×
Ad

1966ರ ಈ ದಿನ: ಇಂದಿರಾಗಾಂಧಿ ದೇಶದ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದದ್ದು ಹೇಗೆ ಗೊತ್ತೇ?

Update: 2026-01-19 08:10 IST

ಇಂದಿರಾ ಗಾಂಧಿ PC: x.com/_think_it

ಹೊಸದಿಲ್ಲಿ: ಭಾರತದ ಪ್ರಥಮ ಮಹಿಳಾ ಪ್ರಧಾನಿಯಾಗಿ 1966ರ ಜನವರಿ 19ರಂದು 48 ವರ್ಷದ ಇಂದಿರಾಗಾಂಧಿ ಆಯ್ಕೆಯಾದರು. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆ ಅತ್ಯಂತ ಕುತೂಹಲಕಾರಿಯಾಗಿತ್ತು. ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಕಾಂಗ್ರೆಸ್ ಸಂಸದೀಯ ಪಕ್ಷವು ತುರುಸಿನ ಸ್ಪರ್ಧೆಯ ಮೂಲಕ ಹೊಸ ನಾಯಕಿಯನ್ನು ಆಯ್ಕೆ ಮಾಡಿತ್ತು. ಸುಮಾರು ನಾಲ್ಕು ಗಂಟೆಗಳ ನಾಟಕೀಯ ಬೆಳವಣಿಗೆಗಳ ಬಳಿಕ ಇಂದಿರಾಗಾಂಧಿ ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ನಾಯಕಿಯಾಗಿ ಆಯ್ಕೆಯಾಗಿ, ದೇಶದ ಮೊದಲ ಮಹಿಳಾ ಪ್ರಧಾನಿಯಾಗುವ ಅವಕಾಶ ಪಡೆದರು.

ಇಂದಿರಾಗಾಂಧಿ ಸೆಂಟ್ರಲ್ ಹಾಲ್ ಪ್ರವೇಶಿಸುತ್ತಿದ್ದಂತೆ ಹರ್ಷೋದ್ಗಾರಗಳಿಂದ ಸ್ವಾಗತಿಸಲಾಯಿತು. ಶ್ವೇತವರ್ಣದ ಸೀರೆ ಮತ್ತು ತಿಳಿ ಕಂದು ಬಣ್ಣದ ಶಾಲು ಧರಿಸಿದ್ದ ಅವರನ್ನು ಚುನಾವಣಾಧಿಕಾರಿ,

“ಶ್ರೀಮತಿ ಗಾಂಧಿ ಆಯ್ಕೆಯಾಗಿರುವುದನ್ನು ನಾನು ಘೋಷಿಸುತ್ತಿದ್ದೇನೆ” ಎಂದು ಪ್ರಕಟಿಸುತ್ತಿದ್ದಂತೆ ಇಡೀ ಸಭಾಂಗಣದಲ್ಲಿ ಹರ್ಷೋದ್ಗಾರಗಳು ಮೊಳಗಿದವು. ಇದು ಕೇವಲ ವೈಯಕ್ತಿಕ ಸಾಧನೆಯಷ್ಟೇ ಅಲ್ಲ; ಉತ್ತರಾಧಿಕಾರತ್ವದ ಹೋರಾಟ ನಡೆಯುತ್ತಿದ್ದ ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿ ಮಹತ್ವದ ತಿರುವಾಗಿತ್ತು.

ಲಾಲ್ ಬಹದ್ದೂರ್ ಶಾಸ್ತ್ರಿಯವರು 1966ರ ಜನವರಿಯಲ್ಲಿ ತಾಷ್ಕೆಂಟ್ ನಲ್ಲಿ ಹಠಾತ್ತನೆ ನಿಧನರಾದ ಬಳಿಕ, ಗುಲ್ಜಾರಿಲಾಲ್ ನಂದಾ ಹಂಗಾಮಿ ಪ್ರಧಾನಿಯಾಗಿ ನೇಮಕಗೊಂಡಿದ್ದರು. ಈ ಸಂದರ್ಭದಲ್ಲಿ ಇಂದಿರಾಗಾಂಧಿಯವರ ರಾಜಕೀಯ ಪಯಣ ಸುಗಮವಾಗಿರಲಿಲ್ಲ. ಅವರು ದೀರ್ಘಕಾಲ ಕಾಂಗ್ರೆಸ್ ನಾಯಕರ ನೆರಳಿನಲ್ಲೇ ಬೆಳೆದವರಾಗಿದ್ದು, ಶಾಸ್ತ್ರಿ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವರಾಗಿ ಹಾಗೂ 1960ರಲ್ಲಿ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

ಭಾರತದ ಅಂದಿನ 16 ರಾಜ್ಯಗಳ ಪೈಕಿ 11 ರಾಜ್ಯಗಳ ಪ್ರಭಾವಿ ಮುಖ್ಯಮಂತ್ರಿಗಳು ಮತದಾನಕ್ಕೆ ನಾಲ್ಕು ದಿನಗಳ ಮೊದಲು ಇಂದಿರಾಗಾಂಧಿಯವರ ಬೆಂಬಲಕ್ಕೆ ನಿಂತರು. ಮತ್ತೊಬ್ಬ ಸ್ಪರ್ಧಿಯಾಗಿದ್ದ ಗುಲ್ಜಾರಿಲಾಲ್ ನಂದಾ ಈ ಹಂತದಲ್ಲಿ ಕಣದಿಂದ ಹಿಂದೆ ಸರಿದರು. ಆದರೆ ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಸ್ಪರ್ಧೆಯಲ್ಲಿ ಮುಂದುವರಿದರು.

