ವರ್ತಮಾನಕ್ಕೆ ತಕ್ಕಂತೆ ಚಳವಳಿಯ ಸ್ವರೂಪ ಬದಲಾಗಬೇಕು : ದಿನೇಶ್ ಅಮಿನ್ ಮಟ್ಟು
ಮೈಸೂರು : ಈಗಿನ ದಿನಗಳಿಗೆ ಅನ್ವಯವಾಗುವಂತೆ ಚಳವಳಿಗಳ ಮಾದರಿಗಳನ್ನು ಬದಲಾವಣೆ ಮಾಡಿಕೊಂಡು ಹೋರಾಟಗಳನ್ನು ರೂಪಿಸಬೇಕಾದ ಅಗತ್ಯವಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ರಂಗಾಯಣದ ಬಿ.ವಿ.ಕಾರಂತ ರಂಗ ಚಾವಡಿಯಲ್ಲಿ ದೇಸಿ ರಂಗ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ರವಿವಾರ ಆಯೋಜಿಸಿದ್ದ ಪ್ರೊ.ಕೆ. ರಾಮದಾಸ್ ನೆನಪಿನಲ್ಲಿ- ಸಂವಾದ, ಪುಸ್ತಕ ಬಿಡುಗಡೆ, ಲೇಖನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಎಪ್ಪತ್ತು -ಎಂಭತ್ತರ ದಶಕದಲ್ಲಿದ್ದ ಚಳವಳಿಗಳ ಸ್ವರೂಪವೇ ಬೇರೆ. ಈಗಿನ ಸ್ವರೂಪವೇ ಬೇರೆ. ಆಗ ಕಲಿಯದವರು, ಅನಕ್ಷರಸ್ಥರು ಬಹಳ ಸಂಖ್ಯೆಯಲ್ಲಿ ಇದ್ದರು. ಅವರಿಗೆ ವಿಷಯದ ಕುರಿತು ತಿಳಿವಳಿಕೆ ನೀಡಿ, ಜಾಗೃತಿ ಮೂಡಿಸಿದರೇ ಸಾಕಾಗಿತ್ತು. ಅವರು ಪರಿಸ್ಥಿತಿಯನ್ನು ಅರಿತುಕೊಂಡು ಹೋರಾಟಗಳಲ್ಲಿ ಭಾಗವಹಿಸುತ್ತಿದ್ದರು. ಆದರೆ ಈಗ ಅಕ್ಷರ ಕಲಿತವರಿಗೆ ಮನದಟ್ಟು ಮಾಡಿಸುವುದು ಬಹಳ ಕಷ್ಟವಾಗಿದೆ. ಏಕೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಬರುವುದನ್ನೆಲ್ಲ ತಮ್ಮ ಮೆದುಳಿಗೆ ತುಂಬಿ ಕೊಂಡಿರುತ್ತಾರೆ. ಅದನ್ನು ಹೊರ ಹಾಕಿಸಿ ವಿಚಾರಗಳನ್ನು ಅಲ್ಲಿಗೆ ತುಂಬುವುದಕ್ಕೆ ಶ್ರಮ ಪಡಬೇಕಾಗಿದೆ. ಇವರಿಗಿಂತ ರೈತರು, ಹಳ್ಳಿಗಾಡಿನ ಜನರು ಎಲ್ಲವನ್ನು ತುಲನೆ ಮಾಡುವ ಶಕ್ತಿಯನ್ನು ಹೊಂದಿದ್ದಾರೆ. ಯಾವುದರ ದರ ಹೆಚ್ಚಾಗಿದೆ, ಮೊದಲು ಹೇಗಿತ್ತು. ನಾವು ಯಾರಿಗೆ ಮತ ಚಲಾಯಿಸಬೇಕು ಎನ್ನುವ ಪರಿಜ್ಞಾನ ಮತ್ತು ಅರಿವು ಅವರಿಗೆ ಇದೆ. ಹೀಗಾಗಿ ಈಗ ಚಳವಳಿಗಳನ್ನು ರೂಪಿಸುವವರು ಹಿಂದಿನ ಗತ ವೈಭವಗಳನ್ನು ನೆನಪು ಮಾಡಿಕೊಳ್ಳುತ್ತಾ ಹೊಸ ಮಾದರಿಗಳನ್ನು ಹುಟ್ಟುಹಾಕಬೇಕು ಎಂದರು.
