ಮೈಸೂರು | ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಲು ಹೋಗಿ ಸಹೋದರರು ನೀರುಪಾಲು
ಸಾಂದರ್ಭಿಕ ಚಿತ್ರ
ಮೈಸೂರು : ನೀರಿನಲ್ಲಿ ಮುಳುಗುತ್ತಿದ್ದ ಬಾಲಕನನ್ನು ಕಾಪಾಡಲು ಹೋದ ಸಹೋದರರು ನೀರು ಪಾಲಾದ ಘಟನೆ ಮೈಸೂರು ತಾಲ್ಲೂಕಿನ ಬಡಗಲಹುಂಡಿಯ ವರುಣ ನಾಲೆಯಲ್ಲಿ ನಡೆದಿದೆ.
ಬಡಗಲಹುಂಡಿಯ ನಂದನ್ (25), ರಾಕೇಶ್ (20) ಮೃತ ಸಹೋದರರು. ರಮೇಶ್ ಎಂಬುವವರ ಪುತ್ರ ನಂದನ್ ಇತ್ತೀಚೆಗಷ್ಟೆ ಪ್ರೀತಿಸಿ ವಿವಾಹವಾಗಿದ್ದರು. ರಮೇಶ್ ಹೋದರನ ಪುತ್ರ ರಾಕೇಶ್.
ಇದೇ ಗ್ರಾಮದ ಬಾಲಕನೊಬ್ಬ ವರುಣ ನಾಲೆಯಲ್ಲಿ ಈಜಲು ಹೋಗಿದ್ದನು ಎನ್ನಲಾಗಿದೆ. ಈ ವೇಳೆ ಆತ ನೀರಿನಲ್ಲಿ ಮುಳುಗುತ್ತಿರುವುದನ್ನು ಸಹೋದರರು ನೋಡಿದ್ದಾರೆ. ಗೊಬ್ಬರ ತೆಗೆದುಕೊಂಡು ನಾಲೆಯ ಮೇಲ್ಭಾಗದಲ್ಲಿ ಹೋಗುತ್ತಿದ್ದ ಸಹೋದರರು ತಕ್ಷಣ ನೀರಿಗೆ ಹಾರಿ ಮುಳುಗುತ್ತಿದ್ದವನನ್ನು ರಕ್ಷಣೆ ಮಾಡಿದ್ದಾರೆ. ಆದರೆ, ನಂದನ್ ಮತ್ತು ರಾಕೇಶ್ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ನಂದನ್ ಹಾಗೂ ರಾಕೇಶ್ ಇಬ್ಬರೂ ಅಣ್ಣ-ತಮ್ಮಂದಿರ ಮಕ್ಕಳಾಗಿದ್ದು ಸಂಬಂಧದಲ್ಲಿ ಸಹೋದರರು ಆಗುತ್ತಾರೆ.
ಕೇವಲ ಹದಿನೈದು ದಿನಗಳ ಹಿಂದೆಯಷ್ಟೇ ನಂದನ್ ಪ್ರೀತಿಸಿ ಮದುವೆಯಾಗಿದ್ದನು. ಮಕ್ಕಳನ್ನು ಕಳೆದುಕೊಂಡ ಎರಡು ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿತ್ತು.
ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.