ಜಮ್ಮು ಕಾಶ್ಮೀರ | ಕಂದಕಕ್ಕೆ ಉರುಳಿಬಿದ್ದ ಸೇನಾ ವಾಹನ : ಮೂವರು ಸಿಆರ್‌ಪಿಎಫ್ ಯೋಧರು ಮೃತ್ಯು, ಹಲವರಿಗೆ ಗಾಯ
Photo credit: indiatoday.in
ಹೊಸದಿಲ್ಲಿ : ಜಮ್ಮುಕಾಶ್ಮೀರದ ಉಧಮ್‌ಪುರ ಜಿಲ್ಲೆಯ ಬಸಂತ್‌ಗಢ ಪ್ರದೇಶದ ಕಾಂಡ್ವಾ ಬಳಿ ಸಿಆರ್‌ಪಿಎಫ್ ವಾಹನ ಕಂದಕಕ್ಕೆ ಉರುಳಿ ಬಿದ್ದು ಮೂವರು ಕೇಂದ್ರ ಮೀಸಲು ಪಡೆ ಸಿಬ್ಬಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಉಧಮ್‌ಪುರ ಹೆಚ್ಚುವರಿ ಎಸ್ಪಿ ಸಂದೀಪ್ ಭಟ್ ಈ ಕುರಿತು ಪ್ರತಿಕ್ರಿಯಿಸಿ, ಬಸಂತ್‌ಗಢದಿಂದ ಕಾರ್ಯಾಚರಣೆ ಮುಗಿಸಿ ಸಿಬ್ಬಂದಿ ಹಿಂತಿರುಗುತ್ತಿದ್ದಾಗ ಕಡ್ವಾ ಪ್ರದೇಶದಲ್ಲಿ ಬೆಳಿಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದೆ. ಸೇನಾ ವಾಹನ ಕಂದಕಕ್ಕೆ ಉರುಳಿ ಬಿದ್ದಾಗ ಒಟ್ಟು 23 ಸಿಆರ್‌ಪಿಎಫ್ ಸಿಬ್ಬಂದಿ ಅದರಲ್ಲಿದ್ದರು. ವಾಹನವು ಸೇನೆಯ 187ನೇ ಬೆಟಾಲಿಯನ್‌ಗೆ ಸೇರಿದೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲಾ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಘಟನೆ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ʼಉಧಮ್‌ಪುರ ಬಳಿ ಅಪಘಾತದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಹುತಾತ್ಮರಾಗಿರುವುದರಿಂದ ದುಃಖಿತನಾಗಿದ್ದೇನೆ. ರಾಷ್ಟ್ರಕ್ಕೆ ಅವರ ಅನುಕರಣೀಯ ಸೇವೆಯನ್ನು ನಾವು ಎಂದಿಗೂ ಮರೆಯುವುದಿಲ್ಲ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿʼ ಎಂದು ಹೇಳಿದ್ದಾರೆ.