ಮೈಸೂರು ವಿವಿ ಆವರಣದಲ್ಲಿ ಅಂಬೇಡ್ಕರ್ ಪೋಸ್ಟರ್ ತೆರವುಗೊಳಿಸಿದ ಇಬ್ಬರು ಅಧಿಕಾರಿಗಳ ಪದಚ್ಯುತಿ
ಮೈಸೂರು : ಡಾ.ಬಿ.ಆರ್. ಅಂಬೇಡ್ಕರ್ ಪೋಸ್ಟರ್ ತೆರವುಗೊಳಿಸಿದ ಮೈಸೂರು ವಿವಿಯ ಇಬ್ಬರು ಅಧಿಕಾರಿಗಳನ್ನು ಪದಚ್ಯುತಿಗೊಳಿಸಲಾಗಿದ್ದು, ಪ್ರಕರಣ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಾನಸಗಂಗೋತ್ರಿ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ 134ನೇ ಜನ್ಮದಿನಾಚರಣೆ ಅಂಗವಾಗಿ ಹಾಕಲಾಗಿದ್ದ ಪೋಸ್ಟರ್ ಅನ್ನು ಏಕಾಏಕಿ ತೆರವುಗೊಳಿಸಲಾಗಿತ್ತು. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನದಿಂದ ಪ್ರತಿಭಟನೆ ನಡೆಸಿದ್ದರು. ಪೋಸ್ಟರ್ ತೆರವುಗೊಳಿಸಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಡರಾತ್ರಿಯವರೆಗೂ ಪ್ರತಿಭಟನೆ ಮುಂದುವರಿಸಿದ್ದರು.
ಮೈಸೂರು ವಿವಿ ಸಂಶೋಧಕರ ಸಂಘ ಮತ್ತು ದಲಿತ ವಿದ್ಯಾರ್ಥಿ ಒಕ್ಕೂಟಗಳ ಸಹಯೋಗದಲ್ಲಿ ವಿದ್ಯಾರ್ಥಿಗಳು ಗುರುವಾರ ಮತ್ತೆ ಪ್ರತಿಭಟನೆ ಆರಂಭಿಸಿ ಪೋಸ್ಟರ್ ತೆರವುಗೊಳಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕಾಗಮಿಸಿದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮತ್ತು ಕುಲಸಚಿವೆ ಎಂ.ಕೆ. ಸವಿತಾ ಅವರು ಪ್ರತಿಭಟನಾಕಾರರ ಸಮಸ್ಯೆಯನ್ನು ಆಲಿಸಿದರು. ಈ ವೇಳೆ ವಿದ್ಯಾರ್ಥಿಗಳು, ವಿಶ್ವವಿದ್ಯಾನಿಲಯದ ಅಧಿಕಾರಿಗಳು ದಲಿತ ವಿರೋಧಿ ಮನಸ್ಥಿತಿ ಹಾಗೂ ಅಂಬೇಡ್ಕರ್ ವಿರೋಧಿ ಮನಸ್ಥಿತಿಗಳನ್ನು ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೋಸ್ಟರ್ ತೆರವು ಮಾಡಿದವರನ್ನು ಅಮಾನತು ಮಾಡುವ ತನಕ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಬಳಿಕ ಮಾತನಾಡಿದ ಕುಲಪತಿ, ಪೋಸ್ಟರ್ ತೆರವಿಗೆ ಸೂಚನೆ ನೀಡಿದ ಮಾನಸಗಂಗೋತ್ರಿ ಆಡಳಿತ ಅಧಿಕಾರಿ ಎಸ್.ಟಿ. ರಾಮಚಂದ್ರ ಮತ್ತು ಭದ್ರತಾ ಅಧಿಕಾರಿ ಕುಮಾರ್ ಅವರನ್ನು ಪದಚ್ಯುತಿಗೊಳಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಿ ವರದಿ ಬಂದ ಬಳಿಕ ಅಮಾನತು ಮಾಡುವುದಾಗಿ ತಿಳಿಸಿದರು.
ಮಾನಸಗಂಗೋತ್ರಿ ಆವರಣದಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ, ಸಂಶೋಧಕರ ಸಂಘದಿಂದ ಹಾಕಲಾಗಿದ್ದ ನಾಮ ಫಲಕಗಳನ್ನು ಶೀಘ್ರ ಮರು ಅಳವಡಿಸುವುದಾಗಿ ಹೇಳಿದರು. ಅನಂತರವೂ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು.
ಈ ಸಂದರ್ಭದಲ್ಲಿ ಸಂಶೋಧಕರ ಸಂಘದ ಅಧ್ಯಕ್ಷ ಶಿವಶಂಕರ್, ವರಹಳ್ಳಿ ಆನಂದ್, ಪ್ರದೀಪ್ ಮುಮ್ಮಡಿ, ಕಲ್ಲಹಳ್ಳಿ ಕುಮಾರ್, ಶೇಷಣ್ಣ ಸ್ವಾಮಿ, ನಿಂಗರಾಜು, ಮರಳ್ಳಿ ಮಹೇಶ್, ದಲಿತ ವಿದ್ಯಾರ್ಥಿ ಒಕ್ಕೂಟದ ಗೌತಮ್, ರೋಹನ್, ಧೀರಜ್, ಪರಂಜ್ಯೋತಿ ಮತ್ತಿತರು ಇದ್ದರು.