×
Ad

ಮೈಸೂರು | ಕ್ಯಾಂಟರ್ ವಾಹನಕ್ಕೆ ಕಾರು ಡಿಕ್ಕಿ: ಇಬ್ಬರು ಸ್ಥಳದಲ್ಲೇ ಮೃತ್ಯು

Update: 2025-03-28 21:56 IST

ಮೈಸೂರು: ಸರಕು ಸಾಗಾಣಿಕೆ ವಾಹನ ಕ್ಯಾಂಟರ್‌ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಳಸ್ತವಾಡಿ ಬಳಿ ಮೈಸೂರು ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ರಸ್ತೆಯಲ್ಲಿ ಶುಕ್ರವಾರ  ನಡೆದಿದೆ.

ಬೆಂಗಳೂರಿನ ಐಟಿ ಕಂಪನಿ ಉದ್ಯೋಗಿ ಮುಕುಂದ್ (30) ಮತ್ತು ಕ್ಯಾಬ್ ಚಾಲಕ ಸುದೀಪ್ (27)ಮೃತಪಟ್ಟವರು. ಘಟನೆಯಲ್ಲಿ ಮುಕುಂದ್ ಅವರ ಗೆಳತಿ ತ್ರಿಪುರಾ ರಾಜ್ಯದ ರೂಪಾ ಸಾಲಿ (29) ತೀವ್ರವಾಗಿ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ಮುಕುಂದ್ ಮೂಲತಃ ಗುಜರಾತ್‌ನ ಅಹಮದಾಬಾದ್‌ನವರಾಗಿದ್ದು ಬೆಂಗಳೂರಿನ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಕ್ಯಾಬ್ ಚಾಲಕ ಸುದೀಪ್ ಮೈಸೂರು ಜಿಲ್ಲೆ ಬನ್ನೂರು ಹೋಬಳಿ ಸಾಲಗಾಮೆ ಗ್ರಾಮದವರು ಎನ್ನಲಾಗಿದೆ.

ಮೃತ ಮುಕುಂದ್ ತಮ್ಮ ಗೆಳತಿ ರೂಪಾ ಸಾಲಿ ಅವರೊಂದಿಗೆ ಮೈಸೂರು ಪ್ರವಾಸಕ್ಕಾಗಿ ಬೆಂಗಳೂರಿನಿಂದ ಕ್ಯಾಬ್ ಮಾಡಿಕೊಂಡು ಶುಕ್ರವಾರ ಬೆಳಗ್ಗೆ ಹೊರಟಿದ್ದರು. ಕ್ಯಾಬ್ ಮೈಸೂರು ಸಮೀಪ ಕಳಸ್ತವಾಡಿ ಬಳಿ ಬರುತ್ತಿದ್ದಂತೆ ಮುಂದೆ ನಿಂತಿದ್ದ ಕ್ಯಾಂಟರ್‌ಗೆ ಹಿಂಬದಿಯಿಂದ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ಕ್ಯಾಂಟರ್ ಒಳಗೆ ನುಗ್ಗಿತ್ತು. ಹಿಂಬದಿ ಕುಳಿತಿದ್ದ ಮುಕುಂದ್ ಮತ್ತು ರೂಪಾ ಸಾಲಿ ಅವರನ್ನು ಸ್ಥಳದಲ್ಲಿದ್ದ ಜನರು ಕಾರಿನಿಂದ ಹೊರಕ್ಕೆ ತರಲು ಯಶಸ್ವಿಯಾದರೂ ಮುಕುಂದ್ ತಲೆಗೆ ತೀವ್ರ ಪೆಟ್ಟಾಗಿ ಅವರು ಸ್ಥಳದಲ್ಲೆ ಮೃತಪಟ್ಟದ್ದರು.

ಕಾರು ಕ್ಯಾಂಟರ್ ಕೆಳಕ್ಕೆ ಸಿಲುಕಿದ್ದ ಕಾರಣ ಕ್ಯಾಬ್ ಚಾಲಕ ಸುದೀಪ್ ಅವರ ದೇಹವನ್ನು ತೆಗೆಯಲು ಸಾಧ್ಯವಾಗಲಿಲ್ಲ. ಕೂಡಲೇ ಜೆಸಿಬಿ ಮೂಲಕ ಕಾರು ಎಳೆಯಲಾಯಿತು. ಘಟನೆಯಲ್ಲಿ ಸುದೀಪ್ ಕೂಡ ಮೃತಪಟ್ಟಿದ್ದರು. 

ಮುಕುಂದ್ ಮೃತ ದೇಹವನ್ನು ಕೆಆರ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಅಪಘಾತದ ಬಗ್ಗೆ ಎನ್‌ಆರ್ ಟ್ರಾಫಿಕ್ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News