ದೇಶದಲ್ಲಿ ಮೇಲು ಮಧ್ಯಮ ವರ್ಗದ ಜನರು ಹೆಚ್ಚಾಗಿದ್ದಾರೆ. ಇವರು ಸಾಮಾಜಿಕ ಚಿಂತನೆಗಳಿಂದ ಯಾವಾಗಲೂ ದೂರವಿರುತ್ತಾರೆ. ತಾವಾಯಿತು ತಮ್ಮ ಕುಟುಂಬವಾಯಿತು. ಮಕ್ಕಳು ಹುಟ್ಟಿದ ತಕ್ಷಣವೇ ಅವರನ್ನು ಇಂಜಿನಿಯರ್ ಮಾಡಬೇಕೋ, ಡಾಕ್ಟರ್ ಮಾಡಬೇಕೋ ಎನ್ನುವುದನ್ನು ಆಗಲೇ ನಿರ್ಧಾರ ಮಾಡಿ ಬಿಡುತ್ತಾರೆ. ಆ ಮಗು ಬೇರೆ ಯಾವುದು ಲಲಿತಕಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುವುದಿಲ್ಲ. ಕೇವಲ ಸಿಇಟಿಯತ್ತ ಮಾತ್ರ ಲಕ್ಷ್ಯ ವಹಿಸುವಂತೆ ನೋಡಿಕೊಳ್ಳುತ್ತಾರೆ. ಇಂತಹ ವರ್ಗವನ್ನು ಚಳವಳಿಯತ್ತ ಹೇಗೆ ಸೆಳೆಯಬೇಕು ಎನ್ನುವ ಸವಾಲು ಹೋರಾಟಗಾರರ ಮುಂದೆ ಇದೆ ಎಂದರು.
ಹಿರಿಯ ರಂಗ ಕರ್ಮಿ ಪ್ರಸನ್ನ ಅಧ್ಯಕ್ಷತೆ ವಹಿಸಿದ್ದರು. ಆರ್.ಪಿ. ವೆಂಕಟೇಶ ಮೂರ್ತಿ ಪುಸ್ತಕ ಬಿಡುಗಡೆಗೊಳಿಸಿದರು. ಚಿಂತಕ ನಾ.ದಿವಾಕರ್ ಪುಸ್ತಕದ ಕುರಿತು ಮಾತನಾಡಿದರು. ರುದ್ರಪ್ಪ ಅನಗವಾಡಿ ಲೇಖನ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಕೃತಿ ಸುಬ್ರಹ್ಮಣ್ಯ, ಕೃಷ್ಣ ಜನಮನ, ಡಾ.ದಿನಮಣಿ ಮತ್ತಿತರರು ಹಾಜರಿದ್ದರು.
ಪ್ರೊ.ಕೆ.ರಾಮದಾಸ್ ಅವರು ಹೋರಾಟಗಾರರಾಗಿದ್ದರು. ಚಳವಳಿಗಳನ್ನು ರೂಪಿಸುತ್ತಿದ್ದರು. ಆದರೆ ಅವರು ಸರ್ವಾಧಿಕಾರಿ ಧೋರಣೆಯನ್ನು ತೋರಿಸಲಿಲ್ಲ. ಬದಲಾಗಿ ಹೋರಾಟದಲ್ಲಿ ಭಾಗಿಯಾಗುವ ಕಾಲಾಳು ಎಂದುಕೊಂಡು ಕೆಲಸವನ್ನು ಮಾಡುತ್ತಿದ್ದರು. ಅವರು ಹೋರಾಟಗಾರರ ನಡುವೆ ಇದ್ದ ಪರಸ್ಪರ ಮುನಿಸುಗಳನ್ನು ನಿವಾರಣೆ ಮಾಡಿಸಿ ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ಗುಣವನ್ನು ಬೆಳೆಸಿಕೊಂಡಿದ್ದರು.
-ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತ