ಇಂದು ಮಣಿಪುರಕ್ಕೆ 21 ಸದಸ್ಯರ ವಿರೋಧ ಪಕ್ಷದ ನಿಯೋಗ ಭೇಟಿ; ರಾಜಸ್ಥಾನ, ಪಶ್ಚಿಮಬಂಗಾಳ ಉಲ್ಲೇಖಿಸಿ ಬಿಜೆಪಿ ಟೀಕೆ
ಹೊಸದಿಲ್ಲಿ:ಸುಮಾರು ಮೂರು ತಿಂಗಳಿನಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿರುವ ಈಶಾನ್ಯ ರಾಜ್ಯದ ನೈಜ ಪರಿಸ್ಥಿತಿಯನ್ನು ಪರಿಶೀಲಿಸಲು 21 ಸದಸ್ಯರ ವಿರೋಧ ಪಕ್ಷದ ನಿಯೋಗ ಇಂದು ಮಣಿಪುರಕ್ಕೆ ಭೇಟಿ ನೀಡಲಿದೆ.
ನಿಯೋಗದಲ್ಲಿ ಕಾಂಗ್ರೆಸ್ ನಾಯಕರಾದ ಅಧೀರ್ ರಂಜನ್ ಚೌಧರಿ ಹಾಗೂ ಗೌರವ್ ಗೊಗೊಯ್, ತೃಣಮೂಲದ ಸುಶ್ಮಿತಾ ದೇವ್, ಡಿಎಂಕೆಯ ಕನಿಮೋಳಿ, ಆರ್ಜೆಡಿಯ ಮನೋಜ್ ಕುಮಾರ್ ಝಾ ಹಾಗೂ ಜೆಡಿಯು ಮುಖ್ಯಸ್ಥ ರಾಜೀವ್ ರಂಜನ್ (ಲಾಲನ್) ಸಿಂಗ್ ಸೇರಿದಂತೆ ಇತರರು ಇದ್ದಾರೆ. ವಿಪಕ್ಷಗಳು INDIA ಒಕ್ಕೂಟವನ್ನು ರಚಿಸಿಕೊಂಡ ನಂತರ ಇದು ರಾಜ್ಯಕ್ಕೆ ಅವರ ಮೊದಲ ಭೇಟಿಯಾಗಿದೆ.
ಎರಡು ದಿನಗಳ ಭೇಟಿಯಲ್ಲಿರುವ ವಿಪಕ್ಷ ನಾಯಕರು ಮಧ್ಯಾಹ್ನದ ಸುಮಾರಿಗೆ ಇಂಫಾಲ್ಗೆ ಬಂದಿಳಿದು ನೇರವಾಗಿ ಚುರಾಚಂದಪುರಕ್ಕೆ ಹೆಲಿಕಾಪ್ಟರ್ ನಲ್ಲಿ ತೆರಳಲಿದ್ದಾರೆ ಅಲ್ಲಿ ಕುಕಿ ಬುಡಕಟ್ಟು ಮುಖಂಡರು, ನಾಗರಿಕ ಸಮಾಜ ಹಾಗೂ ಮಹಿಳಾ ಗುಂಪುಗಳನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿಯೋಗವು ಪರಿಹಾರ ಶಿಬಿರಗಳಿಗೆ ಭೇಟಿ ನೀಡಲಿದೆ ಹಾಗೂ ಇಂಫಾಲ್ ಗೆ ಹಿಂದಿರುಗುವ ಮೊದಲು ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಲಿದೆ, ಅಲ್ಲಿ ಅವರು ಮೈತೇಯಿ ಸಮುದಾಯದ ಸದಸ್ಯರನ್ನು ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ವಿರೋಧ ಪಕ್ಷದ ಸಂಸದರನ್ನು ತರಾಟೆಗೆ ತೆಗೆದುಕೊಂಡಿತು. ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ಪುನರುಚ್ಚರಿಸಿದೆ.
" ಈ I.N.D.I.A. ಮಣಿಪುರದಿಂದ ಹಿಂದಿರುಗಿ ಬಂದ ನಂತರ ಅಧೀರ್ ರಂಜನ್ ಚೌಧರಿ ಅವರ ರಾಜ್ಯ ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ಬೆಂಬಲಿಸುತ್ತದೆಯೇ ಎಂದು ನಾನು ಕೇಳಲು ಬಯಸುತ್ತೇನೆ. I.N.D.I.A. ದ ಈ 20 ಸಂಸದರು ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದ ಬಗ್ಗೆ ವರದಿಗಳನ್ನು ನೀಡುತ್ತಾರೆಯೇ? '' ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಪ್ರಶ್ನಿಸಿದರು.