×
Ad

ಮೈಸೂರು ಅರಮನೆ ಆವರಣದಲ್ಲಿ ಮಾಕ್ ಡ್ರಿಲ್ | ನಾಗರಿಕರ ರಕ್ಷಣೆ ಕುರಿತು ಅಣಕು ಪ್ರದರ್ಶನ

Update: 2025-05-10 23:52 IST

ಮೈಸೂರು : ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ನೆರೆಯ ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ ನಡೆಸುತ್ತಿರುವ ಬೆನ್ನಲ್ಲೆ ನಾಗರಿಕರ ರಕ್ಷಣಾ ಕಾರ್ಯವನ್ನು ಕೈಗೊಳ್ಳುವ ಕುರಿತು ಅಣಕು (ಮಾಕ್ ಡ್ರಿಲ್) ಪ್ರದರ್ಶನ ನಡೆಸಲಾಯಿತು.

ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ದೇಶದಲ್ಲಿ ಭದ್ರತೆ ದೃಷ್ಟಿಯಿಂದ ಕೈಗೊಳ್ಳಲಾಗುತ್ತಿರುವ ಕ್ರಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ನಗರದ ಅರಮನೆ ಆವರಣದಲ್ಲಿ ಶನಿವಾರ ಸಿಐಎಸ್ ಎಫ್ ಕಮಾಂಡೋ, ಪೊಲೀಸ್ ಇಲಾಖೆ ಸಿಬ್ಬಂದಿ ಮಾಕ್ ಡ್ರಿಲ್ ನಡೆಸಿ ಸಾರ್ವಜನಿಕರ ರಕ್ಷಣೆಗೆ ನಾವಿದ್ದೇವೆ ಎಂಬ ಸಂದೇಶ ನೀಡಿದರು.

ಪೊಲೀಸ್ ಇಲಾಖೆ, ಸಿಐಎಸ್‌ಎಫ್, ಹೋಂ ಗಾರ್ಡ್, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಫೊರೆನ್ಸಿಕ್ ತಂಡ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭಾಗವಹಿಸಿ ನಾಗರಿಕರ ರಕ್ಷಣಾ ಕಾರ್ಯದ ಅಣಕು ಪ್ರದರ್ಶನ ನಡೆಸಿದರು.

300 ಕ್ಕೂ ಹೆಚ್ಚು ಪೊಲೀಸರು ಸಿಬ್ಬಂದಿ, 70ಕ್ಕೂ ಹೆಚ್ಚು ಸಿ.ಐ.ಎಸ್.ಎಫ್ ತಂಡ, ಆರೋಗ್ಯ ಇಲಾಖೆ, ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್, ನಗರಪಾಲಿಕೆ, ಅಗ್ನಿಶಾಮಕ, ಕಂದಾಯ ಇಲಾಖೆಗಳ ಸಹೋಗದೊಂದಿಗೆ ಈ ಅಣಕು ಪ್ರದರ್ಶನ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಎಡಿಸಿ ಡಾ.ಪಿ.ಶಿವರಾಜು, ನಗರ ಪೊಲೀಸ್ ಅಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿಸಿಪಿಗಳಾದ ಮುತ್ತುರಾಜ್, ಸುಂದರ್‌ರಾಜ್, ಎಸಿಪಿಗಳಾದ ಶಿವಶಂಕರ್, ರಾಜೇಂದ್ರ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಕೆ.ಆರ್.ಆಸ್ಪತ್ರೆ ಸ್ಥಾನಿಕ ವೈದ್ಯಾಧಿಕಾರಿ ಡಾ.ನಯಾಝ್ ಅಹ್ಮದ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಡಾ.ಪುಟ್ಟತಾಯಮ್ಮ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು.

ಕೇಂದ್ರ ಗೃಹ ಇಲಾಖೆ ಮತ್ತು ರಾಜ್ಯ ಸರಕಾರದ ಸೂಚನೆ ಮೇರೆಗೆ ಮಾಕ್ ಡ್ರಿಲ್ ಮಾಡಲಾಗಿದ್ದು, ಎದುರಾಳಿಗಳಿಂದ ಯಾವುದಾದರೂ ರೀತಿಯ ಅವಘಡ ಸಂಭವಿಸಿದರೆ ಯಾವ ರೀತಿ ಕಾರ್ಯೋನ್ಮುಖರಾಗಬೇಕು ಮತ್ತು ನಾಗರಿಕರ ರಕ್ಷಣೆ ಯಾವ ರೀತಿ ಮಾಡಲಾಗುವುದು ಎಂದು ಎಲ್ಲ ಇಲಾಖೆಗಳನ್ನೊಳಗೊಂಡು ಅಣಕು ಪ್ರದರ್ಶನ ಮಾಡಲಾಗಿದೆ.

- ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾಧಿಕಾರಿ, ಮೈಸೂರು

ಜನನಿಬಿಡ ಸ್ಥಳಗಳಲ್ಲಿ ಯಾವುದಾದರು ಅವಘಡ ಸಂಭವಿಸಿದರೆ ಪೊಲೀಸರು ಯಾವ ರೀತಿ ಕರ್ತವ್ಯ ನಿರ್ವಹಿಸಲಿದ್ದಾರೆ ಮತ್ತು ನಾಗರಿಕರ ರಕ್ಷಣೆ ಕುರಿತು ಮಾಕ್ ಡ್ರಿಲ್ ನಡೆಸಿ ಸಾರ್ವಜನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ.

- ಸೀಮಾ ಲಾಟ್ಕರ್, ಮೈಸೂರು ನಗರ ಪೊಲೀಸ್ ಆಯುಕ್ತೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News