡಿ ಮನೆಯನ್ನು ಕಳೆದುಕೊಂಡ ಮೂವರು ಕುಟುಂಬದವರ ಜೊತೆ ಸಮಾಲೋಚನೆ ನಡೆಸಿ, ಧೈರ್ಯ ತುಂಬಿದರು. ಆಕಸ್ಮಿಕವಾಗಿ ನಡೆದಿರುವ ಘಟನೆಯಿಂದ ಮನೆಯಲ್ಲಿ ಒಂದು ವಸ್ತುಗಳು ಇಲ್ಲದಂತೆ ಸುಟ್ಟು ಹೋಗಿದೆ. ನಮಗೆ ಆಹಾರ ಪದಾರ್ಥಗಳು ಇಲ್ಲದಂತಾಗಿದೆ ಎಂದು ಅಳಲು ತೋಡಿಕೊಂಡರು.

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲರಾಜು, ಅಧೀಕ್ಷಕ ಅಭಿಯಂತರ ಸುನಿಲ್ ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News