ಹರ್ಯಾಣ | ಶಾಲಾ ಪ್ರಾಂಶುಪಾಲರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ ಇಬ್ಬರು ವಿದ್ಯಾರ್ಥಿಗಳು
Photo | NDTV
ಚಂಡೀಗಢ: ಹರ್ಯಾಣದ ಹಿಸಾರ್‌ನ ಬಾಸ್ ಗ್ರಾಮದಲ್ಲಿ ಕ್ಷೌರ ಮಾಡಿಸಿಕೊಳ್ಳಲು ಮತ್ತು ಶಾಲೆಯ ಶಿಸ್ತನ್ನು ಪಾಲಿಸುವಂತೆ ಹೇಳಿದ ಪ್ರಾಂಶುಪಾಲರನ್ನು 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಚೂರಿಯಿಂದ ಇರಿದು ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಜಗ್ಬೀರ್ ಸಿಂಗ್ ಪನ್ನು(50) ಕೊಲೆಯಾದ ಪ್ರಾಂಶುಪಾಲರು. ಬಾಸ್ ಗ್ರಾಮದ ʼಕರ್ತಾರ್ ಮೆಮೊರಿಯಲ್ ಸೀನಿಯರ್ ಸೆಕಂಡರಿ ಶಾಲೆʼಯಲ್ಲಿ ಘಟನೆ ನಡೆದಿದೆ. ಜಗ್ಬೀರ್ ಸಿಂಗ್ ಶಾಲೆಯ ನಿರ್ದೇಶಕರು ಕೂಡ ಆಗಿದ್ದರು.
ಶಾಲೆಗೆ ಹೇರ್ ಕಟ್ ಮಾಡಿಸಿಕೊಂಡು ಬರುವಂತೆ ಮತ್ತು ಶಾಲಾ ನಿಯಮಗಳನ್ನು ಪಾಲಿಸುವಂತೆ ಜಗ್ಬೀರ್ ಸಿಂಗ್ ವಿದ್ಯಾರ್ಥಿಗಳಿಗೆ ಪದೇ ಪದೇ ಹೇಳುತ್ತಿದ್ದರು. ಇದರಿಂದ ಕೋಪಗೊಂಡ ವಿದ್ಯಾರ್ಥಿಗಳು ಜಗ್ಬೀರ್ ಸಿಂಗ್ ಮೇಲೆ ಚೂರಿಯಿಂದ ಇರಿದು ಪರಾರಿಯಾಗಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕೃತ್ಯಕ್ಕೆ ಬಳಸಿದ ಚೂರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಾಲಾ ಆವರಣದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಪ್ರಾಂಶುಪಾಲರಿಗೆ ಇರಿದ ಬಳಿಕ ಇಬ್ಬರು ವಿದ್ಯಾರ್ಥಿಗಳು ಸ್ಥಳದಿಂದ ಪರಾರಿಯಾಗುತ್ತಿರುವುದು ಕಂಡು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಂಸಿ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಯಶವರ್ಧನ್, ಪ್ರಾಂಶುಪಾಲರು ಶಿಸ್ತನ್ನು ಕಾಪಾಡುವಂತೆ ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳುತ್ತಿದ್ದರು. ಅವರ ನಡುವೆ ವೈಯಕ್ತಿಕ ದ್ವೇಷವಿತ್ತಾ ಎಂಬ ಬಗ್ಗೆ ತನಿಖೆ ನಡೆಸಲಿದ್ದೇವೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.