×
Ad

ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನೆಲುಬು : ಕೆ.ವಿ.ಪ್ರಭಾಕರ್

Update: 2025-08-28 23:09 IST

ಕೆ.ವಿ.ಪ್ರಭಾಕರ್

ಮೈಸೂರು, ಆ.28: ಪತ್ರಿಕಾ ವಿತರಕರು ಪತ್ರಿಕೆಗಳನ್ನು ವಿತರಿಸುವ ಜೊತೆಗೆ ಚಂದಾ ಹಣ ಸಂಗ್ರಹಿಸುವ ಕೆಲಸವನ್ನೂ ಮಾಡುತ್ತಾ ತಮ್ಮ ಆದಾಯದ ಜೊತೆಗೆ ಸಂಸ್ಥೆಗೂ ಆದಾಯ ತಂದುಕೊಡುವ ಮೂಲಕ ರಾಜ್ಯದ ಆರ್ಥಿಕತೆಯಲ್ಲೂ ತೊಡಗಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿಯ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಹೇಳಿದ್ದಾರೆ.

ವಿಶ್ವ ಪತ್ರಿಕಾ ವಿತರಕರ ದಿನದ ಅಂಗವಾಗಿ ಕೆ.ಎಸ್.ಒ.ಯು ಘಟಿಕೋತ್ಸವ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕೊಳಚೆ ಪ್ರದೇಶಗಳಿಂದ ವಿಧಾನಸೌಧದವರೆಗೂ ವ್ಯಾಪಿಸಿರುವ ಪತ್ರಿಕಾ ವಿತರಕರು ಮುದ್ರಣ ಮಾಧ್ಯಮದ ಬೆನ್ನೆಲುಬು ಮತ್ತು ಪತ್ರಿಕಾ ಸಂಸ್ಥೆಗಳ ನರಮಂಡಲ ಆಗಿ ಕೆಲಸ ಮಾಡುತ್ತಾರೆ. ಪತ್ರಿಕೆಯ ಚಂದಾ ಹಣ ಸಂಗ್ರಹಿಸುವ ಜೊತೆಗೆ ಸಣ್ಣ ಜಾಹೀರಾತುದಾರರನ್ನೂ ಸಂಸ್ಥೆಯ ಜೊತೆ ಬೆಸೆಯುತ್ತಾರೆ (ಪತ್ರಿಕೆಗಳ ಒಳಗೆ ಜಾಹೀರಾತು ಕರಪತ್ರ ಹಾಕುವ) ಎಂದರು.

ಸುದ್ದಿಗಳು, ಪತ್ರಿಕೆಗಳು ಹಳತಾಗುವ ಮೊದಲು, ಓದುಗರ ಕೈಗೆ ಕಾಫಿ ಲೋಟ ಬರುವ ಮೊದಲು ಪತ್ರಿಕಾ ವಿತರಕರು ಓದುಗರ ಮನೆ ಬಾಗಿಲಿಗೆ ತಲುಪುತ್ತಾರೆ. ಇದಕ್ಕಾಗಿ ಕೋಳಿ ಕೂಗುವ ಮೊದಲೇ ಮನೆಯಿಂದ ಎದ್ದು ಹೊರಡುತ್ತಾರೆ. ಮಳೆ, ಚಳಿ ಮತ್ತು ಪ್ರತೀಕೂಲ ವಾತಾವರಣ ಲೆಕ್ಕಿಸದೆ ಸೈಕಲ್ ತುಳಿಯಬೇಕಿದೆ ಎಂದರು.

