ʼಧರ್ಮಸ್ಥಳ ಪ್ರಕರಣʼ ತನಿಖೆಯನ್ನು ಎನ್.ಐ.ಎಗೆ ವಹಿಸುವ ಅಗತ್ಯವಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಮೈಸೂರು, ಆ.25 : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಸಮರ್ಪಕವಾಗಿ ತನಿಖೆ ನಡೆಸುತ್ತಿದೆ. ಅವರನ್ನು ಹೀಗೆ ಮಾಡಿ ಎಂದು ಹೇಳಲು ಸಾಧ್ಯವಿಲ್ಲ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ಅವಶ್ಯಕತೆ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಸ್.ಐ.ಟಿ ವರದಿಗೂ ಮುನ್ನ ಬಿಜೆಪಿಯವರು ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ. ಎಸ್.ಐ.ಟಿ ಅಧಿಕಾರಿಗಳು ತನ್ನ ಕೆಲಸವನ್ನು ಪ್ರಮಾಣಿಕವಾಗಿ ಹಾಗೂ ಸಮರ್ಥವಾಗಿ ಮಾಡುತ್ತಿದ್ದಾರೆ. ಮಂಪರು ಪರೀಕ್ಷೆ ಮಾಡಬೇಕೋ ಬೇಡವೊ ಎಂಬುದನ್ನು ನಾನು ನಿರ್ಧಾರ ಮಾಡಲು ಸಾಧ್ಯವಿಲ್ಲ. ಎಸ್.ಐ.ಟಿ ವರದಿ ಆದಷ್ಟು ಬೇಗ ಮುಗಿಸುವಂತೆ ಹೇಳಿದ್ದೇನೆ. ವರದಿ ಬಂದ ನಂತರ ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಹೇಳಿದರು.
ಧರ್ಮಸ್ಥಳ ರ್ಯಾಲಿ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರಲ್ಲಾ ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದಾರೆ. ಹೋಗಲಿ, ಅವರನ್ನು ತಡೆಯಲು ಸಾಧ್ಯವೇ? ಈ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
ʼದಸರಾʼ ಧಾರ್ಮಿಕ ಆಚರಣೆ ಎಂದು ನೋಡಬಾರದು :
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನದ ಬಗ್ಗೆ ಬಿಜೆಪಿ ಅಪಸ್ವರ ಎತ್ತುತ್ತಿರುವುದು ಸರಿಯಲ್ಲ, ಈ ಹಿಂದೆ ನಿಸಾರ್ ಅಹ್ಮದ್ ಉದ್ಘಾಟನೆ ಮಾಡಿಲ್ಲವೇ? ದಸರಾ ನಾಡಹಬ್ಬ, ಇದನ್ನು ಧಾರ್ಮಿಕ ಆಚರಣೆ ಎಂದು ನೋಡಬಾರದು. ಬಾನು ಮುಷ್ತಾಕ್ ಅವರಿಗೆ ಚಾಮುಂಡೇಶ್ವರಿ ಮೇಲೆ ನಂಬಿಕೆ ಇದಿಯೋ ಇಲ್ಲವೊ ಆದರೆ ಇದು ನಾಡಹಬ್ಬ. ಹಾಗಾಗಿ ಎಲ್ಲರೂ ಸೇರಿ ಆಚರಣೆ ಮಾಡಬೇಕು ಎಂದು ಹೇಳಿದರು.