ನೀಟ್ ವಿವಾದ | ಎನ್ ಟಿ ಎ ಗೆ ಸುಪ್ರೀಂಕೋರ್ಟ್ ನೋಟಿಸ್
ಸುಪ್ರೀಂಕೋರ್ಟ್ | PTI
ಹೊಸದಿಲ್ಲಿ : ವೈದ್ಯಕೀಯ ಕೋರ್ಸ್ ಗಳ ಪ್ರವೇಶಾತಿಗಾಗಿ ನೀಟ್-ಯುಜಿ 2024 ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿದೆಯೆಂಬ ಆರೋಪಗಳಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಗುರುವಾರ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ ಟಿ ಎ)ಗೆ ನೋಟಿಸ್ ಜಾರಿಗೊಳಿಸಿದೆ. ಓಎಂಆರ್ ಶೀಟ್ ಗಳ ಮೇಲಿನ ಅಂಕಗಳ ಏಣಿಕೆಯು ಅಸಮಂಜಸವಾಗಿದೆಯೆಂದು ಆರೋಪಿಸಿ ಪ್ರಮುಖ ಕಲಿಕಾ ಆ್ಯಪ್ ಅರ್ಜಿಯೊಂದನ್ನು ಸಲ್ಲಿಸಿತ್ತು.
ಈ ಬಗ್ಗೆ ಜುಲೈ 8ರೊಳಗೆ ಉತ್ತರಿಸುವಂತೆ ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಹಾಗೂ ಎಸ್ವಿ ಎನ್ ಭಟ್ಟಿ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠವು ಎನ್ ಟಿ ಎಗೆ ಸೂಚಿಸಿದೆ.
ಸ್ನಾತಕ ವೈದ್ಯಕೀಯ ಪರೀಕ್ಷೆಗೆ ಹಾಜರಾದ ಹಲವಾರು ನೀಟ್ ವಿದ್ಯಾರ್ಥಿಗಳು ಓಎಂಆರ್ ಶೀಟ್ ಗಳನ್ನು ಪಡೆದಿರಲಿಲ್ಲವೆಂದು ಕೂಡಾ ಕಲಿಕಾ ಆ್ಯಪ್ ಅರ್ಜಿಯಲ್ಲಿ ಆರೋಪಿಸಿದೆ.
ಓಎಂಆರ್ ಶೀಟ್ ಗಳಿಗೆ ಸಂಬಂಧಿಸಿ ಅಹವಾಲುಗಳನ್ನು ಸಲ್ಲಿಸಲು ನಿಗದಿಪಡಿಸಲಾದ ಕಾಲಮಿತಿಯೊಂದನ್ನು ವಿಸ್ತರಿಸುವಂತೆ ನ್ಯಾಯಪೀಠವು ಎನ್ ಟಿ ಎ ಗೆ ಸೂಚಿಸಿದೆ.
‘‘ ಒ ಎಂ ಆರ್ ಶೀಟ್ ಗಳನ್ನು ಒದಗಿಸಲು ಕಾಲಾನುಕ್ರಮಣಿಕೆಯಿದೆಯೇ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ಈ ಬಗ್ಗೆ ಎನ್ ಟಿ ಎ ನಿರ್ದೇಶನಗಳನ್ನು ಕೇಳಿ ಪಡೆಯಲಿ’’ ಎಂದು ನ್ಯಾಯಪೀಠ ಗಮನಸೆಳೆದಿದೆ.
ಆಲಿಕೆಯ ಸಂದರ್ಭದಲ್ಲಿ ನ್ಯಾಯಾಲಯವು ಕೋಚಿಂಗ್ ಕೇಂದ್ರಗಳನ್ನು ಕೂಡಾ ತರಾಟೆಗೆ ತೆಗೆದುಕೊಂಡಿದ್ದು, ನೀಟ್ ಪರೀಕ್ಷೆಯ ವಿಷಯದಲ್ಲಿ ಅವುಗಳಿಗೆ ಯಾವುದೇ ಪಾತ್ರವಿಲ್ಲವೆಂದು ಸ್ಪಷ್ಟಪಡಿಸಿದೆ.
ಕೋಚಿಂಗ್ ಸೆಂಟರ್ (ಪರೀಕ್ಷಾ ತರಬೇತಿ ಕೇಂದ್ರ)ಗಳು ನೀಟ್ ಪರೀಕ್ಷೆಯಲ್ಲಿ ಯಾವುದೇ ಪಾತ್ರವಿಲ್ಲ. ವಿದ್ಯಾರ್ಥಿಗಳನ್ನು ತರಬೇತುಗೊಳಿಸುವ ಅವರು ಪೂರ್ಣಗೊಳಿಸಿದ ಬಳಿಕ ವಿಷಯ ಅಲ್ಲಿಗೆ ಮುಕ್ತಾಯವಾಗುತ್ತದೆ. ಕೇಂದ್ರ ಸರಕಾರವು ಮಾಡಲಿರುವ ಕೆಲಸಗಳ ಮೇಲ್ವಿಚಾರಣೆ ವಹಿಸುವ ಅಧಿಕಾರವನ್ನು ಅವುಗಳಿಗೆ ನೀಡಲಾಗಿಲ್ಲ’’ ಎಂದು ನ್ಯಾಯಮೂರ್ತಿ ಭಟ್ಟಿ ತಿಳಿಸಿದ್ದಾರೆ.