“ನಾನೇಕೆ ಬೇರೆ ಪಕ್ಷ ಕಟ್ಟಬೇಕು? ನಾನು ಅಪ್ಪಟ ಕಾಂಗ್ರೆಸ್ಸಿಗ, ಕಾಂಗ್ರೆಸ್ ನಲ್ಲೇ ಉಳಿಯುತ್ತೇನೆ” ಎಂದು ದೇಸಾಯಿ ಘೋಷಿಸಿದರು. ಈ ಸ್ಪರ್ಧೆ ಭಾರತದ ಸಂಸದೀಯ ಇತಿಹಾಸದಲ್ಲೇ ಅತ್ಯಂತ ತುರುಸಿನ ಸ್ಪರ್ಧೆಯಾಗಿ ಪರಿಣಮಿಸಿತು.

ಸ್ಪರ್ಧೆ ಇಲ್ಲದೇ ಪ್ರಧಾನಿಯನ್ನು ಆಯ್ಕೆ ಮಾಡಲು ಅಂದಿನ ಕಾಂಗ್ರೆಸ್ ಅಧ್ಯಕ್ಷ ಕೆ. ಕಾಮರಾಜ್ ಶತಪ್ರಯತ್ನ ಮಾಡಿದರು. ಆದರೆ ನಿರ್ದಿಷ್ಟ ಅಭ್ಯರ್ಥಿಯ ಬೆಂಬಲಕ್ಕೆ ಒತ್ತಡವಿದೆ ಎಂಬ ಕಾರಣ ನೀಡಿ, ಚುನಾವಣೆಯ ಮೂಲಕವೇ ಆಯ್ಕೆ ನಡೆಯಬೇಕು ಎಂದು ಮೊರಾರ್ಜಿ ದೇಸಾಯಿ ಪಟ್ಟು ಹಿಡಿದರು. ಪ್ರಧಾನಿ ಆಯ್ಕೆಗೆ ಮುಖ್ಯಮಂತ್ರಿಗಳಿಗೆ ಯಾವುದೇ ಪಾತ್ರವಿಲ್ಲ ಎಂದು ಅವರು ವಾದಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಮರಾಜ್, ಒಕ್ಕೂಟ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿಗಳ ಅಭಿಪ್ರಾಯಕ್ಕೂ ಮಹತ್ವವಿದೆ ಎಂದು ಪ್ರತಿಪಾದಿಸಿದರು.

ಚುನಾವಣೆಯ ಮುನ್ನದಿನ ದೇಸಾಯಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಸದರನ್ನು “ಮೂಲ ಜಾನುವಾರುಗಳು” ಎಂದು ಕರೆದದ್ದು ವಿವಾದಕ್ಕೆ ಕಾರಣವಾಯಿತು. ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಿಂದ ಆಯ್ಕೆಯಾದ ಸಂಸದರನ್ನು ಭೇಟಿ ಮಾಡಿದರು. ಈ ನಡುವೆ ಕಾಮರಾಜ್, ದೇಸಾಯಿ ಹಾಗೂ ಇಂದಿರಾಗಾಂಧಿ ನಿವಾಸಗಳ ಮುಂದೆ ಪತ್ರಕರ್ತರು ಠಿಕಾಣಿ ಹೂಡಿದ್ದರು.

1966ರ ಜನವರಿ 19ರಂದು ದಾಖಲೆಯ 526 ಮಂದಿ ಸಂಸದರು ಮತ ಚಲಾಯಿಸಿದರು. ಕೆಂಗಲ್ ಹನುಮಂತಯ್ಯ ಅವರು ಮೊರಾರ್ಜಿ ದೇಸಾಯಿ ಹೆಸರನ್ನು ಪ್ರಸ್ತಾಪಿಸಿದರೆ, ಗುಲ್ಜಾರಿಲಾಲ್ ನಂದಾ ಇಂದಿರಾಗಾಂಧಿ ಹೆಸರನ್ನು ಪ್ರಸ್ತಾಪಿಸಿದರು. ನೀಲಂ ಸಂಜೀವ ರೆಡ್ಡಿ ಅನುಮೋದಿಸಿದರು. ಮಧ್ಯಾಹ್ನ 3 ಗಂಟೆಗೆ ಚುನಾವಣಾಧಿಕಾರಿ,

“ನಾನು ಶ್ರೀಮತಿ ಇಂದಿರಾಗಾಂಧಿ ಆಯ್ಕೆಯಾಗಿರುವುದನ್ನು ಘೋಷಿಸುತ್ತಿದ್ದೇನೆ” ಎಂದು ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News