ಭಾರತ-ಬಾಂಗ್ಲಾದೇಶ ನೀರು ಹಂಚಿಕೆ ಕುರಿತು ಮಾತುಕತೆ ಏಕಪಕ್ಷೀಯ : ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ | PTI
ಹೊಸದಿಲ್ಲಿ : ಭಾರತ ಹಾಗೂ ಬಾಗ್ಲಾದೇಶದ ನಡುವಿನ ನೀರು ಹಂಚಿಕೆಯ ಕುರಿತ ಮಾತುಕತೆಗೆ ಆಕ್ಷೇಪ ವ್ಯಕ್ತಪಡಿಸಿ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರಕಾರದೊಂದಿಗೆ ಸಮಾಲೋಚಿಸದ ಹಾಗೂ ಅಭಿಪ್ರಾಯ ಪಡೆಯದ ಇಂತಹ ಏಕಪಕ್ಷೀಯ ಚರ್ಚೆ ಸ್ವೀಕಾರಾರ್ಹವೂ ಅಲ್ಲ, ಅಪೇಕ್ಷಣೀಯವೂ ಅಲ್ಲ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಚಾರಿತ್ರಿಕ ಮೂರನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶದ ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರು ದಿಲ್ಲಿಗೆ ಭೇಟಿ ನೀಡಿದ ಸಂದರ್ಭ ಗಂಗಾ ಹಾಗೂ ತೀಸ್ತಾ ನದಿ ನೀರಿನ ಹಂಚಿಕೆಯ ಕುರಿತು ಚರ್ಚೆ ನಡೆದಿತ್ತು.
‘‘2026ರಲ್ಲಿ ಮುಕ್ತಾಯಗೊಳ್ಳುವ ಭಾರತ-ಬಾಂಗ್ಲಾಗೇಶ ಫರಕ್ಕಾ ಒಪ್ಪಂದ (1996)ವನ್ನು ನವೀಕರಿಸುವ ಪ್ರಕ್ರಿಯೆಯಲ್ಲಿ ಭಾರತ ಸರಕಾರ ತೊಡಗಿರುವುದನ್ನು ನಾನು ತಿಳಿದುಕೊಂಡೆ. ಇದು ಭಾರತ ಹಾಗೂ ಬಾಂಗ್ಲಾದೇಶದ ನಡುವೆ ನೀರು ಹಂಚಿಕೆಯನ್ನು ವಿವರಿಸುವ ಒಪ್ಪಂದವಾಗಿದೆ. ಇದರಿಂದ ನೀವು ತಿಳಿದಿರುವಂತೆ ಪಶ್ಚಿಮಬಂಗಾಳದ ಜನರ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ’’ ಎಂದು ಮಮತಾ ಬ್ಯಾನರ್ಜಿ ಬರೆದಿದ್ದಾರೆ.
ಪಶ್ಚಿಮಬಂಗಾಳದ ಜನರು ಅಂತಹ ಒಪ್ಪಂದಗಳಿಂದ ತೀವ್ರ ತೊಂದರೆಗೀಡಾಗಲಿದ್ದಾರೆ ಎಂದು ಅವರು ಹೇಳಿದ್ದಾರೆ. ‘‘ಈ ಹಿಂದೆ ಹಲವು ವಿಷಯಗಳಲ್ಲಿ ಪಶ್ಚಿಮಬಂಗಾಳ ಬಾಂಗ್ಲಾದೇಶದೊಂದಿಗೆ ಸಹಕರಿಸಿದೆ’’ ಎಂದು ಭಾರತ-ಬಾಂಗ್ಲಾದೇಶ ನಡುಗಡ್ಡೆಗಳ ವಿನಿಮಯ, ಭಾರತ-ಬಾಂಗ್ಲಾದೇಶ ರೈಲ್ವೆ ಲೈನ್ ಹಾಗೂ ಬಸ್ ಸೇವೆಯನ್ನು ಉಲ್ಲೇಖಿಸಿ ಅವರು ಹೇಳಿದರು.
ಆದರೂ ನೀರು ತುಂಬಾ ಅಮೂಲ್ಯವಾದುದು ಹಾಗೂ ಅದು ಜನರ ಜೀವನಾಡಿ. ಜನರ ಮೇಲೆ ಪ್ರತಿಕೂಲ ಹಾಗೂ ಗಂಭೀರ ಪರಿಣಾಮ ಬೀರುವ ಇಂತಹ ವಿಷಯಗಳಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು.