×
Ad

ದಶಕಗಳ ಅನ್ಯಾಯದ ವಿರುದ್ಧದ ಹೋರಾಟದ ಧ್ವನಿಗೆ ಪ್ರಶಸ್ತಿ ಸಿಕ್ಕಿದೆ : ಪ್ರಕಾಶ್ ರಾಜ್‌

Update: 2025-07-04 23:59 IST

ಮೈಸೂರು : ಅಭಿರುಚಿ ಪ್ರಕಾಶನದ 30ನೇ ವರ್ಷದ ಸಂಭ್ರಮದಲ್ಲಿ ಬೂಕರ್ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರನ್ನು ಸನ್ಮಾನಿಸಲಾಯಿತು.

ಜಯಲಕ್ಷ್ಮೀಪುರಂನಲ್ಲಿರುವ ಕೊಡವ ಸಹಕಾರ ಸಂಘದ ಭವನದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದಿಸಲಾಯಿತು.

ನಟ ಪ್ರಕಾಶ್ ರಾಜ್‌ ಸಮಾರಂಭ ಉದ್ಘಾಟಿಸಿ ಮಾತನಾಡಿ, ಈ ದಿನದ ಸಂಜೆಯ ಹಣತೆ ಬಾನು ಮುಷ್ತಾಕ್. ಅಭಿರುಚಿ ಪ್ರಕಾಶನದ ಮೂರು ದಶಕಗಳ ಕಾಲ ಉತ್ತಮ ಅಭಿರುಚಿ ಬೆಳೆಸಿದೆ. ಇಲ್ಲಿ ಬಾನು ಮುಷ್ತಾಕ್ ಅವರ ಪ್ರತಿರೋಧದ ಧ್ವನಿಯ ಬಗ್ಗೆ ಮಾತಾಡಬೇಕಿದೆ. 4 ದಶಕಗಳ ಪ್ರತಿರೋಧದ ದನಿಗೆ ಬೂಕರ್ ಪ್ರಶಸ್ತಿ ಬಂದಿತು. ಬಾನು ಮುಷ್ತಾಕ್ ಅವರ ಪ್ರತಿರೋಧದ ದನಿ ನಿರಂತರ ಸ್ಪೂರ್ತಿಯಾಗಿದೆ. ದಶಕಗಳ ಅನ್ಯಾಯದ ವಿರುದ್ಧದ ಹೋರಾಟದ ದನಿಗೆ ಪ್ರಶಸ್ತಿ ಸಿಕ್ಕಿತು ಎಂದರು.

ದೇವನಹಳ್ಳಿ ಹೋರಾಟದ ಕುರಿತು ದಿಲ್ಲಿಯಲ್ಲಿ ಸಣ್ಣ ವಿಷಯವನ್ನು ಯಾಕೆ ದೇಶದ ದೊಡ್ಡ ಸಂಗತಿಯನ್ನಾಗಿ ಬಿಂಬಿಸುತ್ತಿದ್ದೀರಿ? ಎಂದು ಒಬ್ಬರು ಪ್ರಶ್ನಿಸಿದರು. ಆಗ ಬಾನು ಮುಷ್ತಾಕ್ ಅವರು ನನಗೆ ನೆನಪಿಗೆ ಬಂದರು. ಯಾವ ಕತೆಯೂ ಸಣ್ಣದಲ್ಲ. ನನ್ನದಲ್ಲ, ನಮ್ಮದಲ್ಲದ ನೋವಿಗೆ ಸ್ಪಂದಿಸುವ ಬಾನು ಮುಷ್ತಾಕ್ ಅವರಿಗೆ ಪ್ರಶಸ್ತಿ ಬಂದಿತು ಎಂದರು.

ಬಾನು ಮುಷ್ತಾಕ್ ಅವರ ಎದೆಯ ಹಣತೆ 3ನೇ ಮುದ್ರಣ, ಹಸೀನಾ ಮತ್ತು ಇತರ ಕಥೆಗಳು ನಾಲ್ಕನೇ ಮುದ್ರಣ, ಪ್ರೊ.ಪಿ.ವಿ.ನಂಜೇರಾಜ ಅರಸ್ ಅವರ ಇತಿಹಾಸ ಸೃಷ್ಟಿಸಿದ ಹದಿನಾರು, ಟಿಪ್ಪು ಮಾನ್ಯತೆ ಸಿಗದ ಸುಲ್ತಾನ್: ಅಂದು ಇಂದು ಎರಡನೇ ಮುದ್ರಣ ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಕನ್ನಡ ಪ್ರಾಧ್ಯಾಪಕಿ ಡಾ.ಲತಾ ಮೈಸೂರು ಬೂಕರ್ ಪ್ರಶಸ್ತಿ ವಿಜೇತರ ಕುರಿತು ಮಾತನಾಡಿದರು. ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶ್ ಕುಮಾರ್, ಲೇಖಕ ಪ್ರೊ.ಪಿ.ವಿ.ನಂಜೇರಾಜ ಅರಸು, ಹಿರಿಯ ಪ್ರಕಾಶಕ ಪ್ರೊ.ಬಿ.ಎನ್.ಶ್ರೀರಾಮ ಹಾಜರಿದ್ದರು. ಅಭಿರುಚಿ ಗಣೇಶ್ ಸ್ವಾಗತಿಸಿ ನಿರೂಪಿಸಿದರು. ಸುಮಾ ಆರ್ ಇದ್ದರು. ನಿರಂತರ ರಂಗ ತಂಡದ ಕಲಾವಿದರು ಪ್ರಾರ್ಥಿಸಿದರು.

ಯುದ್ಧಗಳು ಕೊನೆಗೊಳ್ಳಲಿ: ಬಾನು ಮುಷ್ತಾಕ್

ಆಧುನಿಕ ಯುಗದಲ್ಲಿ ಯುದ್ಧಗಳು ಕೊನೆಗೊಂಡು ಶಾಂತಿ ನೆಲೆಸಬೇಕು. ಮಾನವೀಯತೆ ಮೆರೆಯಬೇಕು. ಪೈಶಾಚಿಕ ಕೃತ್ಯಗಳು ಕೊನೆಗೊಂಡು ಅಸಮಾನತೆ ನಿಲ್ಲಬೇಕು ಎಂದು ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಹೇಳಿದ್ದಾರೆ.

ಫೆಲೆಸ್ತೀನ್-ಇಸ್ರೇಲ್ ನುಡುವಿನ ಯುದ್ಧಗಳು ಆಘಾತಕಾರಿಯಾಗಿವೆ. ಇದು ಕೊನೆಗಾಣಬೇಕು. ಅಲ್ಲಿನ ಯುದ್ಧಗಳು ಮಾನಹಾನಿಕರವಾಗಿವೆ. ಅಲ್ಲಿನ ಮಕ್ಕಳು ಮಾನಹಾನಿಗೆ ಒಳಗಾಗಿ ಅಂಗವಿಕಲರಾಗುತ್ತಿದ್ದಾರೆ ಎಂದು ನೋವು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News