ಉತ್ತರ ಪ್ರದೇಶದಲ್ಲಿ ಮೀಸಲು ಹುದ್ದೆಗಳಿಗೆ ನೇಮಕಾತಿ ವೇಳೆ ಪರಿಶಿಷ್ಟ ಜಾತಿ, ವರ್ಗ, ಒಬಿಸಿ ಅಭ್ಯರ್ಥಿಗಳ ಕುರಿತಂತೆ ತಾರತಮ್ಯ: ಸಿಎಂ ಆದಿತ್ಯನಾಥ್ ಗೆ ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್ ಪತ್ರ
ಅನುಪ್ರಿಯಾ ಪಟೇಲ್ | PTI
ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿಗಳಲ್ಲಿ ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪಂಗಡಗಳ ಅಭ್ಯರ್ಥಿಗಳ ಕುರಿತಂತೆ ತಾರತಮ್ಯ ನಡೆಸಲಾಗುತ್ತಿದೆ ಎಂದು ದೂರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವೆ ಅನುಪ್ರಿಯಾ ಪಟೇಲ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ. ಅಪ್ನಾ ದಲ್ ಮುುಖ್ಯಸ್ಥೆಯಾಗಿರುವ ಪಟೇಲ್ ಅವರು ಎನ್‌ಡಿಎ ಭಾಗವಾಗಿದ್ದಾರೆ.
ಉತ್ತರ ಪ್ರದೇಶದಲ್ಲಿ ಎನ್‌ಡಿಎ ಮತ್ತು ಅದರ ಮಿತ್ರ ಪಕ್ಷಗಳ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬುದು ಅನುಪ್ರಿಯಾ ಪಟೇಲ್ ಅವರ ಪತ್ರದಿಂದ ತಿಳಿದು ಬರುತ್ತಿದೆ.
“ಎನ್‌ಡಿಎ ಸರ್ಕಾರವು ಕೇಂದ್ರೀಯ ವಿದ್ಯಾಲಯಗಳು, ನವೋದಯ ವಿದ್ಯಾಲಯಗಳು, ಸೈನಿಕ ಶಾಲೆಗಳ ದಾಖಲಾತಿಗಾಗಿ ಮತ್ತು ನೀಟ್ ಪರೀಕ್ಷೆಯಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಒದಗಿಸಿದೆ. ಆದರೆ ಇತರ ಹಿಂದುಳಿದ ವರ್ಗಗಳ ಮತ್ತು ಎಸ್‌ಸಿ ಎಸ್‌ಟಿ ಸಮುದಾಯಗಳ ಅಭ್ಯರ್ಥಿಗಳು ನನ್ನನ್ನು ಸಂಪರ್ಕಿಸಿ ಸಂದರ್ಶನ ಆಧಾರಿತ ಪ್ರಕ್ರಿಯೆಯ ಮೂಲಕ ನಡೆಯುವ ನೇಮಕಾತಿಯ ಹುದ್ದೆಗಳಿಗೆ ತಾವು ಸೂಕ್ತರಲ್ಲ ಎಂದು ಹೇಳಲಾಗುತ್ತಿದೆ ಎಂದು ದೂರುತ್ತಿದ್ದಾರೆ. ನಂತರ ಈ ಹುದ್ದೆಗಳನ್ನು ಸಾಮಾನ್ಯ ಎಂದು ಘೋಷಿಸಲಾಗುತ್ತಿದೆ ಎಂದು ಶುಕ್ರವಾರ ಬರೆದ ಪತ್ರದಲ್ಲಿ ಸಚಿವೆ ಹೇಳಿದ್ದಾರೆ.
ಹೀಗಿರುವಾಗ ಇಂತಹ ಹುದ್ದೆಗಳನ್ನು ಮೀಸಲಾತಿಯಿಂದ ಹೊರಗಿಡುವ ಬದಲು ಹಲವು ಸುತ್ತುಗಳ ಸಂದರ್ಶನ ನಡೆಸಿ ಅರ್ಹರ ನೇಮಕಾತಿ ನಡೆಸಬೇಕೆಂದು ಅವರು ಕೋರಿದ್ದಾರೆ.