×
Ad

ತಮಿಳುನಾಡು ಕಳ್ಳಭಟ್ಟಿ ದುರಂತ | ಎಐಎಡಿಎಂಕೆಯಿಂದ ಉಪವಾಸ ಮುಷ್ಕರ ಆರಂಭ

Update: 2024-06-27 21:13 IST

PC : PTI 

ಚೆನ್ನೈ: ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿ ಎಐಎಡಿಎಂಕೆಯ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರು ಇಲ್ಲಿ ಗುರುವಾರ ತಮ್ಮ ಉಪವಾಸ ಮುಷ್ಕರ ಆರಂಭಿಸಿದ್ದಾರೆ.

ಕಲಾಪಗಳಿಗೆ ಅಡ್ಡಿ ಉಂಟು ಮಾಡಿದ ಹಿನ್ನೆಲೆಯಲ್ಲಿ ವಿಧಾನ ಸಭೆಯ ಕಲಾಪದಿಂದ ಅಮಾನತುಗೊಂಡಿರುವ ಎಐಎಡಿಎಂಕೆ ಶಾಸಕರು ಕಪ್ಪು ಅಂಗಿ ಧರಿಸಿ ಇಲ್ಲಿನ ರಾಜರತಿನಂ ಕ್ರೀಡಾಂಗಣದಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ತಮ್ಮ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಈ ಉಪವಾಸ ಮುಷ್ಕರವನ್ನು ಕಲ್ಲಕುರಿಚಿ ಕಳ್ಳಭಟ್ಟಿ ದುರಂತದ ಕುರಿತು ವಿಧಾನ ಸಭೆಯಲ್ಲಿ ಚರ್ಚಿಸಲು ಅನುಮತಿ ನಿರಾಕರಿಸಿರುವುದನ್ನು ಖಂಡಿಸಿ ಕೂಡ ನಡೆಸಲಾಗುತ್ತಿದೆ ಎಂದು ಎಐಎಡಿಎಂಕೆ ಹೇಳಿದೆ.

60ಕ್ಕೂ ಅಧಿಕ ಜನರು ಸಾವನ್ನಪ್ಪಿರುವುದಾಗಿ ವರದಿಯಾಗಿರುವ ಕಳ್ಳಭಟ್ಟಿ ದುರಂತದ ಕುರಿತಂತೆ ಪ್ರಾಮಾಣಿಕ ಚರ್ಚೆಯನ್ನು ನಿರಾಕರಿಸಲಾಗಿದೆ ಹಾಗೂ ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿ ಎಐಎಡಿಎಂಕೆಯ ಶಾಸಕರನ್ನು ಅಮಾನತು ಮಾಡಲಾಗಿದೆ ಎಂದು ಪಳನಿಸ್ವಾಮಿ ಬುಧವಾರ ಹೇಳಿದ್ದರು.

ಕಳ್ಳಭಟ್ಟಿ ದುರಂತದಲ್ಲಿ ಸಾವಿನ ಸಂಖ್ಯೆ 60 ದಾಟಿದರೂ ಮುಖ್ಯಮಂತ್ರಿ ಸ್ಟಾಲಿನ್ ಅವರು ಕಲ್ಲಕುರಿಚಿಗೆ ಯಾಕೆ ಭೇಟಿ ನೀಡಿಲ್ಲ ಎಂದು ಅವರು ಪ್ರಶ್ನಿಸಿದ್ದರು. ವಿಧಾನ ಸಭೆಯಲ್ಲಿ ಈ ವಿಷಯದ ಕುರಿತಂತೆ ಪ್ರಾಮಾಣಿಕ ಚರ್ಚೆಗೆ ಹಿಂಜರಿಯುತ್ತಿರುವ ಸ್ಟಾಲಿನ್ರನ್ನು ಅವರು ತರಾಟೆಗೆ ತೆಗೆದುಕೊಂಡಿದ್ದರು.

ಉಪವಾಸ ಮುಷ್ಕರ ನಡೆಸುತ್ತಿರುವ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಎಂಡಿಕೆಯ ಅಧ್ಯಕ್ಷೆ ಪ್ರೇಮಲತಾ ವಿಜಯಕಾಂತ್, ಸಿಬಿಐ ತನಿಖೆಗೆ ಆಗ್ರಹಿಸುತ್ತಿರುವ ಎಐಎಡಿಎಂಕೆಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ, ಮದ್ಯ ನಿಷೇದ ಹಾಗೂ ಅಬಕಾರಿ ಸಚಿವರಾಗಿರುವ ಎಸ್. ಮುತ್ತುಸ್ವಾಮಿ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ಎಐಎಡಿಎಂಕೆ ನಾಯಕರಿಗೆ ಭಾಷಣ ಮಾಡಲು ಪೊಲೀಸರು ಅನುಮತಿ ನೀಡಿಲ್ಲ. ಅಲ್ಲದೆ ಅವರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದರು ಹಾಗೂ ಅವರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಖಂಡಿಸಿದರು. ಸಿಬಿಐ ತನಿಖೆಯಿಂದ ಮಾತ್ರ ಕಳ್ಳಭಟ್ಟಿ ದುರಂತಕ್ಕೆ ಸಂಬಂಧಿಸಿದ ಸತ್ಯ ಹೊರಬರಲಿದೆ. ಎಐಎಡಿಎಂಕೆ ಹಾಗೂ ಡಿಎಂಡಿಕೆ ಈ ವಿಷಯಕ್ಕೆ ಸಂಬಂಧಿಸಿ ದೃಢ ನಿಲುವು ಹೊಂದಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News