ಒಬ್ಬ ಪತ್ರಿಕಾ ವಿತರಕನಿಗೆ ತಿಂಗಳಿಗೆ ಸಿಗುವುದು ಕೆಲವೇ ಸಾವಿರ ರೂಪಾಯಿ ಇರಬಹುದು. ಆದರೆ, ಸಾವಿರಾರು ಪತ್ರಿಕಾ ವಿತರಕರು ಸಂಗ್ರಹಿಸುವ ಚಂದಾ ಹಣ ಮತ್ತು ಸಣ್ಣ ಪ್ರಮಾಣದ ಜಾಹಿರಾತು ಹಣ ಎಲ್ಲ ಒಟ್ಟು ಲೆಕ್ಕ ಹಾಕಿದರೆ ಹತ್ತಾರು ಕೋಟಿ ರೂ. ಆಗುತ್ತದೆ. ಹೀಗಾಗಿ ಪತ್ರಿಕೋದ್ಯಮದ ಮತ್ತು ರಾಜ್ಯದ ಆರ್ಥಿಕ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿರುವ ಸಮುದಾಯ ಪತ್ರಿಕಾ ವಿತರಕರು ಎನ್ನುವುದನ್ನು ನಾವು ಮರೆಯಬಾರದು ಎಂದು ಹೇಳಿದರು.

ಪತ್ರಿಕಾ ವಿತರಕರಿಗೆ ಸರಕಾರದ ಸವಲತ್ತುಗಳು ಸಿಗಬೇಕು ಎನ್ನುವುದು ಒಂದು ಕಡೆ ಇರಲಿ. ಜೊತೆಗೆ ಪತ್ರಿಕಾ ಸಂಸ್ಥೆಗಳೂ, ಇನ್ನಿತರ ಉದ್ಯಮಿಗಳ ನಿಧಿಯಿಂದ ಈ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಅವಕಾಶಗಳೂ ಇವೆ. ಈ ದಿಕ್ಕಿನಲ್ಲೂ ಗಮನ ಹರಿಸುವ ಅಗತ್ಯವಿದೆ ಎಂದು ಕೆ.ವಿ.ಪ್ರಭಾಕರ್ ಹೇಳಿದರು.

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ವೇಳೆ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಶಾಸಕ ಟಿ.ಎಸ್.ಶ್ರೀವತ್ಸ, ಪತ್ರಿಕಾ ವಿತರಕರ ಮಹಾ ಸಂಘದ ಅಧ್ಯಕ್ಷ ಶಂಭುಲಿಂಗ, ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್, ಹಿರಿಯ ಪತ್ರಕರ್ತರಾದ ಅಂಶಿಪ್ರಸನ್ನ ಕುಮಾರ್, ಸಿ.ಕೆ.ಮಹೇಂದ್ರ, ಎಸ್.ಟಿ.ರವಿಕುಮಾರ್, ಎಂ.ಸುಬ್ರಹ್ಮಣ್ಯ ಮುಂತಾದವರು ಉಪಸ್ಥಿತರಿದ್ದರು.

ಸಂಘಟನೆ ಮೊದಲ ಹೆಜ್ಜೆ. ಸಂಘಟನೆ ಬೆನ್ನ ಹಿಂದೆಯೆ ನಿಮ್ಮ ಹಕ್ಕುಗಳಿಗೂ ಜೀವ ಬರುತ್ತದೆ. ಬಳಿಕ ಸರಕಾರದ ಸವಲತ್ತುಗಳು ಒಂದೊಂದಾಗಿ ಜಾರಿಯಾಗುತ್ತದೆ. ಜೊತೆಗೆ ಕೆಲಸದ ಅಭದ್ರತೆಯೂ ಕಡಿಮೆ ಆಗುತ್ತದೆ. ವಿತರಕ ಸಮುದಾಯದ ಪರವಾಗಿ ಈ ಸಮ್ಮೇಳನದಲ್ಲಿ ಕೆಲವೊಂದು ಬೇಡಿಕೆಗಳನ್ನು ಇಡಲಾಗಿದೆ. ಅವೆಲ್ಲವನ್ನೂ ಪರಿಶೀಲಿಸಿ, ಹಂತ ಹಂತವಾಗಿ ಕ್ರಮ ಕೈಗೊಳ್ಳುವ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತೇನೆ.

-ಕೆ.ವಿ.ಪ್ರಭಾಕರ್, ಸಿಎಂ ಮಾಧ್ಯಮ ಸಲಹೆಗಾರ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News