ಮೈಸೂರು | ಧರ್ಮನಿಂದನೆ ಪೋಸ್ಟ್ ಹಾಕಿದ್ದ ವ್ಯಕ್ತಿಗೆ ಜಾಮೀನು
Update: 2025-02-18 18:03 IST
ಸಾಂದರ್ಭಿಕ ಚಿತ್ರ | ANI
ಮೈಸೂರು : ಸಾಮಾಜಿಕ ಜಾಲತಾಣದಲ್ಲಿ ಧರ್ಮನಿಂದನೆ ಪೋಸ್ಟ್ ಹಾಕಿದ ಪ್ರಕರಣದ ಆರೋಪಿ ಸತೀಶ್ (46)ಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಸಿವಿಲ್ ನ್ಯಾಯಾಲಯವು ಸೋಮವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ಜಾಮೀನು ನೀಡುವ ಬಗ್ಗೆ ಶನಿವಾರ ನಡೆದ ವಿಚಾರಣೆಯಲ್ಲಿ ಸರಕಾರಿ ಅಭಿಯೋಜಕಿ ಸವಿತಾ ಅವರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ಆರೋಪಿ ಪರ ವಕೀಲ ಅ.ಮಾ.ಭಾಸ್ಕರ್ ವಾದ ಮಂಡಿಸಿ ಜಾಮೀನು ನೀಡಬೇಕು ಎಂದು ಒತ್ತಾಯಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಷರತ್ತು ಬದ್ದ ಜಾಮೀನು ಮಂಜೂರು ಮಾಡಿ ಆದೇಶಿಸಿದರು.
ಇದೇ ಪ್ರಕರಣದ ವಿಚಾರದಲ್ಲಿ ಉದ್ರಿಕ್ತಗೊಂಡ ಯುವಕರ ಗುಂಪು ಉದಯಗಿರಿ ಠಾಣೆಗೆ ಕಲ್ಲು ತೂರಾಟ ನಡೆಸಿತ್ತು. ಈ ಬಗ್ಗೆ ಪೊಲೀಸರು ಒಂದು ಸಾವಿರ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, 16 ಮಂದಿಯನ್ನು ಬಂಧಿಸಿದ್ದಾರೆ.