ವಿಶ್ವಪರಂಪರೆಯ ಪಟ್ಟಿ ಸೇರಲು 3500 ವರ್ಷ ಹಳೆಯ ಮಿನಾರ್ ಸಜ್ಜು
PC: x.com/DeccanChronicle
ಹೈದರಾಬಾದ್: ತೆಲಂಗಾಣದ ನಾರಾಯಣಪೇಟೆ ಜಿಲ್ಲೆಯ ಮುದುಮಲ್ ನಲ್ಲಿರುವ 3500 ವರ್ಷ ಹಳೆಯ ಸ್ತಂಭಗೋಪುರ (ಮಿನಾರ್) ಕೊನೆಗೂ ಯುನೆಸ್ಕೊದ ವಿಶ್ವ ಪರಂಪರೆಯ ತಾಣಗಳ ತಾತ್ಕಾಲಿಕ ಪಟ್ಟಿ ಸೇರಿದೆ. ವಿಶ್ವಪರಂಪರೆಯ ತಾಣ ಎಂಬ ಗೌರವ ಪಡೆಯಲು ಇನ್ನು ಒಂದು ಹೆಜ್ಜೆಯಷ್ಟೇ ಬಾಕಿ.
ಕೇಂದ್ರ ಸರ್ಕಾರ ಈ ಶಿಲಾಸ್ತಂಭದ ಬಗ್ಗೆ ಮಾಹಿತಿಗಳನ್ನು ಫೆಬ್ರುವರಿ 11ರಂದು ನಡೆದ ಯುನೆಸ್ಕೊ ವಿಶ್ವ ಪರಂಪರೆಯ ಸಮಾವೇಶದಲ್ಲಿ ಒದಗಿಸಿದೆ. ವಿಶ್ವ ಪರಂಪರೆಯ ತಾಣ ಎಂಬ ಗೌರವ ಪಡೆಯಲು ಯುನೆಸ್ಕೊಗೆ ಭಾರತ ಸಲ್ಲಿಸಿದ ಆರು ತಾಣಗಳ ಪೈಕಿ ಮುದುಮಲ್ ಅವಶೇಷಗಳು ಕೂಡಾ ಸೇರಿವೆ.
ಆ ಕಾಲಘಟ್ಟದಲ್ಲಿ ಅಂದರೆ ಕ್ರಿಸ್ತಪೂರ್ವದಲ್ಲೂ ಜನತೆ ಖಗೋಳಜ್ಞಾನವನ್ನು ಹೊಂದಿದ್ದರು ಎನ್ನುವುದಕ್ಕೆ ಇದು ಉತ್ತಮ ನಿದರ್ಶನ ಎಂದು ತಜ್ಞರು ಹೇಳಿದ್ದಾರೆ. ಇದೇ ವೇಳೆ ವಿಶ್ವದ ಹಲವು ಕಡೆಗಳಲ್ಲಿ ಈ ಬಗೆಯ ಸ್ತಂಭಗೋಪುರಗಳು ಕಂಡುಬಂದಿದ್ದರೂ, ಇವುಗಳ ನೈಜ ಉದ್ದೇಶ ತಿಳಿದಿರಲಿಲ್ಲ. ಆದರೆ ಈ ಎತ್ತರದ ಗೋಪುರಗಳನ್ನು ಆಕಾಶದ ಅಥವಾ ಘಟನಾವಳಿಗಳ ಕುರುಹುಗಳಾಗಿ ನಿರ್ಮಿಸಲಾಗಿತ್ತು ಎನ್ನಲಾಗಿದೆ. ಆದರೆ ಇವು ಬಲಿದಾನದ ತಾಣಗಳು ಎಂದೂ ಕೆಲವರು ಹೇಳುತ್ತಾರೆ.
"ಮುದುಮಲ್ ಗೋಪುರಗಳು ಇತರ ಪ್ರಖ್ಯಾತ ತಾಣಗಳ ಜತೆ ಸಾಮ್ಯವನ್ನು ಹೊಂದಿರುವುದು ಮಾತ್ರವಲ್ಲದೇ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿದೆ. ಈ ಗೋಪುರಗಳ ನಿಖರವಾದ ಸಮತೋಲನವು ಗಣಿತಶಾಸ್ತ್ರ ಮತ್ತು ಖಗೋಳಶಾಶ್ತ್ರದ ಬಗ್ಗೆ ಆಳವಾದ ಜ್ಞಾನ ಹೊಂದಿರುವುದನ್ನು ಬಿಂಬಿಸುತ್ತದೆ ಹಾಗೂ ಇವು ಅತ್ಯಪೂರ್ವ ಪ್ರಾಚೀನ ಖಗೋಳ ತಾಣ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ" ಎಂದು ಕೇಂದ್ರದ ವಿವರಣೆಯಲ್ಲಿ ಹೇಳಲಾಗಿದೆ. ಈ ಮಿನಾರ್ ಗಳ ಸುತ್ತಮುತ್ತ ನಡೆಯುತ್ತಿದ್ದ ಸಾಂಸ್ಕೃತಿಕ ಚಟುವಟಿಕೆಗಳು ಸ್ಥಳೀಯ ಸಮುದಾಯದ ಜೀವನ ವಿಧಾನವನ್ನು ತಿಳಿಸುತ್ತವೆ ಎಂದು ವಿವರಿಸಲಾಗಿದೆ.